Site icon Vistara News

Koppala News: ಜನವರಿ ಕೊನೆಯ ವಾರದಲ್ಲಿ ಆನೆಗೊಂದಿ ಉತ್ಸವ-2024: ಶಾಸಕ ಜಿ. ಜನಾರ್ದನ ರೆಡ್ಡಿ

Gangavathi MLA G Janardana Reddy latest pressmeet

ಗಂಗಾವತಿ: ವಿಶ್ವವಿಖ್ಯಾತ ಅಂಜನಾದ್ರಿ (Anjanadri) ಅಭಿವೃದ್ಧಿಗೆ ಮತ್ತು ಗಂಗಾವತಿ (Gangavathi) ನಗರದ ಮಾದರಿ ಅಭಿವೃದ್ಧಿಗೆ (Development) ಈಗಾಗಲೇ ಮಾಸ್ಟರ್ ಪ್ಲಾನ್ ರೆಡಿಯಾಗಿದ್ದು, ಹಂತಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಹೇಳಿದರು.

ನಗರದ ಮಂಥನ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂಜನಾದ್ರಿ ಅಭಿವೃದ್ದಿಗೆ ಬಿಡುಗಡೆಯಾಗಿದ್ದ ರೂ. 120 ಕೋಟಿ ಮೊತ್ತ ಕೇವಲ ಸರ್ಕಾರಿ ಆದೇಶ ಮಾತ್ರ ಆಗಿತ್ತು. ನಾನು ಶಾಸಕನಾದ ಬಳಿಕ ಆದೇಶವನ್ನು ಹಣಕಾಸು ಇಲಾಖೆಗೆ ಸಲ್ಲಿಸಿ ಮಂಜೂರಾತಿಗೆ ಯತ್ನಿಸಿದ್ದೇನೆ ಎಂದರು.

ಅಂಜನಾದ್ರಿ ಸಮೀಪ ಆರು ಎಕರೆ ಜಮೀನಿನಲ್ಲಿ 600 ಕೊಠಡಿಗಳ ವಸತಿ ಸಮುಚ್ಛಯ, ಶೌಚಾಲಯ, ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಲಾಗುವುದು. ಅಲ್ಲಿನ ತ್ಯಾಜ್ಯವನ್ನು ಸಮೀಪದ ನದಿಗೆ ಬಿಡದೇ, ಮರು ಸಂಸ್ಕರಿಸಿ ಉದ್ಯಾನವನದ ಗಿಡಗಳಿಗೆ ಬಳಕೆ ಮಾಡುವ ಯೋಜನೆ ರೂಪಿಸಲಾಗಿದೆ.

ಕೆಕೆಆರ್‌ಡಿಬಿಯಿಂದ 40 ಕೋಟಿ ಮೊತ್ತದಲ್ಲಿ ಅಂಜನಾದ್ರಿ ಅಭಿವೃದ್ಧಿಗೆ ಹಣ ಮೀಸಲಿಡಲಾಗಿದೆ. ಅಂಜನಾದ್ರಿ ಮತ್ತು ಗಂಗಾವತಿಯ ಅಭಿವೃದ್ದಿಗೆ ಯೋಜನೆ ರೂಪಿಸುವಂತೆ ಅಂತರಾಷ್ಟ್ರೀಯ ಮಟ್ಟದ ಐಡೆಕ್ ಮತ್ತು ಸೃಷ್ಟಿ ಎಂಬ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದರು.

ಇದನ್ನೂ ಓದಿ: Mysore dasara : ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ; ನಾಳೆ ಹಂಸಲೇಖರಿಂದ ಸಿಗಲಿದೆ ಚಾಲನೆ

ಅಂಜನಾದ್ರಿಯನ್ನು ರಾಜ್ಯದ ನಾನಾ ಪ್ರಮುಖ ಧಾರ್ಮಿಕ ತಾಣಗಳ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಅಗತ್ಯವಿರುವ 400 ಎಕರೆ ಕಂದಾಯ ಮತ್ತು ಅರಣ್ಯ ಇಲಾಖೆಯ ಜಮೀನು ಈಗಾಗಲೆ ಗುರುತಿಸಲಾಗಿದೆ. ಈ ಸಂಬಂಧ ಅಧಿಕಾರಿಗಳ ಮಟ್ಟದಲ್ಲೂ ಸಭೆ ನಡೆದಿದೆ ಎಂದರು.

ಆನೆಗೊಂದಿ ಉತ್ಸವ

ಕಳೆದ ಹಲವು ವರ್ಷದಿಂದ ಮರಿಚೀಕೆಯಾಗಿರುವ ಆನೆಗೊಂದಿ ಉತ್ಸವವನ್ನು ಜನವರಿ 27, 28 ಮತ್ತು 29 ರಂದು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಶಾಸಕ ಜಿ. ಜನಾರ್ದನರೆಡ್ಡಿ ಹೇಳಿದರು.

ಈಗಾಗಲೇ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಸಕಾರಾತ್ಮಕವಾಗಿಯೇ ಸಚಿವರು ಸ್ಪಂದನೆ ನೀಡಿದ್ದು, ಎರಡು ಕೋಟಿ ರೂಪಾಯಿ ಬಿಡುಗಡೆಗೆ ಭರವಸೆ ನೀಡಿದ್ದಾರೆ.
ಹೀಗಾಗಿ ಸರ್ಕಾರ ಅನುದಾನ ಮತ್ತು ಖಾಸಗಿ ಸಹಭಾಗಿತ್ವದ ಸಹಕಾರದಲ್ಲಿ ಆನೆಗೊಂದಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಈ ಕುರಿತು ಶೀಘ್ರದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಹೇಳಿದರು.

ನಗರಕ್ಕೆ ಮಾಸ್ಟರ್ ಪ್ಲಾನ್

ನಗರದ ರಾಣಾ ಪ್ರತಾಪ್ ಸಿಂಗ್ ವೃತ್ತದಿಂದ ಇಂದಿರಾವೃತ್ತ, ಬೈಪಾಸ್, ಕನಕದಾಸ ವೃತ್ತ, ಕೃಷ್ಣದೇವರಾಯ ವೃತ್ತದ ಮೂಲಕ ಆನೆಗೊಂದಿ ರಸ್ತೆ ಎಸ್ಕೆಎನ್ಜಿ ಕಾಲೇಜಿನವರೆಗೂ ರಸ್ತೆ ಅಗಲೀಕರಣ ಮಾಡಿ ಎರಡು ಪಥದ ರಸ್ತೆ ನಿರ್ಮಾಣ ಮಾಡಲಾಗುವುದು.

ಅಲ್ಲದೇ ಗಂಗಾವತಿಯಿಂದ ಆನೆಗೊಂದಿವರೆಗೂ ಸದ್ಯಕ್ಕೆ ಇರುವ 5 ಮೀಟರ್ ರಸ್ತೆಯನ್ನು ಹತ್ತೂವರೆ ಮೀಟರ್‌ಗೆ ವಿಸ್ತರಿಸಿ ಅಭಿವೃದ್ಧಿ ಪಡಿಸಲಾಗುವುದು. ಅಲ್ಲದೇ ರಸ್ತೆಯುದಕ್ಕೂ ಬೀದಿದೀಪ ಅಳವಡಿಸಲಾಗುವುದು. ಅಂಜನಾದ್ರಿಗೆ ಬರುವ ಭಕ್ತರು ರಾತ್ರಿಯಲ್ಲೂ ನಿರ್ಭಯವಾಗಿ ಪಾದಯಾತ್ರೆ ಕೈಗೊಳ್ಳಬಹುದು.

ಇದನ್ನೂ ಓದಿ: Money Guide: 250 ರೂ. ಉಳಿಸಿ; ನಿವೃತ್ತಿ ಬಳಿಕ ಪ್ರತಿ ತಿಂಗಳು 5 ಸಾವಿರ ರೂ. ಪೆನ್ಶನ್ ಗಳಿಸಿ

ಇದಕ್ಕಾಗಿ 22 ಕೋಟಿ ಮೊತ್ತದ ಯೋಜನೆ ಸಿದ್ಧಪಡಿಸಲಾಗಿದ್ದು, ಲೋಕೋಪಯೋಗಿ ಇಲಾಖೆ ಕಾಮಗಾರಿ ಮಾಡಲಿದೆ. ಅತ್ತ ಹುಲಗಿ, ಕಡೇಬಾಗಿಲು ಸೇತುವೆ ಭಾಗದಲ್ಲೂ ರಾತ್ರಿ ಸಂಚಾರಕ್ಕೆ ಅನುಕೂಲವಾಗಲು ಲೈಟ್‌ಗಳನ್ನು ಅಳವಡಿಸಲಾಗುವುದು ಎಂದರು.

ನಗರದ ಅಭಿವೃದ್ಧಿ ವಿಚಾರಕ್ಕೆ ಜನರ ಸಹಕಾರ ಮುಖ್ಯ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಒತ್ತಡಕ್ಕೆ ನಾನು ಮಣಿಯುವುದಿಲ್ಲ. ಜನರಿಗೆ ಈ ಮೊದಲು ಕೊಟ್ಟ ಭರವಸೆಯಂತೆ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆಯಾಗಿದ್ದು, ಮುಂದಿನ ಚುನಾವಣೆಯ ಹೊತ್ತಿಗೆ ನಗರದ ವಿನ್ಯಾಸ ಬದಲಿಸುವ ಆಶಯವಿದೆ ಎಂದರು.

ಇದನ್ನೂ ಓದಿ: Post Office: ಬಾಡಿಗೆ ಹಣ ಕೊಟ್ಟಿಲ್ಲಂತ ಪೋಸ್ಟ್‌ ಆಫೀಸ್‌ಗೆ ಬೀಗ ಜಡಿದ ಮಾಲೀಕ!

ರೂ. 1500 ಕೋಟಿಗೆ ಬೇಡಿಕೆ

ಕೇಂದ್ರದ ಲೋಕೋಪಯೋಗಿ ಸಚಿವ ನಿತಿನ್ ಗಡ್ಕರಿ ಅವರಿಗೆ ಅಂಜನಾದ್ರಿ ಸುತ್ತಲಿನ ರಸ್ತೆ ಅಭಿವೃದ್ಧಿಗೆ 500 ಕೋಟಿ ಮತ್ತು ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಅವರನ್ನು ಸಂಪರ್ಕಿಸಿ ಒಂದು ಸಾವಿರ ಕೋಟಿ ಮೊತ್ತದ ಅನುದಾನಕ್ಕೆ ಬೇಡಿಕೆ ಇಡಲಾಗಿದೆ. ವಿಶೇಷ ಅನುದಾನ ಕಲ್ಪಿಸುವಂತೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಲ್ಲದೇ ನಿತೀನ್ ಗಡ್ಕರಿ ಕಾಮಗಾರಿ ಚಾಲನೆಗೆ ಸ್ವತಃ ತಾವೇ ಬರುವುದಾಗಿ ಹೇಳಿದ್ದು ದಿನಾಂಕ ನಿಗದಿಯಾಗಬೇಕಿದೆ ಎಂದು ತಿಳಿಸಿದರು.

Exit mobile version