ಗಂಗಾವತಿ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ (Neha Murder Case) ಖಂಡಿಸಿ, ಇಲ್ಲಿನ ಸಾರ್ವಜನಿಕ ಹಿತರಕ್ಷಣಾ ವೇದಿಕೆ ಬುಧವಾರ ಕರೆ ನೀಡಿದ್ದ ಗಂಗಾವತಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿರುವ ಅಂಗಡಿ-ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದ ವ್ಯಾಪಾರಿಗಳು ಬಂದ್‌ಗೆ ಸಹಕಾರ ನೀಡಿದರು. ಅತ್ಯವಶ್ಯಕ ಸೇವೆಗಳಾದ ಹಾಲಿನ ಕೇಂದ್ರ, ಆರೋಗ್ಯ ಸೇವೆ, ಮೆಡಿಕಲ್ ಶಾಪ್, ತರಕಾರಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಬಂದ್ ಕರೆ ನೀಡಿದ್ದ ಸಂಘಟನೆಯವರು, ಸಾರ್ವಜನಿಕ ಹಿತದೃಷ್ಟಿಯಿಂದ ಸಂಚಾರಕ್ಕೆ ಅಡ್ಡಿಪಡಿಸದ ಹಿನ್ನೆಲೆ ಜನರ ಓಡಾಟ ಸಹಜವಾಗಿತ್ತು.
ಇದನ್ನೂ ಓದಿ: Summer Tour: ಬೇಸಿಗೆ ಪ್ರವಾಸಕ್ಕೆ ಸೂಕ್ತ ಈ 5 ಅದ್ಭುತ ಗಿರಿಧಾಮಗಳು!
ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಬಹುತೇಕ ಅಂಗಡಿ-ಮುಂಗಟ್ಟು ಬಂದ್ ಆಗಿದ್ದವು. ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಳ್ಳಾರಿ ವಲಯದ ಐಜಿಪಿ ಆರ್.ಎಸ್. ಲೋಕೇಶ್ ಕುಮಾರ್, ಎಸ್ಪಿ ಯಶೋಧಾ ವಂಟೆಗೋಡೆ ಸ್ಥಳದಲ್ಲಿ ಬಿಡಾರ ಹೂಡಿದ್ದರು.
ಬೃಹತ್ ಮೆರವಣಿಗೆ
ಇದಕ್ಕೂ ಮೊದಲು ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಖಂಡಿಸಿ, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ, ಸಾರ್ವಜನಿಕ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಎಪಿಎಂಸಿಯ ಮೊದಲ ಗೇಟ್‌ನಿಂದ ಮಹಾತ್ಮಗಾಂಧಿ ವೃತ್ತದವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು.
ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಕನ್ನಡಪರ ಸಂಘಟನೆ, ವಿವಿಧ ಪಕ್ಷಗಳ ಮುಖಂಡರು, ಮಹಿಳಾ ಸಂಘಟನೆಗಳು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ: Namma Metro: ಏಪ್ರಿಲ್ 26ರಂದು ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ತಡರಾತ್ರಿವರೆಗೂ ಸೇವೆ ವಿಸ್ತರಣೆ
ಈ ಸಂದರ್ಭದಲ್ಲಿ ಮಾಜಿ ಸಂಸದ ಎಸ್. ಶಿವರಾಮಗೌಡ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಜಿ. ವೀರಪ್ಪ, ಕಾಡಾದ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ರಾಘವೇಂದ್ರ ಶೆಟ್ಟಿ, ಶಂಕರೇಗೌಡ ಹೊಸಳ್ಳಿ, ಅಶ್ವಿನಿ ದೇಸಾಯಿ, ಮನೋಹರಸ್ವಾಮಿ, ಕವಿತಾ ಗುರುಮೂರ್ತಿ ಸೇರಿದಂತೆ ನಾನಾ ಸಮಾಜದ ಮುಖಂಡರು ಭಾಗಿಯಾಗಿದ್ದರು.