Site icon Vistara News

Koppala News: ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಸೂಚನೆ

Koppal ZP Chief Executive Officer Rahul Ratnam Pandey presided over the progress review meeting

ಕೊಪ್ಪಳ: ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ (Drinking water) ಕೈಗೊಂಡ ಕ್ರಮಗಳು ಹಾಗೂ ಜೆ.ಜೆ.ಎಂ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ (progress review meeting) ನಡೆಯಿತು.

ಈ ವೇಳೆ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಬಾಡಿಗೆ ಆಧಾರದ ಮೇಲೆ 16 ಖಾಸಗಿ ಕೊಳವೆ ಬಾವಿಗಳನ್ನು ತೆಗೆದುಕೊಂಡು 14 ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.
ಕನಕಗಿರಿ ತಾಲೂಕಿನ 4 ಗ್ರಾಮಗಳಲ್ಲಿನ ಕೊಳವೆ ಬಾವಿ ನೀರನ್ನು ಪರೀಕ್ಷಿಸಿದಾಗ, ಕುಡಿಯಲು ಯೋಗ್ಯವಿಲ್ಲವೆಂದು ವರದಿ ಬಂದಿರುವ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾದ ಈ ಕೊಳವೆ ಬಾವಿಗಳ ನೀರನ್ನು ಸಾರ್ವಜನಿಕರಿಗೆ ಪೂರೈಕೆಯಾಗದಂತೆ ನೋಡಿಕೊಳ್ಳಬೇಕು. ಈ ಗ್ರಾಮಗಳಿಗೆ ಟ್ಯಾಂಕರ್‌ ಮುಖಾಂತರವೇ ನಿರಂತರ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: Instagram Down: ಭಾರತದಲ್ಲಿ ಹಲವು ಬಳಕೆದಾರರಿಗೆ ಇನ್‌ಸ್ಟಾಗ್ರಾಮ್ ಡೌನ್!

ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ದುರಸ್ತಿಯಲ್ಲಿರುವ ಎಲ್ಲಾ ಘಟಕಗಳನ್ನು ಸರಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರದಿಂದ ಅನುದಾನ ಬಿಡುಗಡೆಯಾದ ತಕ್ಷಣ ದುರಸ್ತಿ ಕಾಮಗಾರಿಯನ್ನು ಕೈಗೊಂಡು ಶುದ್ಧ ಕುಡಿಯುವ ನೀರನ ಘಟಕಗಳ ಮರು ಸ್ಥಾಪನೆ ಕ್ರಮ ವಹಿಸಬೇಕು. ಈಗಾಗಲೇ ಸರ್ಕಾರದಿಂದ ತುರ್ತು ಕುಡಿಯುವ ನೀರಿನ ಅನುದಾನ ಒಂದು ಕೋಟಿ ರೂ. ಬಿಡುಗಡೆ ಮಾಡಿದ್ದು, ಆ ಅನುದಾನದಲ್ಲಿ ಕಳೆದ ಮೂರು ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿರುವ ಗ್ರಾಮಗಳಲ್ಲಿ 97 ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ. ಕಳೆದ ಎರಡು ತಿಂಗಳಲ್ಲಿ 902 ನೀರಿನ ಮೇಲ್ತೊಟ್ಟಿ (ಓ.ಎಚ್.ಟಿ)ಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದರು.

ಜಿಲ್ಲೆಯ ಒಟ್ಟು 153 ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಐದು ಮಹಿಳೆಯರನ್ನು ಗುರುತಿಸಿ, ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ ಮಾಡಲು ತರಬೇತಿ ನೀಡಲಾಗುತ್ತಿದೆ. ಈಗಾಗಲೇ 145 ಗ್ರಾಮ ಪಂಚಾಯಿತಿ ಮಹಿಳೆಯರಿಗೆ ತರಬೇತಿ ಕಾರ್ಯಕ್ರಮ ಪೂರ್ಣಗೊಂಡಿದ್ದು, ಬಾಕಿ ಇರುವ ಗ್ರಾಮ ಪಂಚಾಯತಿ ಮಹಿಳೆಯರಿಗೆ ತರಬೇತಿ ನೀಡಲು ಕೂಡಲೇ ಕ್ರಮ ವಹಿಸಬೇಕು. ಜಿಲ್ಲೆಯ ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನೀರಗಂಟಿ (ವಾಟರ್ ಮ್ಯಾನ್)ಗಳಿಗೆ ನೀರು ಸರಬರಾಜು ಕುರಿತು ತಾಂತ್ರಿಕ ತರಬೇತಿ ನೀಡಲು ವೇಳಾಪಟ್ಟಿ ತಯಾರಿಸಲಾಗಿದ್ದು, ಅದರಂತೆ ತಾಲೂಕುವಾರು ತರಬೇತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: Weather Report : ಇನ್ನೈದು ದಿನ ಮಳೆಮಯ; ಬೆಂಗಳೂರಲ್ಲಿ ಮಾಯ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕೊಪ್ಪಳ ವಿಭಾಗದ ಕಾರ್ಯಪಾಲಕ ಅಭಿಯಂತರ ಮಹೇಶ ಶಾಸ್ತ್ರಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 673 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, 128 ಘಟಕಗಳು ದುರಸ್ತಿಯಲ್ಲಿರುತ್ತವೆ ಹಾಗೂ 18 ಘಟಕಗಳು ಸಂಪೂರ್ಣವಾಗಿ ಸ್ಥಗಿತಗೊಂಡಿರುತ್ತವೆ. ಕಳೆದ ಎರಡು ತಿಂಗಳಲ್ಲಿ 30 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸಿದ್ದು, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಪ್ರಸ್ತುತ 527 ಘಟಕಗಳು ಚಾಲ್ತಿಯಲ್ಲಿರುತ್ತವೆ.

ಬಾಕಿ ಉಳಿದ ದುರಸ್ತಿಯಲ್ಲಿರುವ 146 ಘಟಕಗಳಲ್ಲಿ ದೊಡ್ಡಪ್ರಮಾಣದ (ರೂ. ಒಂದು ಲಕ್ಷಕ್ಕಿಂತ ಹೆಚ್ಚಿನ) ದುರಸ್ತಿಗಳು ಇರುವುದರಿಂದ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದ ನಂತರ ಕಾಮಗಾರಿ ಕೈಗೊಳ್ಳಲಾಗುವುದು. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ನೀರಿನ ಗುಣಮಟ್ಟ ಪರೀಕ್ಷೆ ಮಾಡಲು ಎಫ್.ಟಿ.ಕೆ ಕಿಟ್ ಮತ್ತು ಎಚ್2ಎಸ್ ವೈಲ್ಸ್‌ಗಳನ್ನು ಈಗಾಗಲೇ ಜಮ್ ಪೋರ್ಟಲ್ ನಲ್ಲಿ ಖರೀದಿ ಮಾಡಲಾಗಿದ್ದು, 20 ದಿನದೊಳಗಾಗಿ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಸರಬರಾಜು ಮಾಡಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಜುಲೈ 1ರಂದು ಜರುಗಿದ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ನಿರ್ದೇಶನದ ಪ್ರಕಾರ ಹೋಬಳಿವಾರು 20 ಎಂಜಿನಿಯರುಗಳ ತಂಡವನ್ನು ರಚಿಸಲಾಗಿರುತ್ತದೆ. ಈ ತಂಡಗಳು ಗ್ರಾಮವಾರು ಜೆ.ಜೆ.ಎಂ ಕೆಲಸಗಳ ಪರಿಶೀಲನೆ ನಡೆಸಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮುಂದಿನ ದಿನಗಳಲ್ಲಿ ಪರಿವೀಕ್ಷಣಾ ವರದಿ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಇದನ್ನೂ ಓದಿ: ನಾನು ಬಂದಾಗ ನೀವು ಯಾಕೆ ಇರಲಿಲ್ಲ ಎಂದ ಬಾಸ್​ಗೆ ಈ ಉದ್ಯೋಗಿ ಕೊಟ್ಟ ಉತ್ತರ ಈಗ ಫುಲ್ ವೈರಲ್!

ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಸೇರಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version