ಗಂಗಾವತಿ: ನನ್ನ ಖಾಸಗಿ ಜಮೀನಿನಲ್ಲಿ ನನ್ನ ಅನುಮತಿ ಪಡೆದುಕೊಳ್ಳದೇ ಆನೆಗೊಂದಿ ಉತ್ಸವದ (Anegondi Utsav) ವೇದಿಕೆ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ನ್ಯಾಯಾಲಯದ ಮೂಲಕ ತಡೆಯಾಜ್ಞೆ ತರುತ್ತೇನೆ ಎಂದು ಭೂ ಮಾಲೀಕ ಸೋಮಪ್ಪ ಯಲಬುರ್ಗಿ (Koppala News) ಹೇಳಿದರು.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಆನೆಗೊಂದಿ ಉತ್ಸವ ನಡೆಯುವ ವೇದಿಕೆ ಮುಂಭಾಗದಲ್ಲಿರುವ 200 ಅಡಿಗಳ ನಂತರದ ಭೂಮಿ ನಮ್ಮ ಒಡೆತನದಲ್ಲಿದೆ. ಅಲ್ಲಿ ಈಗಾಗಲೇ ವೇದಿಕೆ ನಿರ್ಮಾಣ ಕಾರ್ಯವನ್ನು ಜಿಲ್ಲಾಡಳಿತ ಕೈಗೊಂಡಿದೆ.
ಇದನ್ನೂ ಓದಿ: Uttara Kannada News: ಮುರ್ಡೇಶ್ವರದಲ್ಲಿ ಮಾ.8 ರಂದು ಮಹಾಶಿವರಾತ್ರಿ ಜಾಗರಣೆ ಉತ್ಸವ
ಈ ಬಗ್ಗೆ ಸೌಜನ್ಯಕ್ಕೂ ನಮ್ಮನ್ನು ಸಂಪರ್ಕಿಸುವ ಅಥವಾ ಅನುಮತಿ ಪಡೆದುಕೊಂಡಿಲ್ಲ. ಸ್ಥಳೀಯ ಶಾಸಕ ಜಿ. ಜನಾರ್ದನರೆಡ್ಡಿ ಸೇರಿದಂತೆ ಯಾರೊಬ್ಬರೂ ತಮ್ಮನ್ನು ಸಂಪರ್ಕಿಸಿಲ್ಲ. ಹೀಗಾಗಿ ನಾನು ನನ್ನ ಜಮೀನು ಉತ್ಸವ ಆಚರಣೆಗೆ ನೀಡಲಾರೆ ಎಂದು ತಿಳಿಸಿದರು.
ಮಾನವೀಯತೆ ದೃಷ್ಟಿಯಿಂದ ಮತ್ತು ಸಾರ್ವಜನಿಕ ಉತ್ಸವಕ್ಕೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಈ ಹಿಂದೆ ನಮ್ಮ ಜಮೀನು ಉತ್ಸವಕ್ಕೆ ಬಿಟ್ಟುಕೊಡಲಾಗಿತ್ತು. ಆದರೆ ಉತ್ಸವದ ಬಳಿಕ ಜಿಲ್ಲಾಡಳಿತ ನನ್ನ ಜಮೀನಿನ ಪಹಣಿ ಕಲಂನಲ್ಲಿ ಸರ್ಕಾರಿ ಎಂದು ನಮೂದಿಸಿತ್ತು.
ಇದನ್ನೂ ಓದಿ: Vijayanagara News: ಹಂಪಿ ಯೋಜನೆಗೆ ಶಂಕುಸ್ಥಾಪನೆ ಸಂತಸದ ಸಂಗತಿ: ಸಂಸದ ವೈ. ದೇವೇಂದ್ರಪ್ಪ
ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಸರಿಪಡಿಸುವ ಭರವಸೆ ನೀಡಿದರು. ಆದರೆ ಎರಡು ಮೂರು ವರ್ಷ ನ್ಯಾಯಾಲಯಕ್ಕೆ ಅಲೆದಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ನ್ಯಾಯಾಲಯದ ಮೂಲಕವೇ ಪಹಣಿ ತಿದ್ದುಪಡಿ ಮಾಡಿಸಿಕೊಂಡಿದ್ದೇವೆ. ಅಧಿಕಾರಿಗಳು ವಿನಾಃಕಾರಣ ತೊಂದರೆ ನೀಡುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಹೀಗಾಗಿ ಈ ಬಾರಿಯ ಉತ್ಸವಕ್ಕೆ ನಮ್ಮ ಜಮೀನು ನೀಡುವುದಿಲ್ಲ. ಹಾಗೊಂದು ವೇಳೆ ಅನಿವಾರ್ಯತೆ ಉಂಟಾದಲ್ಲಿ ಷರತ್ತು ಬದ್ಧವಾಗಿ ಜಿಲ್ಲಾಡಳಿತ ಲಿಖಿತ ಪತ್ರ ನೀಡಿದರೆ ಮಾತ್ರ ನೀಡುತ್ತೇನೆ ಎಂದು ಸೋಮಪ್ಪ ಹೇಳಿದರು.