ಕೊಪ್ಪಳ : ಯಾವುದೇ ಬೆಳೆಯನ್ನು ಬೆಳೆಯಬೇಕು ಎಂದರೆ ಅದು ಫಲವತ್ತವಾದ ಹಾಗೂ ಕೃಷಿಯೋಗ್ಯ ಭೂಮಿಯಾಗಿರಬೇಕು. ಆದರೆ, ಒಂದಿಷ್ಟು ಕಷ್ಟಪಟ್ಟರೆ ಸವಳು ಅಥವಾ ಜವಳು ಭೂಮಿಯನ್ನೂ ಕೃಷಿ ಯೋಗ್ಯ ಭೂಮಿಯನ್ನಾಗಿ ಮಾಡಬಹುದು ಎಂಬುದಕ್ಕೆ ಸರ್ಕಾರಿ ತೋಟಗಾರಿಕಾ ಫಾರ್ಮ್ ಉದಾಹರಣೆಯಾಗಿದೆ.
ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದ ಬಳಿ ಇರುವ ತೋಟಗಾರಿಕಾ ಫಾರ್ಮ್ ಇಸ್ರೇಲಿ ಮಾದರಿಯ ಕೃಷಿ ಪದ್ದತಿಯನ್ನು ರೈತರಿಗೆ ಅಳವಡಿಸಿಕೊಂಡು ಉತ್ತಮ ಇಳುವರಿ ತೆಗೆಯಬಹುದು ಎಂಬದನ್ನು ಪ್ರೇರೇಪಿಸುವಂತಿದೆ. ಈ ಫಾರ್ಮ್ ಈ ಹಿಂದೆ ಅಕ್ಷರಶಃ ಜವಳು ಭೂಮಿಯಾಗಿತ್ತು. ಸುಮಾರು 70 ಎಕರೆ ಪ್ರದೇಶ ವಿಸ್ತೀರ್ಣದ ಈ ಫಾರ್ಮ್‌ನ ಜಾಗದಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ.
ಇಂತಹ ಭೂಮಿಯನ್ನು ಕೃಷಿಯೋಗ್ಯ ಭೂಮಿಯನ್ನಾಗಿ ಮಾಡಬಹುದು ಎಂದು ಚಾಲೆಂಜ್ ತೆಗೆದುಕೊಂಡ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಅಲ್ಲಿ ಈಗ ಉತ್ತಮ ಫಾರ್ಮ್ ರೂಪಿಸಿದ್ದಾರೆ. ಈ ತೋಟಗಾರಿಕಾ ಫಾರ್ಮ್‌ನಲ್ಲಿ ಹೊಸ ಪದ್ದತಿಯ ಪ್ರಯೋಗ ಮಾಡಿದ್ದಾರೆ. ದಾಳಿಂಬೆ, ಲಿಂಬೆ, ಅಂಜೂರ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಒಂದಿಷ್ಟು ಶ್ರಮವಹಿಸಿದರೆ ಬರಡು ಭೂಮಿಯಲ್ಲಿಯೂ ಬೆಳೆ ಬೆಳೆಯಬಹುದು ಎಂಬುದನ್ನು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಈ ಫಾರ್ಮ್ ಮೂಲಕ ತೋರಿಸಿಕೊಟ್ಟಿದ್ದಾರೆ.
ಇದನ್ನೂ ಓದಿ | ಮೂರು ದಿನದ ಮಳೆಗೆ ಕೃಷಿ ಫುಲ್‌ಸ್ಟಾಪ್: ಸಂಕಸ್ಟಕ್ಕೆ ಸಿಲುಕಿದ ರೈತರು
ತಯಾರಿಕೆಗಳು
ವಿವಿಧ ಬೆಳೆಗಳನ್ನು ಬೆಳೆಯುವುದಷ್ಟೆ ಅಲ್ಲದೆ ಈ ತೋಟಗಾರಿಕೆ ಫಾರ್ಮ್‌ನಲ್ಲಿ ಎರೆಹುಳು ಗೊಬ್ಬರ ತಯಾರಿಕೆ, ಎರೆ ಜಲ ತಯಾರಿಕೆ, ವೈಜ್ಞಾನಿಕ ರೀತಿಯಲ್ಲಿ ಜೇನು ಸಾಕಾಣಿಕೆ, ಮೀನು ಸಾಕಾಣಿಕೆ, ಕುರಿ ಸಾಕಾಣಿಕೆಯನ್ನು ಸಹ ಮಾಡಲಾಗುತ್ತಿದೆ.
ಎರೆಜಲ ತಯಾರಿಕೆ
ಎರೆಜಲ ತಯಾರಿಸಲು ಒಂದು ಲೀಟರ್‌ಗೆ ಸುಮಾರು 28 ರೂಪಾಯಿ ಖರ್ಚಾಗುತ್ತಿದ್ದು, 48 ರೂಪಾಯಿಗೆ ಪ್ರತಿ ಲೀಟರ್ ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಎರೆಜಲ ಪ್ರತಿ ಲೀಟರ್‌ಗೆ 150 ರೂಪಾಯಿ ಇದೆ. ಸಮಗ್ರ ಕೃಷಿಯ ಪ್ರಾತ್ಯಕ್ಷಿತೆಯನ್ನು ನೋಡಿಕೊಂಡು ಇಲ್ಲಿನ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಲು ಈ ತೋಟಗಾರಿಕೆ ಫಾರ್ಮ್ ಬಹಳ ಸಹಾಯಕಾರಿ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು.
ಕಡಿಮೆ ನೀರು ಬಳಕೆ, ವೈಜ್ಞಾನಿಕ ಪದ್ದತಿಯ ವಿವಿಧ ಬೆಳೆಗಳ ಪ್ರಯೋಗ ಹಾಗೂ ಯಶಸ್ವಿ ಮೂಲಕ ರೈತರಿಗೆ ಈ ಪದ್ದತಿಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ ತೊಡಗಿಕೊಳ್ಳಲು ಅನುಕೂಲವಾಗಿದೆ. ಈ ಮೂಲಕ ಕೊಪ್ಪಳದ ನಿಡಶೇಸಿಯ ಈ ತೋಟಗಾರಿಕಾ ಫಾರ್ಮ ಮಾದರಿ ಎಂದರೆ ತಪ್ಪಾಗುವುದಿಲ್ಲ.
ವರದಿ : ಮೌನೇಶ್ ಬಡಿಗೇರ್
ಇದನ್ನೂ ಓದಿ | ಭಾರೀ ಮಳೆ-ಬಿರುಗಾಳಿಗೆ ಕೊಪ್ಪಳದಲ್ಲಿ 5,599 ಪ್ರದೇಶದ ಕೃಷಿ ಬೆಳೆ ಹಾನಿ