ಕುಕನೂರು: ಕೊಪ್ಪಳ ಜಿಲ್ಲೆಯ ಕುಕನೂರು (Kukanur) ತಾಲೂಕಿನ ತಹಸೀಲ್ದಾರ್ ಕಾರ್ಯಾಲಯದ (Tahsildar office) ಒಳಾಂಗಣದ ಪಿಓಪಿಯು ಮಂಗಗಳ (monkeys) ವಾಸಸ್ಥಾನವಾಗಿದೆ.
ಪಟ್ಟಣದಲ್ಲಿರುವ ತಹಸೀಲ್ದಾರ್ ಕಾರ್ಯಾಲಯವು ಬಹಳ ಹಳೆಯ ಕಟ್ಟಡವಾಗಿದ್ದು ಕಟ್ಟಡಕ್ಕೆ ಹೊಂದಿಸಿರುವ ಪಿಓಪಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಮಂಗಗಳು ವಾಸವಾಗಿವೆ.
ಉದುರಿ ಬೀಳುತ್ತಿರುವ ಪಿಓಪಿ ಶೀಟ್‌ಗಳು
ಮಂಗಗಳ ಓಡಾಟದಿಂದ ಚಾವಣಿಗೆ ಹೊಂದಿಸಿರುವ ಪಿಓಪಿ ಶೀಟ್‌ಗಳು ಉದುರಿ ಬೀಳುತ್ತಿದ್ದು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಯದ ವಾತಾವರಣದಲ್ಲಿಯೇ ಕಚೇರಿಯ ಕೆಲಸವನ್ನು ಮುಗಿಸಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಲವು ಬಾರಿ ಪಿಓಪಿ ಶೀಟ್‌ಗಳು ಸಾರ್ವಜಿನಿಕರ ಹಾಗೂ ಅಧಿಕಾರಿಗಳ ಮೇಲೆಯೂ ಬಿದ್ದ ಉದಾಹರಣೆಗಳು ಸಹ ಇವೆ. ಮಂಗಳನ್ನು ಓಡಿಸುವುದಕ್ಕಾಗಿಯೇ ಸದಾ ಕೋಲು ಹಿಡಿದು ಕಾಯಲು ಇಲ್ಲಿ ಒಬ್ಬರು ಕಾಯಂ ಇರುತ್ತಾರೆ.
ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಇತ್ತೀಚೆಗೆ ಸರದಿ ಸಾಲಿನಲ್ಲಿ ನಿಂತಾಗ ನನ್ನ ಪಕ್ಕದಲ್ಲಿಯೇ ಪಿಓಪಿ ಶೀಟ್ ಬಿತ್ತು, ಸ್ಪಲ್ಪದರಲ್ಲಿಯೇ ಮಕ್ಕಳ ಮೇಲೆ ಬೀಳುವುದು ತಪ್ಪಿತು ಎಂದು ಕೆಲಸದ ನಿಮಿತ್ತ ಕಚೇರಿಗೆ ಆಗಮಿಸಿದ್ದ ವೀರಯ್ಯ ವಿ ಹಿರೇಮಠ ಎಂಬುವರು ಹೇಳಿದ್ದಾರೆ.
-ನಾನು ಹೊಸದಾಗಿ ಬಂದು ಎರಡು ದಿನ ಆಗಿದೆ. ಇದರ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಅವರ ಮಾರ್ಗದರ್ಶನದಂತೆ ಆದಷ್ಟು ಬೇಗ ತಾಲೂಕು ಆಡಳಿತ ಕಚೇರಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
-ಎಚ್ ಪ್ರಾಣೇಶ್, ತಹಸೀಲ್ದಾರ್, ಕುಕನೂರು ತಾಲೂಕು