ಗಂಗಾವತಿ: ತಾಲೂಕಿನ ಪ್ರಸಿದ್ಧ ಅಂಜನಾದ್ರಿ ಬೆಟ್ಟದ (Anjanadri Hill) ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಕಾಣಿಕೆ ಹುಂಡಿಯ ಹಣ ಈ ಬಾರಿ ಕುಸಿತ ಕಂಡ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ, ಹಣ ಸೋರಿಕೆಯ ವಿಡಿಯೋವೊಂದು ವೈರಲ್ ಆಗಿದೆ. ಇದು ಹಲವು ಅನುಮಾನಗಳಿಗೆ (Koppala News) ಎಡೆಮಾಡಿಕೊಟ್ಟಿದೆ.
ಅಂಜನಾದ್ರಿ ದೇಗುಲದ ಮಾಸಿಕ ಕಾಣಿಕೆ ಹುಂಡಿ ಹಣವು ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಈ ಕುರಿತು ಚರ್ಚೆಗೆ ಕಾರಣವಾಗಿತ್ತು. ಇದೀಗ ಹಣ ಸೋರಿಕೆಯ ಬಗ್ಗೆ ವೀಡಿಯೊ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಅರ್ಚಕರಂತೆ ಕಾಣುತಿದ್ದು, ಮೊದಲಿಗೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಕಾಣಿಕೆಯ ತಟ್ಟೆಯಲ್ಲಿ ಭಕ್ತರು ಹಾಕಿದ್ದ ದೊಡ್ಡ ಪ್ರಮಾಣದ ನೋಟುಗಳನ್ನು ಕಂತೆಕಂತೆಯಾಗಿ ಚೀಲಕ್ಕೆ ತುಂಬಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ.
ಇದನ್ನೂ ಓದಿ: Bengaluru News: ಸಿಎಸ್‌ಆರ್ ಮಹತ್ವದ ಸಾಧನೆಗಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ಗೆ ಪ್ರಶಂಸೆ
ಮಾಸಿಕ ಸರಾಸರಿ 20ರಿಂದ 22 ಲಕ್ಷ ರೂಪಾಯಿ ಆದಾಯ ಹೊಂದಿರುವ ಅಂಜನಾದ್ರಿ ದೇಗುಲದ ಕಾಣಿಕೆ ಹುಂಡಿ ಹಣವು ಇದೇ ಮೊದಲ ಬಾರಿಗೆ 36 ದಿನಕ್ಕೆ ಹುಂಡಿಯಲ್ಲಿ ಕೇವಲ 9.89 ಲಕ್ಷ ರೂಪಾಯಿ ಮೊತ್ತದ ಹಣ ಮಾತ್ರ ಸಂಗ್ರಹವಾಗಿತ್ತು. ಇದು ಹಲವು ಅನುಮಾನಕ್ಕೆ ಕಾರಣವಾಗಿತ್ತು.
ದೇಗುಲದ ಅಭಿವೃದ್ಧಿಗೆ ಎಂದು ಭಕ್ತರು ಸಲ್ಲಿಸಿರುವ ಹಣ ತೆಗೆದುಕೊಂಡು ಹೋಗಲು ಅಧಿಕಾರಿಗಳು ಹೇಗೆ ಅವಕಾಶ ನೀಡಿದ್ದಾರೆ ಎಂಬ ಚರ್ಚೆ ಈಗ ಸಾರ್ವಜನಿಕರು ಮತ್ತು ಭಕ್ತರ ವಲಯದಲ್ಲಿ ವ್ಯಕ್ತವಾಗಿದೆ. ಇದಕ್ಕೆ ದೇಗುಲದ ಆಡಳಿತ ಮಂಡಳಿ ಸ್ಪಷ್ಟನೆ ನೀಡಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡ ನೀಲಕಂಠ ನಾಗಶೆಟ್ಟಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Karnataka Weather : ಮುಂದಿನ 3 ದಿನ ಏರುತ್ತೆ ಟೆಂಪ್ರೇಚರು
ಎಸಿ ಪ್ರತಿಕ್ರಿಯೆ ಏನು?:
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗತ್ತಿ, ಆದಾಯದಲ್ಲಿ ಭಾರಿ ಪ್ರಮಾಣ ಇಳಿಕೆಯಾಗಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಏನು ಕಾರಣ ಎಂದು ಪತ್ತೆಹಚ್ಚುವ ಕೆಲಸ ಮಾಡಲಾಗುತ್ತಿದೆ. ಅಲ್ಲದೇ ಖಾಸಗಿ ವ್ಯಕ್ತಿಯೊಬ್ಬರು ಕೇವಲ ಪೂಜೆ ಎಂದು ನ್ಯಾಯಾಲಯದಿಂದ ಅವಕಾಶ ಪಡೆದು, ಇದೀಗ ದೇಗುಲಕ್ಕೆ ಬರುವ ಭಕ್ತರಿಗೆ ದಾರಿ ತಪ್ಪಿಸಿ ದೇಣಿಗೆ ಪಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.