Site icon Vistara News

Koppala News: ಅರ್ಧ ಶತಮಾನದ ಬೇಡಿಕೆ ಈಡೇರಿಕೆ: ತರಕಾರಿ, ಹಣ್ಣುಗಳಿಗೆ ಪೂಜೆ ಮಾಡಿ ಸಂಭ್ರಮಿಸಿದ ಜನ

Fulfillment of demand of half a century People celebrated by puja for vegetables and fruits at Gangavathi

ಗಂಗಾವತಿ: ಅರ್ಧ ಶತಮಾನದಷ್ಟು (Half a Century) ಹಳೆಯದಾದ ತಮ್ಮ ಬೇಡಿಕೆ (Demand) ಈಡೇರಿದ್ದರಿಂದ ತಾಲೂಕಿನ ಚಿಕ್ಕಬೆಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಕ್ಕುಂಪಿ ಗ್ರಾಮದ ಜನ ಗುರುವಾರ, ತಮ್ಮೂರಿನ ಕನಕ-ವಾಲ್ಮೀಕಿ ವೃತ್ತದಲ್ಲಿ ಬುಟ್ಟಿಗಳಲ್ಲಿ ಹಣ್ಣು (Fruits), ತರಕಾರಿಗಳನ್ನು (Vegetables) ಇಟ್ಟು, ಆ ಬುಟ್ಟಿಗಳಿಗೆ ಹೂವಿನ ಹಾರ ಹಾಕಿ ಅಲಂಕಾರ ಮಾಡಿ, ಕಾಯಿ ಒಡೆದು, ಕರ್ಪೂರ ಬೆಳಗಿ ಪೂಜೆ ಮಾಡಿ ಸಂಭ್ರಮಿಸಿದರು.

ಇಷ್ಟಕ್ಕೂ ಗ್ರಾಮಸ್ಥರ ಸಂಭ್ರಮಕ್ಕೆ ಕಾರಣ ಏನು ಗೊತ್ತಾ..? ಕಳೆದ ಐವ್ವತ್ತು ವರ್ಷಗಳ ಬೇಡಿಕೆಯಾಗಿದ್ದ ತಮ್ಮೂರಿಗೆ ತರಕಾರಿ-ಹಣ್ಣು ಹಂಪಲಗಳ ಸಂತೆ ಬೇಕೆಂಬ ಬೇಡಿಕೆ ಈಡೇರಿದ್ದರಿಂದ ತರಕಾರಿ-ಹಣ್ಣುಗಳ ಬುಟ್ಟಿಗೆ ಪೂಜೆ ಮಾಡಿ ಸಂಭ್ರಮಪಟ್ಟರು.

ಚಿಕ್ಕಬೆಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಮುಕ್ಕುಂಪಿ, ಇಡೀ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ದೊಡ್ಡ ಗ್ರಾಮ. ಈ ಗ್ರಾಮಕ್ಕೆ ಸುತ್ತಲಿನ ಹೇಮಗುಡ್ಡ, ಎಚ್ಆರ್‌ಜಿ ಕ್ಯಾಂಪ್, ಲಿಂಗದಳ್ಳಿ ಎಡೆಹಳ್ಳಿ, ಚಿಕ್ಕಬೆಣಕಲ್, ಹಿರೇಬೆಣಕಲ್, ದಾಸನಾಳ ಬ್ರಿಜ್ ಗ್ರಾಮಗಳ ಸಂಪರ್ಕವಿದೆ.

ಇದನ್ನೂ ಓದಿ: Asia Cup 2023: ಪಾಕ್​ ವಿರುದ್ಧದ ಪಂದ್ಯಕ್ಕೆ ರಣತಂತ್ರ ರೂಪಿಸಿದ ರೋಹಿತ್​ ಶರ್ಮ

ಸುಮಾರು ಹತ್ತು ಸಾವಿರ ಜನಸಂಖ್ಯೆ ಇರುವ ಈ ಗ್ರಾಮಗಳ ಜನ, ತರಕಾರಿ, ಬೇಳೆಕಾಳು, ದವಸ-ಧಾನ್ಯ, ಹಣ್ಣು-ಹಂಪಲಗಳ ಖರೀದಿ ಸೇರಿದಂತೆ ಪ್ರತಿಯೊಂದಕ್ಕೂ 13 ರಿಂದ 15 ಕಿಲೋ ಮೀಟರ್‌ ದೂರದ ಗಂಗಾವತಿಗೆ ಬರಬೇಕು. ಸರಿಯಾದ ವಾಹನಗಳ ಸೌಲಭ್ಯವಿಲ್ಲದ್ದರಿಂದ ಜನ ಪರದಾಡುವಂತಾಗಿತ್ತು.

ಗಂಗಾವತಿ-ಕೊಪ್ಪಳ ಮುಖ್ಯರಸ್ತೆಯಲ್ಲಿರುವ ಎಚ್ಆರ್‌ಜಿ ಕ್ಯಾಂಪ್ ಮತ್ತು ದಾಸನಾಳ ಬ್ರಿಜ್ ಬಿಟ್ಟರೆ ಮಿಕ್ಕ ಐದು ಗ್ರಾಮಗಳ ಜನ ನಿತ್ಯ ಅಗತ್ಯದ ತರಕಾರಿ, ಹಣ್ಣುಗಳ ಖರೀದಿಗೆ ಪರದಾಡುವ ಸನ್ನಿವೇಶ ನಿರ್ಮಾಣವಾಗಿತ್ತು, ತಮ್ಮೂರಿಗೆ ಸಂತೆ ಬೇಕೆಂಬ ಬೇಡಿಕೆ ಬಹು ದಿನಗಳಿಂದ ಗ್ರಾಮಸ್ಥರಲ್ಲಿತ್ತು.

ಹೀಗಾಗಿ ಗ್ರಾಮದ ಕೆಲ ಯುವಕರು ಸೇರಿಕೊಂಡು ಕಳೆದ ಎರಡು ಮೂರು ತಿಂಗಳಿಂದ ಸತತ ಯತ್ನ ಮಾಡಿ ಕರಪತ್ರಗಳನ್ನು ಮುದ್ರಿಸಿ, ತಮ್ಮೂರಿನ ಆಟೋಗಳಿಗೆ ಬ್ಯಾನರ್‌ಗಳನ್ನು ಹಾಕಿಸಿ ಪ್ರಚಾರ ಮಾಡಿದ್ದಾರೆ. ಕೊನೆಗೂ ತಮ್ಮೂರಿಗೆ ಸಂತೆ ಮಾರುಕಟ್ಟೆ ಆರಂಭಿಸಲು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Elephant attack : ಚಿಕಿತ್ಸೆಗೆ ಹೋದಾಗ ಅಟ್ಟಾಡಿಸಿದ ಗಾಯಾಳು ಕಾಡಾನೆ; ಅರಣ್ಯ ಸಿಬ್ಬಂದಿ ಸಾವು!

ಗುರುವಾರ ಆರಂಭವಾದ ಮೊದಲ ಸಂತೆಗೆ ಬಂದಿದ್ದ ತರಕಾರಿ ಮತ್ತು ಹಣ್ಣುಗಳ ಬುಟ್ಟಿಗಳಿಗೆ ಕಾಯಿ ಒಡೆದು ಕರ್ಪೂರ ಬೆಳಗಿ ಭರ್ಜರಿಯಾಗಿ ಪೂಜೆ ಸಲ್ಲಿಸಿ ಸಂಭ್ರಮಿಸಿದ್ದಾರೆ. `ಸಂತೆಯಿಂದ ಸುತ್ತಲಿನ ಏಳು ಗ್ರಾಮಗಳ ಸುಮಾರು ಹತ್ತು ಸಾವಿರ ಜನರಿಗೆ ಅನುಕೂಲವಾಗಲಿದೆ’ ಎಂದು ಗ್ರಾಮದ ಮುಖಂಡ ಹನುಮಂತಪ್ಪ ತಳವಾರ ಹೇಳಿದರು.

Exit mobile version