ಕೊಪ್ಪಳ: ರೈತರ ಆತ್ಮಹತ್ಯೆ (Farmer Death) ಪ್ರಕರಣಗಳು ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಮಳೆ ಕೈಕೊಟ್ಟಿದ್ದರಿಂದ ಬೆಳೆಯು ಕೈಗೆ ಬಾರದೇ ರೈತರು ಕಂಗಾಲಾಗಿದ್ದಾರೆ. ಭೀಕರ ಬರ ಹಿನ್ನೆಲೆಯಲ್ಲಿ ಬೆಳೆಯಿಂದ ಕೈ ಸುಟ್ಟುಕೊಂಡ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಬೆಣಕಲ್ ಗ್ರಾಮದ ಮಹೇಶ ಕುದ್ರಿಕೊಟಗಿ (37)ಮೃತ ದುರ್ದೈವಿ. ಮಹೇಶ್ ತನ್ನ ಪತ್ನಿ, ಮೂವರು ಮಕ್ಕಳು, ಸಹೋದರ ಹಾಗೂ ತಾಯಿಯನ್ನು ಅಗಲಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ರೈತ ಮಹೇಶ್ ಬೆಳೆಗಾಗಿ ಖಾಸಗಿ ಬ್ಯಾಂಕ್ ಸೇರಿ ವಿವಿಧೆಡೆ ಕೈ ಸಾಲ ಮಾಡಿಕೊಂಡಿದ್ದರು. ಸಕಾಲಕ್ಕೆ ಮಳೆಯಾಗದಿರುವುದು ಹಾಗೂ ನೀರಾವರಿ ಆಶ್ರಿತ ಭೂಮಿಯಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಂದಿರಲಿಲ್ಲ. ಜತೆಗೆ ಸಾಲಗಾರರು ಬೆನ್ನಿಗೆ ಬಿದ್ದಿದ್ದರು. ಇದರಿಂದ ನೊಂದು ನಿನ್ನೆ ಸೋಮವಾರ ರಾತ್ರಿ ಹೊಲದಲ್ಲಿ ಕ್ರಿಮಿನಾಶಕ ಸೇವನೆ ಮಾಡಿದ್ದ.
ಕೂಡಲೇ ತೀವ್ರ ಅಸ್ವಸ್ಥಗೊಂಡಿದ್ದ ಮಹೇಶನನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು .ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೂಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Bengaluru Traffic : ಆಂಬ್ಯುಲೆನ್ಸ್ಗೆ NO ಟ್ರಾಫಿಕ್ ಕಿರಿಕ್; ಬರಲಿದೆ ದಾರಿ ತೋರುವ ಆ್ಯಪ್!
ಸಾಲಬಾಧೆಯಿಂದ ಕೋಡ್ರಿಗೆ ಗ್ರಾಮದಲ್ಲಿ ರೈತ ಆತ್ಮಹತ್ಯೆ
ರಿಪ್ಪನ್ಪೇಟೆ: ಸಾಲಬಾಧೆ ತಾಳಲಾರದೇ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಪಟ್ಟಣ ಸಮೀಪದ ಬಾಳೂರು ಗ್ರಾಪಂ ವ್ಯಾಪ್ತಿಯ ಕೋಡ್ರಿಗೆ ಗ್ರಾಮದಲ್ಲಿ ಜರುಗಿದೆ.
ಹಾಲುಗುಡ್ಡೆ ಗ್ರಾಮದ ಕೋಡ್ರಿಗೆ ನಿವಾಸಿ ಕೃಷ್ಣಮೂರ್ತಿ ಮೃತಪಟ್ಟ ರೈತ. ಕೃಷಿ ಕೆಲಸಕ್ಕಾಗಿ ರಿಪ್ಪನ್ಪೇಟೆ ಕೆನರಾ ಬ್ಯಾಂಕ್ನಲ್ಲಿ ಸುಮಾರು ಎರಡೂವರೆ ಲಕ್ಷ ರೂಪಾಯಿ ಸಾಲ ಹಾಗೂ ಸ್ವ-ಸಹಾಯ ಸಂಘದಲ್ಲಿ 60 ಸಾವಿರ ರೂ. ಸಾಲ ಹಾಗೂ ಕೈಗಡವಾಗಿ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ಸಾಲ ಮಾಡಿಕೊಂಡಿದ್ದರು.
ಭತ್ತ, ಕಬ್ಬು, ಮತ್ತು ಶುಂಠಿ ಹಾಗೂ ಅಡಿಕೆ ಬೆಳೆ ಬೆಳೆಯುತ್ತಿದ್ದು, ಈ ವರ್ಷ ಮಳೆ ಸರಿಯಾಗಿ ಬಾರದೇ ಬೆಳೆ ನಾಶವಾಗಿದೆ. ಕೃಷಿಗಾಗಿ ಮಾಡಿಕೊಂಡ ಸಾಲವನ್ನು ಈ ವರ್ಷ ಹೇಗೆ ತೀರಿಸುವುದು ಎಂದು ಚಿಂತಿತರಾಗಿದ್ದರು ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ. ಈ ಬಗ್ಗೆ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಲಿಕಟ್ಟಿ ಗ್ರಾಮದಲ್ಲಿ ರೈತ ಆತ್ಮಹತ್ಯೆ
ಹರಪನಹಳ್ಳಿ: ಕೃಷಿಗಾಗಿ ಮಾಡಿದ ಸಾಲ ತೀರಿಸಲು ಆಗದೆ ರೈತನೊಬ್ಬ (Farmer) ನೇಣು ಹಾಕಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಹರಪನಹಳ್ಳಿ ತಾಲ್ಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಶುಕ್ರವಾರ ಜರುಗಿದೆ.
ಕುದುರೆ ಹನುಮಂತಪ್ಪ (53) ಆತ್ಮಹತ್ಯೆಗೆ ಶರಣಾದ ರೈತ. ಮೃತ ಹನುಮಂತಪ್ಪ ಹಾರಕನಾಳು ವಿ.ಎಸ್.ಎಸ್ ಎನ್ ಹಾಗೂ ಇತರೆ ಬ್ಯಾಂಕುಗಳಲ್ಲಿ 2 ಲಕ್ಷ ರೂ ಹಾಗೂ ಕೈಗಡ 2 ಲಕ್ಷ ಹೀಗೆ ಒಟ್ಟು 4 ಲಕ್ಷ ರೂ. ಸಾಲ ಮಾಡಿದ್ದು, ಜಮೀನಿನಲ್ಲಿ ಬೆಳೆ ಬರದೆ ಸಾಲ ತೀರಿಸುವ ಕುರಿತು ಚಿಂತೆಗೀಡಾಗಿದ್ದ ಎಂದು ಹೇಳಲಾಗಿದೆ.
ಸಾಲ ತೀರಿಸಲು ಆಗದೆ ಮನನೊಂದು ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾನೆ. ಮೃತ ಹನುಮಂತಪ್ಪಗೆ ಮೃತನಿಗೆ 4 ಪುತ್ರಿಯರು, ಓರ್ವ ಪುತ್ರನಿದ್ದಾನೆಂದು ತಿಳಿದುಬಂದಿದೆ. ಮೃತ ರೈತನ ಮನೆಗೆ ಬಿಜೆಪಿ ಮುಖಂಡ ಎಚ್.ಎಂ.ಮಲ್ಲಿಕಾರ್ಜುನ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಚಂದ್ರಪ್ಪ, ಮುಖಂಡರಾದ ವೈ.ಕೆ.ಬಿ.ದುರುಗಪ್ಪ, ಎಚ್.ವಸಂತಪ್ಪ. ಎಸ್.ಆರ್ ತಿಮ್ಮಣ್ಣ ಕೆ.ಅಶೋಕ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ