ಗಂಗಾವತಿ: ಇದೇ ಡಿ. 24ರಂದು ಹನುಮ ಜಯಂತಿ ಅಂಗವಾಗಿ ನಾಡಿನ ವಿವಿಧ ಜಿಲ್ಲೆಗಳಿಂದ ಹನುಮ ಮಾಲಾಧಾರಿಗಳು ತಾಲೂಕಿನ ಅಂಜನಾದ್ರಿ (Anjanadri) ಬೆಟ್ಟಕ್ಕೆ ಆಗಮಿಸಲಿದ್ದು, ಮಾಲಾ ವಿಸರ್ಜನಾ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸೂಕ್ತ ಸೌಕರ್ಯ ಕಲ್ಪಿಸಬೇಕು ಎಂದು ಶಾಸಕ ಜಿ. ಜನಾರ್ದನರೆಡ್ಡಿ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗತ್ತಿ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಎರಡನೇ ಪೂರ್ವಭಾವಿ ಸಭೆಯಲ್ಲಿ ಶಾಸಕ ಜಿ. ಜನಾರ್ದನರೆಡ್ಡಿ ಮಾತನಾಡಿ, ಹನುಮ ಮಾಲಾಧಾರಿಗಳ ಮಾಲಾ ವಿಸರ್ಜನಾ ಕಾರ್ಯಕ್ರಮ ಯಶಸ್ವಿಯಾಗಲು ಕುಡಿಯುವ ನೀರು, ಸ್ನಾನ, ತುರ್ತು ಆರೋಗ್ಯ ಪರೀಕ್ಷೆಯಂತ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು.
ಅಲ್ಲದೇ ಮುನ್ನೆಚ್ಚರಿಕೆಯಾಗಿ ಸೂಕ್ತ ಪೊಲೀಸ್ ಬಂದೋಬಸ್ತ್, ವಾಹನಗಳ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಹಾಗೂ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಸೇರಿದಂತೆ ಇನ್ನಿತರೆ ಸೂಕ್ತ ಸೌಲಭ್ಯ ಕಲ್ಪಿಸಲು ಸಿದ್ಧತೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಇದನ್ನೂ ಓದಿ: Alyssa Healy: ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಕ್ಕೆ ನಾಯಕಿಯಾದ ಮಿಚೆಲ್ ಸ್ಟಾರ್ಕ್ ಪತ್ನಿ
ಅಂಜನಾದ್ರಿ ಬೆಟ್ಟಕ್ಕೆ ನಾಡಿನ ವಿವಿಧ ಜಿಲ್ಲೆಗಳಿಂದ ಮಾಲಾ ವಿಸರ್ಜನೆಗಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿ ಸಂಚಾರದಟ್ಟಣೆ, ಜನದಟ್ಟಣೆ ನಿಯಂತ್ರಿಸಲು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು.
ರಾತ್ರಿ ಬರಲಿರುವ ಭಕ್ತರಿಗೆ ತಂಗಲು ಸೂಕ್ತ ವ್ಯವಸ್ಥೆ, ರಾತ್ರಿ ವೇಳೆ ವಿದ್ಯುತ್ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ, ಸ್ನಾನ ಘಟ್ಟಗಳನ್ನು ನಿರ್ಮಿಸಬೇಕು ಹಾಗೂ ಅನ್ನ ಪ್ರಸಾದಕ್ಕಾಗಿ ಬೆಟ್ಟದ ಎಡ ಭಾಗದಲ್ಲಿ ಸಂಸ್ಕೃತ ಪಾಠಶಾಲೆ ಆವರಣದಲ್ಲಿ ವ್ಯವಸ್ಥೆ ಮಾಡವಂತೆ ಶಾಸಕರು ಸೂಚಿಸಿದರು.
ಇದನ್ನೂ ಓದಿ: Cyber Crime: ಪಾರ್ಟ್ ಟೈಂ ಜಾಬ್ ಆಮಿಷ; ಲಿಂಕ್ ಕ್ಲಿಕ್ಕಿಸಿ ಕಾಸು ಲೂಟಿ, ಹೋಯಿತು ಕೋಟಿ ಕೋಟಿ!
ಈ ಸಂದರ್ಭದಲ್ಲಿ ಗಂಗಾವತಿ ತಹಸೀಲ್ದಾರ್ ವಿಶ್ವನಾಥ ಮುರಡಿ, ಕುಡಿಯುವ ನೀರು ವಿಭಾಗದ ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ್, ಆನೆಗೊಂದಿ, ಸಣಾಪುರ ಗ್ರಾಮ ಪಂಚಾಯಿತಿ ಪಿಡಿಒ, ಅಂಜನಾದ್ರಿ ದೇಗುಲದ ಆಡಳಿತ ಮಂಡಳಿಯ ವ್ಯವಸ್ಥಾಪಕರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.