ಕೊಪ್ಪಳ: ಸಾರ್ವಜನಿಕ ಶೌಚಾಲಯದ ಗೋಡೆ ಕುಸಿದು (Koppal Tragedy) ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಬಾನು ಬೇಗಂ(40) , ಉಮಾಬಾಯಿ ಬಪ್ಪರಗಿ(36) ಮೃತಪಟ್ಟವರು. ಮಹಿಳೆಯರ ಶೌಚಾಲಯಕ್ಕಾಗಿ ಗೋಡೆ ನಿರ್ಮಿಸಲಾಗಿತ್ತು. ಆದರೆ ಶುಕ್ರವಾರ ಸುರಿದ ಭಾರಿ ಮಳೆಗೆ (Karnataka Rain) ಗೋಡೆಯು ಕುಸಿದಿದೆ. ಶೌಚಕ್ಕೆ ಹೋಗಿದ್ದ ಮಹಿಳೆಯರ ಮೇಲೆ ಗೋಡೆ ರಭಸವಾಗಿ ಬಿದ್ದ ಪರಿಣಾಮ ಒಬ್ಬರು ಸ್ಥಳದಲ್ಲೆ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಉಸಿರು ಚೆಲ್ಲಿದ್ದಾರೆ.
ಪಟ್ಟಣ ಪಂಚಾಯತ್, ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಗೋಡೆಯ ಅಡಿಯಲ್ಲಿ ಸಿಲುಕಿದ್ದ ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳಪೆ ಕಾಮಗಾರಿಯಿಂದಲೇ ಇಂತಹ ದುರಂತ ನಡೆದಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Murder case : ಕುಡಿದ ನಶೆಯಲ್ಲಿ ಗೆಳೆಯನ ಕೊಂದ; ಸೇಡಿಗಾಗಿ ಗ್ರಾ.ಪಂ ಸದಸ್ಯನ ಮನೆ ಮೇಲೆ ಅಟ್ಯಾಕ್
ಈಜಲು ಹೋದ ಯುವಕ ನೀರುಪಾಲು
ಕೊಪ್ಪಳದಲ್ಲಿ ಕೆರೆಯಲ್ಲಿ ಈಜಲು ಹೋದ ಯುವಕನೊರ್ವ ನೀರು ಪಾಲಾಗಿದ್ದಾನೆ. ಮಂಜುನಾಥ್ (19) ಮೃತ ದುರ್ದೈವಿ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಾಣಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮದ ನಿವಾಸಿಯಾದ ಮಂಜುನಾಥ ತನ್ನ ನಾಲ್ವರು ಸ್ನೇಹಿತರೊಂದಿಗೆ ಈಜಲು ಹೋಗಿದ್ದ. ಈ ವೇಳೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ