Site icon Vistara News

Koppala News: ರಘುವರ್ಯ ತೀರ್ಥರ ಆರಾಧನೆ, ಮನ್ಯಾಯಸುಧಾ ಸಮರ್ಪಣಾ ಸಂಸ್ಮರಣೋತ್ಸವ: ಮೂಡದ ಒಮ್ಮತ

Meeting led by AC at Gangavati

ಗಂಗಾವತಿ: ತಾಲೂಕಿನ ಆನೆಗುಂದಿ (Anegundi) ಸಮೀಪವಿರುವ ನವವೃಂದಾವನಗಡ್ಡೆಯಲ್ಲಿ ಜೂ.5 ರಿಂದ ಆರಂಭವಾಗಲಿರುವ ರಘುವರ್ಯ ತೀರ್ಥರ ಮೂರು ದಿನಗಳ ಆರಾಧನೆ ಹಾಗೂ ಮನ್ಯಾಯಸುಧಾ ಸಮರ್ಪಣಾ ಸಂಸ್ಮರಣೋತ್ಸವ ಆಚರಣೆಗೆ ಸಂಬಂಧಿಸಿದಂತೆ ಉಭಯ ಮಠಗಳ ಅನುಯಾಯಿಗಳ ಸಭೆ ಇಲ್ಲಿನ ಮಿನಿ ವಿಧಾನಸೌಧದಲ್ಲಿ ಜರುಗಿತು.

ಜೂನ್ 5, 6 ಮತ್ತು ಏಳು ರಂದು ಮೂರು ದಿನಗಳ ಕಾಲ ನವವೃಂದಾವನಗಡ್ಡೆಯಲ್ಲಿ ಉತ್ತರಾದಿ ಮಠದಿಂದ ರಘುವರ್ಯ ತೀರ್ಥರ ಆರಾಧನೆ ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಇದೇ ದಿನ ಮಂತ್ರಾಲಯ ಮಠದಿಂದ ಶ್ರೀ ಮನ್ಯಾಯಸುಧಾ ಸಮರ್ಪಣಾ ಸಂಸ್ಮರಣೋತ್ಸವ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಹೀಗಾಗಿ ಉಭಯ ಮಠಗಳು ಸೂಕ್ತ ಭದ್ರತೆ ಕಲ್ಪಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿವೆ.

ಇದನ್ನೂ ಓದಿ: Summer Fashion: ವೀಕೆಂಡ್‌ನಲ್ಲಿ ಔಟಿಂಗ್‌ ಪ್ರಿಯರ ಉಲ್ಲಾಸ ಹೆಚ್ಚಿಸುತ್ತಿರುವ ವೈವಿಧ್ಯಮಯ ವೈಟ್‌ ಫ್ರಾಕ್ಸ್‌

ಈ ಹಿನ್ನೆಲೆ ಯಾವ ಮಠದ ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂಬ ವಿವಾದದ ಹಿನ್ನೆಲೆ ಉಭಯ ಮಠಗಳ ಅನುಯಾಯಿಗಳ ಸಭೆ ಕರೆಯಲಾಗಿತ್ತು. ಆದರೆ ಸಭೆಯಲ್ಲಿ ಉಭಯ ಮಠಗಳ ಅನುಯಾಯಿಗಳು ಮಧ್ಯೆ ಒಮ್ಮತ ಮೂಡದ ಹಿನ್ನೆಲೆ ಈ ಸಂಬಂಧ ಸಹಾಯಕ ಆಯುಕ್ತ ಬಸವಣ್ಣೆಪ್ಪ ನ್ಯಾಯಾಲಯದಿಂದ ಆದೇಶ ಪಡೆಯದ ಹೊರತು ನವವೃಂದಾವನ ಗಡ್ಡೆಯಲ್ಲಿ ಯಾವುದೇ ಧಾರ್ಮಿಕ ಆಚರಣೆ ಕೈಗೊಳ್ಳದಂತೆ ಸೂಚನೆ ನೀಡಿದ್ದಾರೆ.

ಕೋರ್ಟ್ ಅನುಮತಿ ಕಡ್ಡಾಯ

ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ನ್ಯಾಯಾಲಯದಿಂದ ಸೂಕ್ತ ನಿರ್ದೇಶನ ಪಡೆದುಕೊಂಡು ಬರಬೇಕು ಎಂದು ಸೂಚನೆ ನೀಡಿರುವ ಸಹಾಯಕ ಆಯುಕ್ತ ಬಸವಣ್ಣೆಪ್ಪ ಅವರು, ನಿಯಮ ಉಲ್ಲಂಘಿಸಿ ಧಾರ್ಮಿಕ ಆಚರಣೆಗೆ ಮುಂದಾದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸೂಚನೆ ರವಾನಿಸಿದ್ದಾರೆ.

ಇದನ್ನೂ ಓದಿ: Indian fishermen: 198 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಪಾಕಿಸ್ತಾನ, ಇನ್ನಿಬ್ಬರು ಅಲ್ಲೇ ಉಳಿದಿದ್ದೇಕೆ?

ಆನೆಗುಂದಿಯ ನವವೃಂದಾವನಗಡ್ಡೆಯಲ್ಲಿ ಜೂನ್ 5,6 ಮತ್ತು 7 ರಂದು ರಘುವರ್ಯತೀರ್ಥರ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ನಾಡಿನ ವಿವಿಧ ಭಾಗದಿಂದ ಸಾವಿರಾರು ಭಕ್ತರು ಆಗಮಿಸಲಿದ್ದು ಸೂಕ್ತ ಭದ್ರತೆ ಒದಗಿಸುವಂತೆ ಉತ್ತರಾಧಿಮಠದಿಂದ ಗ್ರಾಮೀಣ ಪೊಲೀಸರಿಗೆ ಮನವಿ ಸಲ್ಲಿಸಲಾಗಿದೆ.

ಇದೇ ಜೂನ್ 5,6 ಮತ್ತು 7 ರಂದು ನವವೃಂದಾನಗಡ್ಡೆಯಲ್ಲಿ ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿ ಮಠದಿಂದ ಶ್ರೀಮನ್ಯಾಯಸುಧಾ ಸಮರ್ಪಣಾ ಸಂಸ್ಕರಣೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಸೂಕ್ತ ರಕ್ಷಣೆ ಒದಗಿಸಬೇಕೆಂದು ಮಠದ ಅನುಯಾಯಿಗಳು ಪೊಲೀಸರ ಮೊರೆ ಹೋಗಿದ್ದಾರೆ.

ಉಭಯ ಮಠಗಳ ಮಧ್ಯೆ ಈಗಾಗಲೆ ಹಲವು ದಶಕಗಳಿಂದ ನವವೃಂದಾವನಗಡ್ಡೆಯ ವಾರಸತ್ವ ಮತ್ತು ಧಾರ್ಮಿಕ ಆಚರಣೆಗಳ ಕುರಿತು ವಿವಾದವಿದ್ದು, ನ್ಯಾಯಾಲಯದಲ್ಲಿ ಪ್ರಕರಣವಿದೆ. ಹೀಗಾಗಿ ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿ ಸೂಕ್ತ ನಿರ್ದೇಶನ ನೀಡುವಂತೆ ಪೊಲೀಸರು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದಾರೆ.

ಇದನ್ನೂ ಓದಿ: IBPS RRB Notification 2023 : ಗ್ರಾಮೀಣ ಬ್ಯಾಂಕಿನ ಎಲ್ಲ ಹುದ್ದೆಗಳಿಗೂ ಕನ್ನಡದಲ್ಲಿ ಏಕಿಲ್ಲ ಪರೀಕ್ಷೆ?

ಈ ಹಿನ್ನೆಲೆ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ, ಉಭಯ ಮಠಗಳ ಅನುಯಾಯಿಗಳ ಸಭೆ ಕರೆದು ಒಮ್ಮತ ಮೂಡಿಸಲು ಯತ್ನಿಸಿದರು. ಆದರೆ ಸಭೆ ವಿಫಲವಾದ ಹಿನ್ನೆಲೆ ನ್ಯಾಯಾಲಯದಿಂದಲೇ ಅನುಮತಿ ತರುವಂತೆ ಅಧಿಕಾರಿ ಉಭಯ ಮಠಗಳ ಅನುಯಾಯಿಗಳಿಗೆ ಸೂಚನೆ ನೀಡಿದ್ದಾರೆ.

Exit mobile version