Site icon Vistara News

ಅವೈಜ್ಞಾನಿಕ ಟೋಲ್ ಗಳಿಂದ ಜನರ ಜೇಬಿಗೆ ಕತ್ತರಿ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿ ಶಾಪ

TOLL

ಕೊಪ್ಪಳ : ವಾಹನಗಳ ಸವಾರರು ಅರ್ಧ ಕಿಲೋ‌ಮೀಟರ್ ರಸ್ತೆ ಬಳಸದಿದ್ದರೂ ಟೋಲ್ ಪಾವತಿಸಲೇಬೇಕಾದ ಅನಿವಾರ್ಯ ಬಂದೊದಗಿದೆ. ನಾಲ್ಕೇ ಕಿಲೋ ಮೀಟರ್ ಅಂತರದಲ್ಲಿರುವ ಮತ್ತೊಂದು ಟೋಲ್ ಗೆ ಹಣ ಪಾವತಿಸಬೇಕು. ಅವೈಜ್ಞಾನಿಕ ಟೋಲ್ ಪ್ಲಾಜಾಗಳಿಂದಾಗ ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಕೊಪ್ಪಳ‌ ಜಿಲ್ಲೆಯಲ್ಲಿ ಬರೋಬ್ಬರಿ 7 ಕಡೆ ಟೋಲ್ ಪ್ಲಾಜಾಗಳಿದ್ದು, ವಾಹನ ಸವಾರರಿಗೆ ನಿತ್ಯ ಕಿರಿಕಿರಿಯಾಗುತ್ತಿದೆ. ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರು ಹಾಗೂ ರಾಜ್ಯ ಹೆದ್ದಾರಿಯಲ್ಲಿ ನಾಲ್ಕು ಟೋಲ್ ಪ್ಲಾಜಾಗಳಿವೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕೇವಲ ಒಂದೇ ಟೋಲ್ ಪ್ಲಾಜಾ ಇರಬೇಕೆಂಬ ನಿಯಮ ಮಾಡಿದೆ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ. ಕೊಪ್ಪಳ ತಾಲೂಕಿ ಹಿಟ್ನಾಳ್ ಮತ್ತು ಶಹಪುರದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕೇವಲ 4 ಕಿಲೋ ಮೀಟರ್ ಅಂತರದಲ್ಲಿ ಟೋಲ್ ಪ್ಲಾಜಾಗಳಿವೆ. ಕೇವಲ ನಾಲ್ಕು ಕಿಲೋ ಮೀಟರ್ ಅಂತರದಲ್ಲಿ ಎರಡು ಬಾರಿ ಟೋಲ್ ಪಾವತಿಸಬೇಕಾದ ಅನಿವಾರ್ಯತೆ ಇದೆ.

ಇದನ್ನೂ ಓದಿ | BMTC : ಹೊಸ ಮಾರ್ಗಗಳಲ್ಲಿ ಬಸ್‌ ಸಂಚಾರ

ಹಿಟ್ನಾಳ್ ಬಳಿ ಇರುವ ಟೋಲ್ ಬಂದ್ ಮಾಡಲಾಗುತ್ತದೆ ಎಂಬ ಭರವಸೆಗಳು ಹುಸಿಯಾಗಿವೆ. ಕಾನೂನು ನೆಪ ಹೇಳಿ ಹಿಟ್ನಾಳ ಬಳಿ ಇರುವ ಟೋಲ್ ಪ್ಲಾಜಾ ಮುಂದುವರಿಸಲಾಗುತ್ತಿದೆ. ಇದರಿಂದ ಜಿಲ್ಲೆಯ ಜನತೆಯು ಕೇಂದ್ರ ಸರ್ಕಾರದ ವಿರುದ್ದ ಅಸಮಾದಾನ ವ್ಯಕ್ತಪಡಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 50 ಚತುಷ್ಪತ  ಬೆಂಗಳೂರು ಸೊಲ್ಲಾಪುರ ರಸ್ತೆಯು ಹಾಯ್ದು ಹೋಗಿದೆ. ಕೊಪ್ಪಳ ಜಿಲ್ಲೆಯಲ್ಲಿ 80 ಕಿಲೋ ಮೀಟರ್ ದೂರ ಹಾಯ್ದು ಹೋಗುತ್ತದೆ.

ಈ ಹೆದ್ದಾರಿಯಲ್ಲಿ ಜಿಎಂಆರ್ ಕಂಪನಿಯವರೆಗೆ ಟೋಲ್ ಸಂಗ್ರಹಿಸಲು ಪರವಾನಿಗೆ ನೀಡಿದೆ. ಕಂಪನಿಯು ಈ ಹೆದ್ದಾರಿಯಲ್ಲಿ 3 ಕಡೆ ಟೋಲ್ ಸಂಗ್ರಹಿಸುತ್ತಿದೆ. ಹಿಟ್ನಾಳ, ಶಹಪುರ ಹಾಗೂ ಬೋದೂರು ಬಳಿಯಲ್ಲಿ ಮೂರು ಕಡೆ ಟೋಲ್ ಸಂಗ್ರಹಿಸುತ್ತಿದ್ದಾರೆ. ಹಿಟ್ನಾಳ ಹಾಗೂ ಶಹಪುರ ನಡುವೆ ಕೇವಲ 4 ಕಿಲೋ ಮೀಟರ್ ಅಂತರ ಮಾತ್ರ. ಆದರೂ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಎರಡು ಕಡೆ ಟೋಲ್ ಪಾವತಿಸಬೇಕು.

ಹಿಟ್ನಾಳ್ ಟೋಲ್ ಮೂಲಕವಾಗಿ ಅಂಜನಾದ್ರಿ, ಹುಲಿಗೆಮ್ಮ ದೇವಿ ದರ್ಶನಕ್ಕೆ ಹೋಗುವವರು ಸಹ ಟೋಲ್ ಕಟ್ಟಬೇಕು. ಅಂಜನಾದ್ರಿ ಹಾಗೂ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಹೋಗುವವರು ಕೇವಲ ಅರ್ಧ ಕಿಮೀ ಮಾತ್ರ ಹೆದ್ದಾರಿ ಬಳಸಿದರೂ ಟೋಲ್ ಕಟ್ಟಬೇಕಾಗಿದೆ. ಪರ್ಯಾಯವಾಗಿರುವಂತಹ ರಿಂಗ್‌ ರಸ್ತೆಗಳು ಇಲ್ಲ. ಆದಷ್ಟು ಬೇಗ ತೆರವುಗೊಳಿಬೇಕು ಎಂದು ಜಗದೀಶ ಚಟ್ಟಿ, ಸ್ಥಳೀಯರು ಆಗ್ರಹಿಸಿದರು.

ಜನರ ಆಗ್ರಹ :

ಇದರ ಜತೆಗೆ ರಾಜ್ಯ ಹೆದ್ದಾರಿಯಲ್ಲಿರುವ ಬೆಣಕಲ್, ಮರಳಿ, ಕನಕಗಿರಿ, ಕಿಲಾರಹಟ್ಟಿ ಬಳಿ ಟೋಲ್ ಪಾವತಿಸಬೇಕು. ಈ ನಾಲ್ಕು ಸ್ಥಳಗಳ ಅಂತರ ಕೇವಲ 30 ಕಿಲೋಮೀಟರ್ ದೂರವಿದೆ. ಜಿಲ್ಲೆಯಲ್ಲಿರುವ ಈ ಅವೈಜ್ಞಾನಿಕವಾಗಿರುವ ಟೋಲ್ ಸಂಗ್ರಹ ಕೇಂದ್ರಗಳನ್ನು ಕಡಿತಗೊಳಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಕೊಪ್ಪಳ ತಾಲೂಕಿನ ಹಿಟ್ನಾಳ ಬಳಿ ಇರುವ ಅವೈಜ್ಞಾನಿಕ ಟೋಲ್ ಗೇಟ್ ನ್ನು ಬಂದ್ ಮಾಡಿ ಎಂದು ಹಲವು ವರ್ಷಗಳಿಂದ ಸಾರ್ವಜನಿಕರು ಆಗ್ರಹಿಸುತ್ತಿದ್ದರೂ ಟೋಲ್ ಬಂದ್ ಆಗಿಲ್ಲ. ಕಾರಣ ಹೊಸಪೇಟೆಯಿಂದ ಅಂಕೋಲಕ್ಕೆ ಹೋಗುವ ಹೆದ್ದಾರಿ 67 ಹಾಗೂ ಹೊಸಪೇಟೆಯಿಂದ ಸೊಲ್ಲಾಪುರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ 50 ಚತುಷ್ಪತ ರಸ್ತೆ ಎರಡು ಸುಮಾರು ಒಂದೇ ಹೆದ್ದಾರಿಯಾಗಿದ್ದು ಹಿಟ್ನಾಳ ಬಳಿಯಲ್ಲಿ ಈ ಹೆದ್ದಾರಿಗಳು ಪ್ರತ್ಯೇಕವಾಗುತ್ತವೆ. ಇದರಿಂದಾಗಿ ಎರಡು ಹೆದ್ದಾರಿಗಳನ್ನು ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಈ ಹೆದ್ದಾರಿಯಲ್ಲಿ ಮೊದಲು ಅಂದಾಜಿಸಿದಂತೆ ವಾಹನಗಳ ಸಂಚಾರದ ಓಡಾಟ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಈ ಕುರಿತು ಜಿಎಂಆರ್ ಕಂಪನಿಯು ನ್ಯಾಯಲಯದಲ್ಲಿ ಪ್ರಕರಣ ದಾಖಲಿಸಿದೆ. ಈ ಕಾರಣಕ್ಕೆ ಹಿಟ್ನಾಳ ಟೋಲ್ ಪ್ಲಾಜಾ ಬಂದ್ ಮಾಡಲು ಆಗುವುದಿಲ್ಲ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.
ವರದಿ : ಮೌನೇಶ್ ಬಡಿಗೇರ್

ಇದನ್ನೂ ಓದಿ | ಭಾರೀ ಮಳೆ-ಬಿರುಗಾಳಿಗೆ ಕೊಪ್ಪಳದಲ್ಲಿ 5,599 ಪ್ರದೇಶದ ಕೃಷಿ ಬೆಳೆ ಹಾನಿ

Exit mobile version