ಗಂಗಾವತಿ: ಹನುಮ ಜಯಂತಿ (Hanuma Jayanthi) ಅಂಗವಾಗಿ ತಾಲೂಕಿನ ಚಿಕ್ಕರಾಂಪುರದ ಅಂಜನಾದ್ರಿ ಬೆಟ್ಟದಲ್ಲಿ (Anjanadri Hill) ಡಿ.24ರಂದು ನಡೆಯಲಿರುವ ಹನುಮ ಮಾಲಾ ವಿಸರ್ಜನಾ ಕಾರ್ಯಕ್ರಮಕ್ಕೆ ಕೈಗೊಳ್ಳಬೇಕಿರುವ ಸಿದ್ಧತೆಗಳ ಕುರಿತು ಶನಿವಾರ ನಗರದ ಮಂಥನ ಸಭಾಂಗಣದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು.
ಹನುಮಮಾಲಾ ಕಾರ್ಯಕ್ರಮದ ನೋಡಲ್ ಅಧಿಕಾರಿ ಹಾಗೂ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ನೇತೃತ್ವದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಜೆಸ್ಕಾಂ, ಕಂದಾಯ, ಆಹಾರ, ಪೊಲೀಸ್ ಇಲಾಖೆಗಳು ಕೈಗೊಂಡಿರುವ ಸಿದ್ಧತೆಗಳ ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಆಯುಕ್ತ ಮಹೇಶ ಮಾಲಗಿತ್ತಿ ಮಾತನಾಡಿ, ಹನುಮ ಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳ ಬಗ್ಗೆ ಈಗಾಗಲೆ ಆಯಾ ಇಲಾಖೆಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಹೆಚ್ಚುವರಿ ಸಲಹೆ ಸಾರ್ವಜನಿಕರಿಂದ ಆಹ್ವಾನಿಸಲಾಗುತ್ತಿದೆ. ಅಗತ್ಯವಿದ್ದರೆ ಸಲಹೆಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Scholarship for Students: ಈ ಯೋಜನೆಯಡಿ ಸಿಗಲಿದೆ ವಿದ್ಯಾರ್ಥಿ ವೇತನ; ಇಂದೇ ಅರ್ಜಿ ಸಲ್ಲಿಸಿ
ಸಬೆಯಲ್ಲಿ ಗಂಗಾವತಿ ನಗರದ ಹೊರಭಾಗದಿಂದ ಅಂಜನಾದ್ರಿ ಬೆಟ್ಟದವರೆಗೂ ಮತ್ತು ತಿರುಮಲಾಪುರದಿಂದ ಬೆಟ್ಟದವರೆಗೂ ರಸ್ತೆಯ ಎರಡೂ ಕಡೆ ವಿದ್ಯುತ್ ದೀಪದ ವ್ಯವಸ್ಥೆ ಮಾಡಬೇಕು. ಬಹುತೇಕ ಭಕ್ತಾಧಿಗಳು, ಡಿ.23ರಂದು ಕಾಲ್ನಡಿಗೆ ಮೂಲಕ ಬೆಟ್ಟಕ್ಕೆ ಆಗಮಿಸುತ್ತಾರೆ.
ದಾರಿ ಮಧ್ಯೆ ಬೆಟ್ಟ, ಗುಡ್ಡ, ಕಾಡುಗಳಿರುವ ಕಾರಣಕ್ಕೆ ವನ್ಯ ಪ್ರಾಣಿ ಮತ್ತು ವಾಹನಗಳ ಸಂಚಾರದಿಂದ ಸಮಸ್ಯೆಯಾಗಬಾರದು ಎಂದು ಮುಖಂಡರಾದ ಯಮನೂರು ಚೌಡ್ಕಿ, ರಮೇಶ ಚೌಡ್ಕಿ, ವಿನಯ್ ಪಾಟೀಲ್, ಸುಭಾಷ್ ಅವರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜೆಸ್ಕಾಂ ಎಇಇ ವಿರೇಶ, ದೀಪಗಳನ್ನು ಅಳವಡಿಸಿ ಲೈಟಿನ ವ್ಯವಸ್ಥೆ ಇಲಾಖೆಯಿಂದ ಮಾಡಲಾಗುವುದು. ಆದರೆ ನಗರದ ವ್ಯಾಪ್ತಿಯಲ್ಲಿ ನಗರಸಭೆ, ಗ್ರಾಮೀಣ ವ್ಯಾಪ್ತಿಯಲ್ಲಿ ಆಯಾ ಪಂಚಾಯಿತಿಗಳು ಕಂಬದ ವ್ಯವಸ್ಥೆ ಮಾಡಿಕೊಡಬೇಕು ಎಂದರು.
ಬೆಟ್ಟದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಅಭಾವ ತಲೆದೋರದಂತೆ ಹಾಗೂ ಎರಡು ದಿನಗಳ ಕಾಲ ನಿರಂತರ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಜೆಇ ಸೇರಿದಂತೆ ನಾಲ್ಕಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಭಾಗಿಯಾಗಿದ್ದ ನಾನಾ ಇಲಾಖೆಗಳ ಅಧಿಕಾರಿಗಳಿಗೆ ವಹಿಸಿದ್ದ ಜವಾಬ್ದಾರಿಯ ಬಗ್ಗೆ ಮಾಹಿತಿ ನೀಡಿದರು.
ಇದನ್ನೂ ಓದಿ: Year Ender 2023: ಯುವ ಜನರಿಗೆ ಈ ವರ್ಷವೂ ಕಾಡಿತು ಹೃದಯಾಘಾತದ ಏಟು
ಈ ವೇಳೆ ಗಂಗಾವತಿ ತಹಸೀಲ್ದಾರ್ ವಿಶ್ವನಾಥ ಮುರಡಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮಿದೇವಿ ಗಂಗಾವತಿ, ಚಂದ್ರಶೇಖರ ಕಂದಕೂರು ಕನಕಗಿರಿ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ದೇಗುಲದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಸುತುಗುಂಡಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.