ಕೊಪ್ಪಳ: ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ್ದ ಹುಲಗಿ ಕಟ್ಟೆಯ ಶಾಸನವೊಂದು ತಾಲೂಕಿನ (Koppala News) ಹೊಳೆ ಮುದ್ಲಾಪುರದ ಬಳಿ ಪತ್ತೆಯಾಗಿದೆ.
ತಾಲೂಕಿನ ಹೊಳೆ ಮುದ್ಲಾಪುರದ ಬಳಿ ಹುಲಗಿ ಅಣೆಕಟ್ಟೆಯ ಹತ್ತಿರ ವಿಜಯನಗರ ಕಾಲುವೆ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮ, ವಿಜಯನಗರ ಕಾಲುವೆಗಳ ಆಧುನಿಕರಣ ಯೋಜನೆ ನಂ-1 ಮುನಿರಾಬಾದ್‌ನ ತುಂಗಾಭದ್ರ ಜಲಾಶಯ ವಿಭಾಗದವರು ಕಾಮಗಾರಿ ಕೈಗೊಳ್ಳುವಾಗ ಶಾಸನವು ಇರುವ ಬಗ್ಗೆ ಮಾಹಿತಿಯನ್ನು ರಾಜ್ಯ ಪುರಾತತ್ತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆಗೆ ವಿಜಯನಗರ ಕಾಲುವೆ ಯೋಜನೆಯ ಸಂವಹನ ಮತ್ತು ದಾಖಲಾತಿ ತಜ್ಞ ಮಲ್ಲಿಕಾರ್ಜುನ ಹೊಸಪಾಳ್ಯ ತಿಳಿಸಿದ್ದರು. ಕಮಲಾಪುರ-ಹಂಪಿಯ ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆಯ ಉಪ ನಿರ್ದೇಶಕ ಡಾ.ಆರ್.ಶೇಜೇಶ್ವರ ಹಾಗೂ ಪುರಾತತ್ವ ಇಲಾಖೆಯ ಸಹಾಯಕ ಡಾ.ಆರ್. ಮಂಜನಾಯ್ಕ ಅವರು ಕ್ಷೇತ್ರ ಕಾರ್ಯ ಕೈಗೊಂಡಾಗ ಅಲ್ಲಿ ಆರು ಸಾಲಿನ ವಿಜಯನಗರ ಅರಸರ ಕಾಲದ ಶಾಸನವು ಕಂಡುಬಂದಿದೆ.
ಇದನ್ನೂ ಓದಿ: Yadgiri News: ಶ್ರೀಶೈಲಂನಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ
ಶಾಸನವು ತುಂಗಾಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಹುಲಗಿಯ ಅಣೆಕಟ್ಟೆಯ ಹೊಳೆ ಮುದ್ಲಾಪುರದ ಹತ್ತಿರದ ಅಣೆಕಟ್ಟಿನ ಪಕ್ಕದಲ್ಲಿ ಹುಟ್ಟುಬಂಡೆಯಲ್ಲಿದೆ. ಇದು 14 ಆಡಿ ಉದ್ದ ಹಾಗೂ 3 ಆಡಿ ಆಗಲವಾಗಿದ್ದು ಆರು ಸಾಲಿನ ಕನ್ನಡ ಶಾಸನವಾಗಿದೆ. ಈ ಶಾಸನವು ತುಂಗಾಭದ್ರ ನೀರಿನಿಂದ ಮುಳುಗಿರುತ್ತಿತ್ತು ಈ ವರ್ಷ ಮಳೆ ಕಡಿಮೆ ಇದ್ದರಿಂದ ಶಾಸನವು ಕಂಡು ಬಂದಿದೆ.
ಇದನ್ನೂ ಓದಿ: Golden Star Ganesh: ಮೈಸೂರಿನಲ್ಲಿ ಮೇ 25ರಂದು ʼಕೃಷ್ಣಂ ಪ್ರಣಯ ಸಖಿʼ ಚಿತ್ರದ ಫಸ್ಟ್ ಸಾಂಗ್ ರಿಲೀಸ್
ಶಾಸನದ ಸಾರಾಂಶ
ವಿಜಯನಗರದ ಅರಸರ ಮಹಾಪ್ರಧಾನ ನಾಗಂಣದಂಣನಾಯಕನು ಮಲಿನಾಥದೇವರ ವಾಯುವ್ಯಕ್ಕೆ ಕಲಊರ ಎಂಬ ಸ್ಥಳದಲ್ಲಿ ತುಂಗಾಭದ್ರ ನದಿಗೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿಸುತ್ತಾರೆ. ಈ ಕಟ್ಟೆಗೆ ಹುಲಿಗಿಯಕಟ್ಟಿ ಎಂಬ ಉಲ್ಲೇಖವಿದೆ. ಇಲ್ಲಿಂದ ಒಂದು ಕಾಲುವೆಯನ್ನು ನಿರ್ಮಿಸಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗಿಗೆ ನೀರನ್ನು ಕಾಲುವೆಯ ಮುಖಾಂತರ ನೀರನ್ನು ಹರಿಸಿರುವುದು ಈ ಶಾಸನದಿಂದ ತಿಳಿದುಬರುತ್ತದೆ. ಇದರಲ್ಲಿ ಕಾಲುವೆಯ ಉಲ್ಲೇಖವು ಸಹ ಇದೆ. ಶಾಸನವನ್ನು ಡಾ.ಜಗದೀಶ ಅಗಸಿಬಾಗಿಲ ಓದಿದ್ದು,ಈ ಶಾಸನದ ಕುರಿತು ಇಲಾಖೆಯಿಂದ ಹೆಚ್ಚಿನ ಅಧ್ಯಯನ ನಡೆಯುತ್ತಿದೆ ಎಂದು ರಾಜ್ಯ ಪುರಾತತ್ತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆಯ ಉಪ ನಿರ್ದೇಶಕ ಡಾ.ಆರ್. ಶೇಜೇಶ್ವರ ತಿಳಿಸಿದ್ದಾರೆ.