Site icon Vistara News

Death News: ರಾಜವಂಶಸ್ಥ, ಮಾಜಿ ಸಚಿವ ಶ್ರೀರಂಗದೇವರಾಯಲು ಇನ್ನಿಲ್ಲ

Former minister Srirangadevarayalu passed away

ಗಂಗಾವತಿ: ಸರಳ ಸಜ್ಜನಿಕೆಯ ರಾಜಕಾರಣಿ ಎಂದು ಹೆಸರಾಗಿದ್ದ, ಕನಕಗಿರಿ (Kanakagiri) ಮತ್ತು ಗಂಗಾವತಿ (Gangavathi) ವಿಧಾನಸಭಾ ಕ್ಷೇತ್ರದಲ್ಲಿ ಐದು ಬಾರಿ ಶಾಸಕ (MLA), ಒಮ್ಮೆ ಮಂತ್ರಿಯಾಗಿದ್ದ (Minister) ಮಾಜಿ ಸಚಿವ (Former minister) ಶ್ರೀರಂಗದೇವರಾಯಲು ಮಂಗಳವಾರ ಸಂಜೆ ಗಂಗಾವತಿಯ ತಮ್ಮ ನಿವಾಸದಲ್ಲಿ ನಿಧನರಾದರು.

ಮೃತರಿಗೆ 85 ವರ್ಷ ವಯಸ್ಸಾಗಿತ್ತು. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರಿಗೆ ಪತ್ನಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಲಲಿತಾರಾಣಿ, ಪುತ್ರರಾದ ಉದ್ಯಮಿ ಕೃಷ್ಣದೇವರಾಯ, ವೈದ್ಯ ವಿ.ಎಸ್.ಎನ್.ಡಿ ರಾಯಲು, ಪುತ್ರಿ ಲತಾ ಸೇರಿದಂತೆ ಅಪಾರ ಬಂಧು-ಬಳಗವಿದೆ.

ವಿಜಯನಗರದ ಮೂಲ ರಾಜಧಾನಿಯಾಗಿದ್ದ ಆನೆಗೊಂದಿಯ ರಾಜವಂಶಕ್ಕೆ ಸೇರಿದ್ದ ಅರವೀಡು ವಂಶಜ ಶ್ರೀರಂಗದೇವರಾಯಲು ಅವರು 1938ರಲ್ಲಿ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಜನಿಸಿದ್ದರು. ತಂದೆ ಶ್ರೀವೆಂಕಟದೇವರಾಯಲು- ತಾಯಿ ಶ್ರೀಲಕ್ಷ್ಮಿದೇವಮ್ಮ.

ಮೃತರ ಅಂತ್ಯಸಂಸ್ಕಾರವು ಕ್ಷತ್ರೀಯ ವಿಧಿ-ವಿಧಾನಗಳಂತೆ ಗಂಗಾವತಿ ತಾಲೂಕಿನ ಸ್ವಗ್ರಾಮ ಆನೆಗೊಂದಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅಧಿಕಾರವಧಿಯಲ್ಲಿ ಸಾಕಷ್ಟು ಜನಪರ ಯೋಜನೆ ತಂದ ಶ್ರೇಯಸ್ಸು ರಂಗದೇವರಾಯಲು ಅವರಿಗೆ ಸೇರುತ್ತದೆ.

ಇದನ್ನೂ ಓದಿ: Weather Report : ರಾಜ್ಯದಲ್ಲಿ ಕ್ಷೀಣಿಸಿದ ಮಳೆ ; ಆತಂಕದಲ್ಲಿ ರೈತಾಪಿ ವರ್ಗ

ಐದು ಬಾರಿ ಶಾಸಕ, ಮಂತ್ರಿ

ಪ್ರಾಥಮಿಕ ಪ್ರೌಢ ಶಿಕ್ಷಣ ಹೊಸಪೇಟೆಯ ಮುನ್ಸಿಪಲ್ ಹೈಸ್ಕೂಲ್ ಮುಗಿಸಿದ್ದ ರಂಗದೇವರಾಯಲು, 1967ರಲ್ಲಿ ಆಂಧ್ರದ ಅನಕಾಪಲ್ಲಿ ಮೂಲದ ರಾಜಮನೆತನದ ಲಲಿತಾರಾಣಿಅಮ್ಮನವರ್ ಅವರನ್ನು ವಿವಾಹವಾಗುತ್ತಾರೆ.

ಕಾಂಗ್ರೆಸ್ ಪಕ್ಷದಿಂದ ರಾಜಕೀಯಕ್ಕೆ ಪ್ರವೇಶ ಮಾಡಿದ್ದ ರಾಯಲು, ತಮ್ಮ ಉಸಿರು ಇರೋವರೆಗೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಇದ್ದರು. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 1989, 1994, 1999 ಹೀಗೆ ಗಂಗಾವತಿ ಕ್ಷೇತ್ರದಿಂದ ಹ್ಯಾಟ್ರಿಕ್ ಸಾಧಿಸಿದ ಏಕೈಕ ರಾಜಾಕಾರಣಿ ಎಂಬ ಖ್ಯಾತಿ ಈಗಲೂ ರಂಗದೇವರಾಯಲು ಅವರ ಹೆಸರಲ್ಲಿದೆ.

1978ರಲ್ಲಿ ರಾಜಕೀಯ ಪ್ರವೇಶಿಸುವ ರಂಗದೇವರಾಯಲು, ಅದೇ ವರ್ಷದಲ್ಲಿ ಜೆಎನ್ಪಿ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಎಚ್.ಸಿ. ಯಾದವರಾವ್ ವಿರುದ್ಧ ಪರಾಭವಗೊಂಡಿದ್ದರು. ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ 1983 ಹಾಗೂ 1985ರ ಚುನಾವಣೆಯಲ್ಲಿ ಗೆಲುವು ಸಾಧಿಸಿ ಶಾಸಕರಾಗಿದ್ದರು.

ಮಂತ್ರಿ ಸ್ಥಾನ

ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೋಯ್ಲಿ ಅವರ ಸಚಿವ ಸಂಪುಟದಲ್ಲಿ 1993ರಲ್ಲಿ ಶ್ರೀರಂಗದೇವರಾಯಲು ಅವರಿಗೆ ಕಾಡಾ ಖಾತೆಯ ಸಚಿವ ಸ್ಥಾನ ಸಿಕ್ಕಿತ್ತು. ಕಾಡಾ ವ್ಯಾಪ್ತಿಯಲ್ಲಿ ನೀರಾವರಿ ಪ್ರದೇಶ ಅಚ್ಚುಕಟ್ಟು ಅಭಿವೃದ್ಧಿ, ಹೈದ್ರಾಬಾದ್ ಅಭಿವೃದ್ಧಿ ಮಂಡಳಿ ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಮಂಡಳಿ ಜವಾಬ್ದಾರಿ ಖಾತೆಯ ವ್ಯಾಪ್ತಿಯಲ್ಲಿತ್ತು.

ಇದನ್ನೂ ಓದಿ: England Women’s Team : ವಿಶ್ವಕಪ್ ವಿಜೇತ ಇಂಗ್ಲೆಂಡ್ ಆಟಗಾರ್ತಿ ಅಲೆಕ್ಸ್ ಹಾರ್ಟ್ಲಿ ವಿದಾಯ

ಎಸ್.ಎಂ. ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಖಾದಿ ಮಂಡಳಿ ಅಧ್ಯಕ್ಷ ಸ್ಥಾನ ಲಭಿಸಿತ್ತು. ಆಂಧ್ರದಿಂದ ತರಲಾಗಿದ್ದ ಅನಕಾಪಲ್ಲಿ ಎಂಬ ವಿಶೇಷ ಕಬ್ಬಿನ ತಳಿಯನ್ನು ಆನೆಗೊಂದಿ ಭಾಗದಲ್ಲಿ ಅಭಿವೃದ್ಧಿ ಪಡಿಸಿದ ರೂವಾರಿಯಾಗಿ ಶ್ರೀರಂಗದೇವರಾಯಲು ಗುರುತಿಸಿಕೊಂಡಿದ್ದರು.

Exit mobile version