ಗಂಗಾವತಿ: ಸರ್ಕಾರಿ ಯೋಜನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶಕ್ಕೆ ಪ್ರತಿ ಆರು ತಿಂಗಳಿಗೊಮ್ಮೆ ಗುರಿ ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ಗಂಗಾವತಿ (Gangavathi) ತಾಲೂಕಿನಲ್ಲಿ ಶೇ.95ಕ್ಕೂ ಹೆಚ್ಚು ಸಾಧನೆ ಮಾಡಲಾಗಿದೆ ಎಂದು ತಹಸೀಲ್ದಾರ್ ವಿಶ್ವನಾಥ ಮುರಡಿ ಹೇಳಿದರು.
ಮಿನಿವಿಧಾನಸೌಧದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನಾ ಸೇವೆಗಳನ್ನು ಜನರಿಗೆ ಒದಗಿಸುವ ನಿಟ್ಟಿನಲ್ಲಿ ಕಳೆದ ಆರು ತಿಂಗಳಲ್ಲಿ ಶೇ.95ರಷ್ಟು ಸಾಧನೆ ಮಾಡಿದ್ದೇವೆ.
ರಾಷ್ಟ್ರೀಯ ಭದ್ರತಾ ಯೋಜನೆಯಡಿ ಪಿಂಚಣಿಯಡಿ ಈ ಆರು ತಿಂಗಳಲ್ಲಿ 2456 ಅರ್ಜಿ ಸ್ವೀಕರಿಸಲಾಗಿದ್ದು, 2130 ಅರ್ಜಿ ವಿಲೇವಾರಿ ಮಾಡಲಾಗಿದೆ. ಆಧಾರ್ ಜೋಡಣೆಯಲ್ಲಿ ಎರಡು ಬಾರಿ ಆಗಿದ್ದ ಒಟ್ಟು 440 ಪ್ರಕರಣಗಳಲ್ಲಿ 409 ಪ್ರಕರಣ ಇತ್ಯರ್ಥ ಮಾಡಲಾಗಿದೆ.
ಇದನ್ನೂ ಓದಿ: Upcoming Kannada Movies: 2024ರ ಬಹು ನಿರೀಕ್ಷಿತ ಕನ್ನಡ ಸಿನಿಮಾಗಳಿವು!
ಪಿಂಚಣಿಗಾಗಿ ಗಂಗಾವತಿ ನಗರ, ಗ್ರಾಮೀಣ, ಮರಳಿ ಮತ್ತು ವೆಂಕಟಗಿರಿ ಹೋಬಳಿಯಲ್ಲಿ ಒಟ್ಟು 2942 ಅರ್ಜಿ ದಾಖಲಾಗಿದ್ದು, 2297 ಅರ್ಜಿಗಳ ಭೌತಿಕ ಪರಿಶೀಲನೆ ಮಾಡಿ ವಿಲೇವಾರಿ ಮಾಡಲಾಗಿದೆ. ಅಂಚೆಕಚೇರಿ ಮೂಲಕ ಪಿಂಚಣಿ ಪಡೆಯಲು 397 ಅರ್ಜಿ ದಾಖಲಾಗಿದ್ದು, ಅಷ್ಟೂ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಒಟ್ಟು 7953 ಅರ್ಜಿ ದಾಖಲಾಗಿದ್ದು, 7943 ಅರ್ಜಿ ವಿಲೇ ಮಾಡಲಾಗಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ 1971 ಅರ್ಜಿ ದಾಖಲಾಗಿದ್ದು ಎಲ್ಲವನ್ನೂ ವಿಲೇವಾರಿ ಮಾಡಲಾಗಿದೆ. ಭೂಮಿ ಕೇಂದ್ರದಲ್ಲಿ ದಾಖಲಾಗಿದ್ದ 2604 ಅರ್ಜಿ ಪೈಕಿ 2543 ಅರ್ಜಿ ಇತ್ಯರ್ಥ ಮಾಡಲಾಗಿದೆ ಎಂದರು.
ಪಹಣಿ, ಆರ್‌ಆರ್‌ಟಿ ಪ್ರಕರಣ
ನಾನಾ ಕಾರಣಾಂತರಗಳಿಂದ ದಾಖಲಾಗಿದ್ದ 906 ಪಹಣಿ ತಿದ್ದುಪಡಿ ಅರ್ಜಿ ಪೈಕಿ 254 ಅರ್ಜಿ ವಿಲೇವಾರಿ ಮಾಡಲಾಗಿದ್ದು, 652 ಪ್ರಕರಣ ಬಾಕಿ ಇದೆ. ವಿವಾದಸ್ಪದ ಆರ್‌ಆರ್‌ಟಿಯಡಿ 159 ಪ್ರಕರಣ ದಾಖಲಾಗಿದ್ದು, 140 ಇತ್ಯರ್ಥ ಮಾಡಲಾಗಿದೆ. ಈ ಪ್ರಕರಣಗಳ ವಿಚಾರಣೆ ತಿಂಗಳಿಗೊಮ್ಮೆ ನಡೆದರೂ ತ್ವರಿತಗತಿಯಲ್ಲಿ ವಿಲೇವಾರಿ ಮಾಡಲಾಗಿದೆ.
ರುದ್ರಭೂಮಿಗಾಗಿ ಒಟ್ಟು 63 ಅರ್ಜಿ ಸಲ್ಲಿಕೆಯಾಗಿದ್ದು ಎಲ್ಲವನ್ನೂ ಇತ್ಯರ್ಥ ಮಾಡಲಾಗಿದೆ. ರೈತರ ಖಾತೆಗೆ ನೇರವಾಗಿ ಜಮೆಯಾಗುವ ಸಬ್ಸಿಡಿ ಯೋಜನೆಯಡಿ 37,809 ಅರ್ಜಿ ಪರಿಶೀಲಿಸಿ 31,550 ಅರ್ಜಿ ಸಕ್ರಮಗೊಳಿಸಲಾಗಿದೆ. ತಾಂತ್ರಿಕ ಕಾರಣಕ್ಕೆ 6259 ಅರ್ಜಿ ಬಾಕಿ ಇವೆ ಎಂದರು.
ಜಿಲ್ಲೆಯಲ್ಲಿ ಮೊದಲು
ಇ-ತಂತ್ರಾಶ ಅಳವಡಿಸಿಕೊಂಡು ಅರ್ಜಿಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಿ ವಿಲೇವಾರಿ ಮಾಡುವಲ್ಲಿ ಇಡೀ ಜಿಲ್ಲೆಯಲ್ಲಿ ಗಂಗಾವತಿ ತಾಲೂಕು ಮೊದಲ ಸ್ಥಾನದಲ್ಲಿದೆ. ಕಳೆದ ಒಂದು ತಿಂಗಳಲ್ಲಿ 1606 ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಈ ಪೈಕಿ 1258 ಅರ್ಜಿಗಳನ್ನು ಸ್ಯ್ಕಾನ್ ಮಾಡಿ ಡಿಜಿಟಲ್ ರೂಪಕ್ಕೆ ಪರಿವರ್ತಿಸಿ ಫಲಾನುಭವಿಗಳಿಗೆ ಪ್ರಮಾಣ ಪತ್ರ ನೀಡಲಾಗಿದೆ. ಕಾಗದ ರಹಿತ ಆಡಳಿತ ನೀಡುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ ಕಂದಾಯ ಇಲಾಖೆ ಮೊದಲ ಸ್ಥಾನದಲ್ಲಿದೆ ಎಂದರು.
ಇದನ್ನೂ ಓದಿ: BY Vijayendra : ಮುಂದಿನ ಎಲ್ಲ ಚುನಾವಣೆಯಲ್ಲಿ ಭರ್ಜರಿ ಗೆಲುವಿಗೆ ಪಣ; ಬಿವೈ ವಿಜಯೇಂದ್ರ
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ, ಶಿರಸ್ತೇದಾರ ರವಿನಾಯಕವಾಡಿ, ಕಂದಾಯ ಇಲಾಖೆಯ ಸಿಬ್ಬಂದಿ ಶ್ರೀಕಂಠ, ಪ್ರಕಾಶ್ ನಾಯ್ಕ, ಮಹೆಬೂಬ ಅಲಿ, ಶೇಖರಪ್ಪ, ಮಂಜುನಾಥ ಹಿರೇಮಠ ಸೇರಿದಂತೆ ಹಲವರು ಇದ್ದರು.