ಗಂಗಾವತಿ: ತಾಲೂಕಿನ ಆನೆಗೊಂದಿ ಹೋಬಳಿಯ ನಾನಾ ಗ್ರಾಮಗಳಲ್ಲಿ ತಲೆ ಎತ್ತಿದ್ದ ನೂರಾರು ಅಕ್ರಮ, ನಿಯಮ ಬಾಹಿರ ರೇಸಾರ್ಟ್ (Resort), ಹೋಂ ಸ್ಟೇಗಳ (Home stay) ಬೃಹತ್ ತೆರವು ಕಾರ್ಯಾಚರಣೆ ಸೋಮವಾರ ನಡೆಯಿತು.
ತೆರವು ಕಾರ್ಯಚರಣೆ ಮಾಡುವ ಉದ್ದೇಶಕ್ಕೆ ಆನೆಗೊಂದಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹತ್ತಾರು ಜೆಸಿಬಿ, ಟಿಪ್ಪರ್ ಸೇರಿದಂತೆ ಸಕಲ ಸಲಕರಣೆ, ಸಿಬ್ಬಂದಿಯನ್ನು ದೊಡ್ಡ ಪ್ರಮಾಣದಲ್ಲಿ ಜಮಾವಣೆ ಮಾಡಲಾಗಿತ್ತು.
ಸ್ವಯಂ ಪ್ರೇರಣೆಯಿಂದ ತೆರವು
ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಅವಕಾಶ ನೀಡದ ಕೆಲವು ಅನಧಿಕೃತ ರೇಸಾರ್ಟ್, ಹೋಂ ಸ್ಟೇಗಳ ಮಾಲೀಕರು ತಾವೇ ಖುದ್ದಾಗಿ ತಮ್ಮ ಕಟ್ಟಡಗಳನ್ನು ಸ್ವಯಂ ಪ್ರೇರಣೆಯಿಂದ ತೆರವು ಮಾಡುತ್ತಿದ್ದ ದೃಶ್ಯ ಕಂಡು ಬಂದಿತು.
ಕೆಲ ರೆಸಾರ್ಟ್ ಮಾಲಿಕರು, ಕೋರ್ಟ್ ಮೊರೆ ಹೋಗಿ ತೆರವು ಕಾರ್ಯಾಚರಣೆ ತಡೆಯಾಜ್ಞೆ ತಂದು ಆದೇಶದ ಪ್ರತಿಗಳನ್ನು ಅಧಿಕಾರಿಗಳಿಗೆ ನೀಡಿದರು. ಇನ್ನು ಕೆಲವರು ಈಗಾಗಲೆ ತಡೆಯಾಜ್ಞೆ ತಂದಿರುವ ರೆಸಾರ್ಟ್‌ಗಳನ್ನು ಬಿಟ್ಟು ಉಳಿದ ಎಲ್ಲಾ ಅನಧಿಕೃತ ಚಟುವಟಿಕೆ ತೆರವಿಗೆ ಅಧಿಕಾರಿಗಳು ಮುಂದಾದರು.
ರೆಸಾರ್ಟ್‌ಗಳಲ್ಲಿರುವ ಬೆಲೆ ಬಾಳುವ ವಸ್ತುಗಳಿಗೆ ಹಾನಿಯಾಗಬಾರದು ಎಂಬ ಕಾರಣಕ್ಕೆ ಸೋಮವಾರ ಸ್ವಯಂ ಪ್ರೇರಣೆಯಿಂದ ತೆರವು ಮಾಡಿಕೊಳ್ಳಲು ಮಾಲೀಕರಿಗೆ ಅವಕಾಶ ನೀಡಲಾಗಿದೆ. ಬಾಕಿ ಉಳಿಯುವ ರೇಸಾರ್ಟ್‌ಗಳನ್ನು ಮಂಗಳವಾರ ಪೂರ್ಣ ಪ್ರಮಾಣದಲ್ಲಿ ತೆರವು ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದರು.
200 ಪೊಲೀಸರ ನಿಯೋಜನೆ
ಮುಂಜಾಗ್ರತಾ ಕ್ರಮವಾಗಿ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ನಾನಾ ಅಧಿಕಾರಿಗಳ ನೇತೃತ್ವದಲ್ಲಿ ಒಟ್ಟು ಆರು ತಂಡಗಳನ್ನು ಮಾಡಿ ತೆರವು ಕಾರ್ಯಚರಣೆಗೆ ಇಳಿಸಲಾಗಿತ್ತು.
ಸೋಮವಾರ ಬೆಳಗ್ಗೆ 6 ಗಂಟೆಗೆ ಆರಂಭವಾಗಬೇಕಿದ್ದ ತೆರವು ಕಾರ್ಯಚರಣೆ, ಗಂಗಾವತಿ ತಾಲೂಕಿನ 18 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಎರಡನೇ ಅವಧಿಯ ಮೀಸಲಾತಿ ಸಂಬಂಧ ಮುಂದೂಡಿ ಮಧ್ಯಾಹ್ನ ಮೂರು ಗಂಟೆಯ ಬಳಿಕ ಆರಂಭಿಸಲಾಯಿತು.
ಸಹಾಯಕ ಆಯುಕ್ತ ಬಸವಣ್ಣೆಪ್ಪ, ತಹಸೀಲ್ದಾರ್ ಮಂಜುನಾಥ ಹಿರೇಮಠ ನೇತೃತ್ವದಲ್ಲಿ ಆರಂಭವಾದ ಕಾರ್ಯಚರಣೆಯಲ್ಲಿ ಡಿವೈಎಸ್ಪಿ, ಮೂರು ಜನ ಸಿಪಿಐ, ಆರು ಜನ ಪಿಎಸ್ಐ ಸೇರಿದಂತೆ ಕಂದಾಯ, ಆರೋಗ್ಯ, ಪ್ರಾಚ್ಯವಸ್ತು, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.