ಗಂಗಾವತಿ: ಎಸ್ಎಸ್ಎಲ್‌ಸಿ (SSLC Exam) ಪರೀಕ್ಷೆಯ ಫಲಿತಾಂಶದ ಮರುಮೌಲ್ಯಮಾಪನಕ್ಕೆ (Re-evaluation) ಕಳುಹಿಸಿದ ಬಳಿಕ ಇದೀಗ ಪರೀಕ್ಷಾ ಮಂಡಳಿ ಫಲಿತಾಂಶ (Result) ನೀಡಿದ್ದು, ಗಂಗಾವತಿಯ ವಿದ್ಯಾರ್ಥಿನಿಯರಿಗೆ ರಾಜ್ಯ ಮಟ್ಟದಲ್ಲಿ ನಾಲ್ಕನೇ ಮತ್ತು ಏಳನೇ ರ‍್ಯಾಂಕ್ (Rank) ಲಭಿಸಿದೆ.
ಗಂಗಾವತಿ ನಗರದಲ್ಲಿರುವ ಲಿಟಲ್ ಹಾರ್ಟ್ ಶಾಲೆಯ ಸೃಜನ ಇಂದರಗಿ ರಾಜ್ಯಮಟ್ಟದ ನಾಲ್ಕನೇ ರ‍್ಯಾಂಕ್ ಮತ್ತು ವಂದನಾ ಭಂಡಾರ್ಕರ್ ಎಂಬ ವಿದ್ಯಾರ್ಥಿನಿ 7ನೇ ರ‍್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ. ಕಡಿಮೆ ಅಂಕ ಲಭಿಸಿದ ಹಿನ್ನೆಲೆಯಲ್ಲಿ ಈ ಇಬ್ಬರು ವಿದ್ಯಾರ್ಥಿನಿಯರು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು.
2022-23ನೇ ಸಾಲಿನ ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ 625ಕ್ಕೆ 617 ಅಂಕ ಪಡೆದಿದ್ದ ವಿದ್ಯಾರ್ಥಿನಿಯರಾದ ಸೃಜನ ಇಂದರಗಿ ಹಾಗೂ ವಂದನಾ ಭಂಡಾರಕರ್ ಕ್ರಮವಾಗಿ ಇಂಗ್ಲಿಷ್ ಹಾಗೂ ಗಣಿತ ವಿಷಯಗಳನ್ನು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: WTC Final 2023: ಭಾರತ, ಆಸ್ಟ್ರೇಲಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಿದ್ದರ ಹಿಂದಿದೆ ಭಾವುಕ ಕಾರಣ
ಸೃಜನ ಇಂದರಗಿ ಇಂಗ್ಲಿಷ್ ವಿಷಯದಲ್ಲಿ 5 ಅಂಕ, ವಂದನಾ ಭಂಡಾರಕರ್ ಗಣಿತದಲ್ಲಿ 2 ಅಂಕ ಹೆಚ್ಚುವರಿ ಪಡೆದಿದ್ದಾರೆ. ಇದೀಗ ಸೃಜನಾ 625ಕ್ಕೆ 622 ಅಂಕ ಹಾಗೂ ವಂದನಾ 625ಕ್ಕೆ 619 ಅಂಕ ಪಡೆದು ಕ್ರಮವಾಗಿ ರಾಜ್ಯಕ್ಕೆ 4ನೇ ಹಾಗೂ 7ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ ಎಂದು ಶಾಲೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ ಹಾಗೂ ಮುಖ್ಯಶಿಕ್ಷಕಿ ಪ್ರಿಯಾಕುಮಾರಿ ತಿಳಿಸಿದ್ದಾರೆ.