ಗಂಗಾವತಿ: ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ನಂಬರ್-19 ನೀರಿನಲ್ಲಿ ಕೊಚ್ಚಿ ಹೋಗಿ ಅಪಾರ ಪ್ರಮಾಣದ ನೀರು (Koppala News) ನದಿ ಪಾಲಾಗಿ ರೈತರು ಕಂಗಾಲಾಗುತ್ತಿದ್ದರೆ, ಇತ್ತ ಗೇಟ್ ನಿರ್ಮಾಣ ಕಾಮಗಾರಿಯಲ್ಲಿ ಕಮಿಷನ್ ದಂಧೆ ಜೋರಾಗಿ ನಡೆಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಮುಕುಂದರಾವ್ ಭವಾನಿಮಠ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 22 ಅಡಿ ಅಗಲದ 60ಕ್ಕೂ ಹೆಚ್ಚು ಅಡಿ ಎತ್ತರದ ಬೃಹತ್ ಕಬ್ಬಿಣದ ಗೇಟ್ ನಿರ್ಮಾಣ ಕಾರ್ಯಕ್ಕೆ ನಾಡಿನ ಹೆಸರಾಂತ ಸಂಸ್ಥೆ ಹಾಗೂ ವಿಜಯನಗರ-ಬಳ್ಳಾರಿ ಜಿಲ್ಲೆಯಲ್ಲಿಯೇ ಇರುವ ಜಿಂದಾಲ್ ಸಂಸ್ಥೆ ಮುಂದೆ ಬಂದಿತ್ತು. ಆದರೆ ಆ ಸಂಸ್ಥೆ ಕಾಮಗಾರಿಗೆ ಕಮಿಷನ್ ನೀಡದು ಎಂಬ ಕಾರಣಕ್ಕೆ ಗೇಟ್ ನಿರ್ಮಾಣ ಕಾಮಗಾರಿಯಿಂದ ಕೊಕ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Tungabhadra Dam: ಜಲಾಶಯ ನಿರ್ವಹಣೆ ಕುರಿತ ಕೇಂದ್ರ ಸಮಿತಿ ಸಲಹೆಯನ್ನು ರಾಜ್ಯ ಸರ್ಕಾರ ಧಿಕ್ಕರಿಸಿದೆ; ಪ್ರಲ್ಹಾದ್ ಜೋಶಿ ಆರೋಪ
ಅನುಭವ, ಗುಣಮಟ್ಟದ ಖಾತರಿ ಮತ್ತು ಕಾಮಗಾರಿ ನಿರ್ವಹಿಸಿದ ಯಾವುದೇ ಪ್ರಮಾಣಪತ್ರ ಇಲ್ಲದ ಸ್ಥಳೀಯ ಅಮೀರ್ ಮತ್ತು ನಾರಾಯಣ ಎಂಜಿನಿಯರಿಂಗ್ ಎಂಬ ಎರಡು ಸಂಸ್ಥೆಗಳಿಗೆ ಗೇಟ್ ನಿರ್ಮಾಣದ ಜವಾಬ್ದಾರಿ ವಹಿಸಿರುವುದು ಅನುಮಾನಾಸ್ಪದವಾಗಿದೆ. ಯಾವ ಮಾನದಂಡದ ಮೇಲೆ ಅವರಿಗೆ ಗುತ್ತಿಗೆ ನೀಡಲಾಗಿದೆ ಎಂದು ಭವಾನಿಮಠ ಪ್ರಶ್ನಿಸಿದ್ದಾರೆ.
ತುರ್ತು, ವಿಕೋಪದಂತಹ ಸಂದರ್ಭದಲ್ಲಿ ಮಾಡಲಾಗುವ ಕಾಮಗಾರಿಗಳಿಗೆ ಕರ್ನಾಟಕ ಟೆಂಡರ್ ಪಾರದರ್ಶಕ ನಿಯಮ(ಕೆಟಿಟಿಪಿ)ಗಳ ಪ್ರಕಾರ ಟೆಂಡರ್ ಕರೆಯದೇ ಕಾಮಗಾರಿ ಮಾಡಲು ಅವಕಾಶ ಇರುವುದನ್ನೇ ಬಂಡವಾಳ ಮಾಡಿಕೊಂಡಿರುವ ಅಧಿಕಾರಿಗಳು ಮತ್ತು ರಾಜಕಾರಣಿಗಳು, ಗೇಟ್ ನಿರ್ಮಾಣ ಕಾಮಗಾರಿಯಲ್ಲೂ ಅಕ್ರಮಕ್ಕೆ ಮುಂದಾಗಿದ್ದಾರೆ.
ಸ್ಥಳೀಯ ಸಂಸ್ಥೆಗಳ ಬಗ್ಗೆ ಪೂರ್ವಪರ ಯಾವ ಮಾಹಿತಿ ನೀಡದೇ ಏಕಾಏಕಿ ಕಾಮಗಾರಿ ನೀಡಿರುವುದು ಏಕೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಜಿಂದಾಲ್‌ನವರು ಯಾವುದೇ ಪರ್ಸಂಟೇಜ್ ನೀಡುವುದಿಲ್ಲ ಎಂಬ ಏಕೈಕ ಕಾರಣಕ್ಕೆ ಆ ಸಂಸ್ಥೆಗೆ ಗೇಟ್ ನಿರ್ಮಾಣ ಕಾಮಗಾರಿಯ ಟೆಂಡರ್ ನಿರಾಕರಿಸಲಾಗಿದೆ ಎಂದು ಮುಕುಂದರಾವ್ ಆರೋಪಿಸಿದ್ದಾರೆ.
ರೈತರಲ್ಲಿ ನಿರಾಸಕ್ತಿ ಏಕೆ?
ತುಂಗಭದ್ರಾ ಜಲಾಶಯದಿಂದ 60ಕ್ಕೂ ಹೆಚ್ಚು ಟಿಎಂಸಿಯಷ್ಟು ಅಪಾರ ಪ್ರಮಾಣದ ನೀರು ಪೋಲಾಗಿ ನಾಟಿ ಮಾಡಿರುವ ಭತ್ತದ ಬೆಳೆಗೆ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಆದರೂ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರಲ್ಲಿ ಯಾವುದೇ ಆತಂಕ, ಪ್ರತಿಭಟನೆ ಮಾಡುವ ಮನೋಭಾವ ಕ್ಷೀಣವಾಗಿರುವುದು ಬೇಸರದ ಸಂಗತಿ ಎಂದು ಭವಾನಿಮಠ ಬೇಸರ ವ್ಯಕ್ತಪಡಿಸಿದ್ದಾರೆ.
ರಾಯಚೂರು-ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಒದಗಿ ಬಂದಿರುವ ಆತಂಕ, ಅಪಾಯದ ಬಗ್ಗೆ ರೈತರು, ಈ ಭಾಗದ ಸಂಘಟನೆಗಳು, ಜನರು ಧ್ವನಿ ಎತ್ತದಿದ್ದರೆ ಮುಂದೆ ಭಾರೀ ಪ್ರಮಾಣದ ಗಂಡಾಂತರ ಕಾದಿದೆ. ಜಲಾಶಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವತಃ ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ಶಿವರಾಜ ತಂಗಡಗಿ ಸೇರಿದಂತೆ ಹಲವರು ಜಲಾಶಯಕ್ಕೆ ಅಪಾಯ ಒದಗಿ ಬಂದಿರುವ ಬಗ್ಗೆ ಮಾತನಾಡಿದ್ದಾರೆ. ಮೊದಲು ಜಲಾಶಯ ಉಳಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ತುಂಗಭದ್ರಾ ಜಲಾಶಯ ವ್ಯಾಪ್ತಿಯ ಜನ ಸಂಘಟಿತರಾಗಿ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯದೇ ಹೋದಲ್ಲಿ ನಿಜಕ್ಕೂ ಜಲಾಶಯಕ್ಕೆ ದೊಡ್ಡ ಗಂಡಾಂತರ ಎದುರಾಗಲಿದೆ. ಆಪತ್ಕಾಲ ಎದುರಾದಾಗ ಸರ್ಕಾರ ಕೈ ಎತ್ತುವ ಸಾಧ್ಯತೆ ಇದೆ. ಈ ಬಗ್ಗೆ ಸಮಾನ ಮನಸ್ಕರು ಸೇರಿ ಜಲಾಶಯದ ಉಳಿವಿಗೆ ಹೋರಾಟ ರೂಪಿಸಬೇಕಾದ ಅನಿವಾರ್ಯತೆ ಇದೆ ಎಂದು ಅವರು ಕರೆ ನೀಡಿದ್ದಾರೆ.