ಕೊಪ್ಪಳ: ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ (MLA Basavaraja Rayareddy) ಅವರು ಕೊಪ್ಪಳ (Koppala) ಜಿಲ್ಲೆಗೆ ಕಳಸ ಇದ್ದಂತೆ. ಜಿಲ್ಲೆಯ ಅಭಿವೃದ್ಧಿ (Development) ವಿಚಾರದಲ್ಲಿ ಅವರ ಮಾರ್ಗದರ್ಶನದಲ್ಲಿ ಮುಂದುವರಿಯುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಯಲಬುರ್ಗಾ ತಾಲೂಕು ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸಚಿವರು, ಸಾರ್ವಜನಿಕರ ಕುಂದುಕೊರತೆ ಆಲಿಸಿ ಮಾತನಾಡಿದರು.
ಬಸವರಾಜ ರಾಯರೆಡ್ಡಿ ಅವರು ನಮ್ಮ ಹಿರಿಯ ನಾಯಕರು. ಅಭಿವೃದ್ಧಿ ವಿಚಾರದಲ್ಲಿ ರಾಯರೆಡ್ಡಿ ಅವರಿಂದ ನಾವು ಕಲಿಯುವುದು ಸಾಕಷ್ಟಿದೆ. ರೈಲ್ವೆ ಲೈನ್ ಸೇರಿದಂತೆ ಜಿಲ್ಲೆಯಲ್ಲಿ ಅವರ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಇಡೀ ರಾಜ್ಯದಲ್ಲಿ ಮಾದರಿಯಾಗುವಂತಹ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಹಲವು ಯೋಜನೆಗಳನ್ನು ತಂದಿದ್ದಾರೆ ಎಂದರು.
ಇದನ್ನೂ ಓದಿ: Karnataka Bandh : ಇಂದು ರಾತ್ರಿಯಿಂದಲೇ ಸೆಕ್ಷನ್ 144 ಜಾರಿ; ರ‍್ಯಾಲಿ, ಮೆರವಣಿಗೆಗೆ ಅವಕಾಶವಿಲ್ಲ
ಇನ್ನು ಅಭಿವೃದ್ಧಿ ದೃಷ್ಟಿಯಿಂದ ವಿಧಾನಸಭಾ ಕ್ಷೇತ್ರವಾರು ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರೊಟ್ಟಿಗೆ ಸಭೆ ನಡೆಸುತ್ತಿದ್ದೇನೆ. ಈಗಾಗಲೇ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಸಭೆ ನಡೆಸಿದ್ದೇನೆ. ಮುಂದಿನ ಹದಿನೈದು ದಿನದಲ್ಲಿ ಗಂಗಾವತಿ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ತಿಂಗಳಲ್ಲಿ ಎರಡು ತಾಲೂಕಿನಲ್ಲಿ ಜನತಾ ದರ್ಶನ ಆಗಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಜನತಾ ದರ್ಶನದಿಂದ ನಮ್ಮ ಸರ್ಕಾರ ಜನ ಸಾಮಾನ್ಯರ ಬಳಿ ಹೋಗುತ್ತಿದೆ. ಇದರಿಂದಾಗಿ ಜನ ಸರ್ಕಾರಿ ಕಚೇರಿಗೆ ಅಲೆದಾಡುವುದು ತಪ್ಪಲಿದೆ. ಜನತಾ ದರ್ಶನದಲ್ಲಿ ಸ್ವೀಕೃತವಾದ ಅರ್ಜಿಗಳನ್ನು ಹದಿನೈದು ದಿನದಲ್ಲಿ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಿವರಾಜ್ ತಂಗಡಗಿ ಅವರು ತಿಳಿಸಿದರು.
ಇದನ್ನೂ ಓದಿ: ವಿಶ್ವಕಪ್ ಹಿನ್ನೋಟ: ಒಂದೇ ವಿಶ್ವಕಪ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಸಾಧಕರಿವರು…
ಈ ಸಂದರ್ಭದಲ್ಲಿ ಶಾಸಕ ಬಸವರಾಜ ರಾಯರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಖಂಡರು, ಇತರರು ಉಪಸ್ಥಿತರಿದ್ದರು.