Site icon Vistara News

Koppala News: ಕೊಪ್ಪಳ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ನೂತನ ಕಟ್ಟಡಕ್ಕೆ ಭೂಮಿಪೂಜೆ

Bhumi Pooja for new building of Koppal District Courts Complex by Chief Justice of High Court Prasanna B Varale

ಕೊಪ್ಪಳ: ನಗರದ ಕುಷ್ಟಗಿ ರಸ್ತೆ ಬಳಿ ಶನಿವಾರ ಕೊಪ್ಪಳ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ (Court Complex) ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ, ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರು ಭೂಮಿಪೂಜೆ ನೆರವೇರಿಸಿದರು.

ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿನ ವ್ಯಾಜ್ಯಗಳು ತೀವ್ರಗತಿಯಲ್ಲಿ ಬಗೆಹರಿದು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸವನ್ನು ಬಲಗೊಳಿಸಲು ಹೈಕೋರ್ಟ್ ಬದ್ಧವಾಗಿದೆ. ಈ ದಿಶೆಯಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ತಿಳಿಸಿದರು.

ಯಾವುದೇ ನ್ಯಾಯಾಲಯಗಳಲ್ಲಿ ಅನಗತ್ಯ ವ್ಯಾಜ್ಯಗಳು ಬಾಕಿ ಉಳಿಯಬಾರದು. ಅವು ತ್ವರಿತಗತಿಯಲ್ಲಿ ವಿಲೇವಾರಿಯಾಗಲು ಅವಶ್ಯವಿರುವ ಮಾನವ ಸಂಪನ್ಮೂಲ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತದೆ. ಕೊಪ್ಪಳ ಜಿಲ್ಲೆಯ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣ ನಮ್ಮ ಕಾರ್ಯಸಾಧನೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: KL Rahul: ಕನ್ನಡಿಗ ಕೆ.ಎಲ್​ ರಾಹುಲ್​ಗೆ ಒಲಿದ ಉಪನಾಯಕ ಸ್ಥಾನ

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀಶಾನಂದ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರ ಪ್ರಮುಖವಾಗಿತ್ತು. ಅಂತಹ ಹೋರಾಟ ಪರಂಪರೆಯು ವಕೀಲರ ಸಮೂಹದ್ದಾಗಿದೆ. ಕೊಪ್ಪಳ ಜಿಲ್ಲಾ ರಚನಾ ಹೋರಾಟ ಸೇರಿದಂತೆ ಅನೇಕ ಕಾರ್ಯಸಾಧನೆಯಲ್ಲಿ ಕೊಪ್ಪಳ ಜಿಲ್ಲೆಯ ವಕೀಲರ ಪಾತ್ರ ಹಿರಿದಾಗಿದೆ.

ಕೊಪ್ಪಳ ಅಂದರೆ ಹೋರಾಟ, ಹೋರಾಟ ಅಂದರೆ ಕೊಪ್ಪಳ ಅನ್ನುವುದು ಈ ಜಿಲ್ಲೆಯ ವಿಶೇಷತೆಯಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಹೊಸ ನ್ಯಾಯಾಲಯ ಸಂಕೀರ್ಣಕ್ಕೆ ಭೂಮಿಪೂಜೆ ನಡೆಸಿರುವುದು ಮೊದಲನೆಯ ದಿಟ್ಟ ಹೆಜ್ಜೆಯಾಗಿದೆ. ನ್ಯಾಯಾಲಯದ ನೀಲಿನಕ್ಷೆ ಈಗಾಗಲೇ ಸಿದ್ಧವಾಗಿದೆ. ಮೊದಲನೇ ಹಂತದ ಅನುದಾನ ಬಿಡುಗಡೆಗೆ ಕೋರಿದ ಕಡತ ಸಿದ್ಧವಾಗಿದೆ. ಕಾಲಮಿತಿಯೊಳಗೆ ಈ ಕಟ್ಟಡ ನಿರ್ಮಾಣವಾಗಿ ಕೊಪ್ಪಳ ಜಿಲ್ಲೆ ಇತರರಿಗೆ ಮಾದರಿಯಾಗಲಿ ಎಂದು ತಿಳಿಸಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್‌ ಮಾತನಾಡಿ, ಕೊಪ್ಪಳವು ಪ್ರಗತಿಪಥದಲ್ಲಿರುವ ಜಿಲ್ಲೆಯಾಗಿದೆ. ಸಂಸದ ಕರಡಿ ಸಂಗಣ್ಣ ಅವರ ಸತತ ಪ್ರಯತ್ನದಿಂದಾಗಿ ಬಹುವರ್ಷಗಳ ನಂತರ ಕೊಪ್ಪಳ ಜಿಲ್ಲೆಯ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿರುವುದು ದಾಖಲಾರ್ಹ ಬೆಳವಣಿಗೆಯಾಗಿದೆ ಎಂದರು.‌

ಇದನ್ನೂ ಓದಿ: Home Remedies For Cough And Cold: ನೆಗಡಿ, ಕೆಮ್ಮೇ? ಬದಲಾಗುತ್ತಿರುವ ವಾತಾವರಣಕ್ಕೆ ಬೇಕಾದ ಮನೆಮದ್ದುಗಳಿವು

ಸಂಸದ ಕರಡಿ ಸಂಗಣ್ಣ ಮಾತನಾಡಿ, ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಭೂಮಿಪೂಜೆ ನಡೆದಿರುವುದು ಸಂಭ್ರಮದ ದಿನ. ಈ ಯೋಜನೆ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಬಹಳ ದಿನಗಳಾದರೂ ಇದೀಗ ಹೊಸ ಕಟ್ಟಡಕ್ಕೆ ಅಡಿಗಲ್ಲು ನೆರವೇರಿರುವುದು ನಮ್ಮ ಸೌಭಾಗ್ಯ ಎಂದರು.

ಸಮಾರಂಭದಲ್ಲಿ ಉಚ್ಚ ನ್ಯಾಯಾಲಯದ ರಿಜಿಸ್ಟರ್ ಜನರಲ್ ಕೆ.ಎಸ್. ಭರತ್‌ ಕುಮಾರ್‌, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವೇಂದ್ರ ಪಂಡಿತ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಭವಾನಿ ಎಲ್ ಜೆ., ಸರಸ್ವತಿದೇವಿ, ವಿಜಯಕುಮಾರ ಕನ್ನೂರ, ರಮೇಶ ಗಾಣಿಗೇರ, ಕೊಪ್ಪಳದ ಕಿರಿಯ ಸಿವಿಲ್ ನ್ಯಾಯಾಧೀಶ ಹರೀಶ್‌ ಕುಮಾರ್‌ ಎಂ., ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version