ಗಂಗಾವತಿ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರ ಬಂಧನ ಖಂಡಿಸಿ, ಅವರ ಅಭಿಮಾನಿಗಳಿಂದ ಅಕ್ಟೋಬರ್ 1 ರಂದು ಬೃಹತ್ ವಾಹನ ರ್ಯಾಲಿ (Vehicle Rally) ಹಮ್ಮಿಕೊಳ್ಳಲಾಗಿದೆ ಎಂದು ಚಂದ್ರಬಾಬು ನಾಯ್ಡು ಅಭಿಮಾನಿಗಳ ಸಂಘದ ಸಂಚಾಲಕ ಪ್ರಸಾದ್ ಕಲ್ಗುಡಿ ತಿಳಿಸಿದ್ದಾರೆ.
ಈ ಕುರಿತು ಗಂಗಾವತಿಯ ವಿದ್ಯಾನಗರದಲ್ಲಿರುವ ಅಮರ್ ಗಾರ್ಡನ್‌ನಲ್ಲಿ ಭಾನುವಾರ ನಡೆದ ವಿವಿಧ ಪಕ್ಷಗಳ ಪ್ರಮುಖರ, ಅಭಿಮಾನಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಾರಟಗಿಯಿಂದ ಗಂಗಾವತಿಯವರೆಗೆ ಅ.1 ರಂದು ಕಾರ್ ಮತ್ತು ಬೈಕ್‌ಗಳ ಬೃಹತ್ ರ್ಯಾಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ನೂರಾರು ಬೈಕ್ ಮತ್ತು ಕಾರುಗಳ ಮೂಲಕ ರ್ಯಾಲಿ ಮಾಡಲಾಗುವುದು. ಗಂಗಾವತಿ ಎಪಿಎಂಸಿ ಆವರಣದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುವುದು. ಸಿಬಿಎಸ್ ವೃತ್ತದಿಂದ ಪಾದಯಾತ್ರೆಯ ಪ್ರತಿಭಟನೆ ಹಮ್ಮಿಕೊಂಡು, ನಗರದ ಪ್ರಮುಖ ವೃತ್ತ ರಸ್ತೆಗಳ ಮೂಲಕ ಸಾಗಿ ಶ್ರೀ ಕೃಷ್ಣದೇವರಾಯ ವೃತ್ತಕ್ಕೆ ತಲುಪಿ ಅಲ್ಲಿ ಸಾಂಕೇತಿಕ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: Karnataka Bandh : ಇಂದು ರಾತ್ರಿಯಿಂದಲೇ ಸೆಕ್ಷನ್ 144 ಜಾರಿ; ರ‍್ಯಾಲಿ, ಮೆರವಣಿಗೆಗೆ ಅವಕಾಶವಿಲ್ಲ
ಬಳಿಕ ಗಂಗಾವತಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ಚಂದ್ರಬಾಬು ನಾಯ್ಡು ಅವರ ಬಂಧನ ಸಂವಿಧಾನ ಬಾಹಿರವಾಗಿದ್ದು ಆಂಧ್ರಪ್ರದೇಶ ಸರ್ಕಾರ ಮತ್ತು ಸಿಎಂ ಜಗನ್ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.