Site icon Vistara News

Koppala News: ಕುಷ್ಟಗಿಯಲ್ಲಿ ನೂತನ ಪೊಲೀಸ್ ಠಾಣೆ, ಕುಷ್ಟಗಿ ವೃತ್ತ ಕಾರ್ಯಾಲಯ ಕಟ್ಟಡ ಲೋಕಾರ್ಪಣೆ

Koppala News Inauguration of New Police Station Kushtagi Circle Office Building in Kushtagi

ಕೊಪ್ಪಳ: ಜಿಲ್ಲೆಯ ಕುಷ್ಟಗಿ (Kushtagi) ಪಟ್ಟಣದಲ್ಲಿ ನಿರ್ಮಾಣವಾಗಿದ್ದ ನೂತನ ಕುಷ್ಟಗಿ ಪೊಲೀಸ್ ಠಾಣೆ (New Police Station) ಕಟ್ಟಡ ಮತ್ತು ಕುಷ್ಟಗಿ ವೃತ್ತ ಕಾರ್ಯಾಲಯದ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಂಗಳವಾರ ಲೋಕಾರ್ಪಣೆಗೊಳಿಸಿದರು.

ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆಯಿಂದ ಕುಷ್ಟಗಿ ಪಟ್ಟಣದ ಹಳೆಯ ಪೊಲೀಸ್ ಠಾಣಾ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಸಚಿವ ಶಿವರಾಜ ತಂಗಡಗಿ, ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅಭಿನಂದನಾರ್ಹರಾಗಿದ್ದಾರೆ ಎಂದರು.

ಎಲ್ಲ ಇಲಾಖೆಗಳಿಗಿಂತ ಪೊಲೀಸ್ ಇಲಾಖೆಯು ಅತೀ ಮಹತ್ವದ್ದಾಗಿದೆ. ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯು ಇನ್ನು ಹೆಚ್ಚಿನ ರೀತಿಯಲ್ಲಿ ಶ್ರದ್ದೆ ಮತ್ತು ನಿಷ್ಠೆಯಿಂದ ಕೆಲಸ ನಿರ್ವಹಿಸಿದಲ್ಲಿ ಸರ್ಕಾರಕ್ಕೆ ಉತ್ತಮ ಹೆಸರು ಬರಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: Rohit Sharma: ಸಚಿನ್​ ​ ದಾಖಲೆ ಮುರಿದು 10 ಸಾವಿರ ರನ್​ ಎಲೈಟ್​ ಪಟ್ಟಿ ಸೇರಿದ ರೋಹಿತ್​ ಶರ್ಮ

ಪೊಲೀಸ್ ಇಲಾಖೆಗೆ ಹೊಸ ವಾಹನಗಳನ್ನು ನೀಡುವುದು ಸೇರಿದಂತೆ ಮೂಲಭೂತ ಸೌಕರ್ಯಗಳು ಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆಯ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರು ಮನವಿ ಮಾಡಿದಂತೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕ್ರಿಯಾಯೋಜನೆಯಲ್ಲಿ ಸೇರಿಸಿ ಅನುದಾನ ಕೊಡಲು ಕ್ರಮ ವಹಿಸಿ ಪೊಲೀಸ್ ಇಲಾಖೆಯನ್ನು ಬಲಪಡಿಸಲಾಗುವುದು ಎಂದು ತಿಳಿಸಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ರಾಜ್ಯದ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹ ಶ್ರದ್ದೆ ಹಾಗೂ ನಿಷ್ಠೆಗೆ ಹೆಸರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರಿಂದ ರಾಜ್ಯದಲ್ಲಿ ಪೊಲೀಸ್ ಇಲಾಖೆಗೆ ಗೌರವ ಸ್ಥಾನವಿದೆ ಎಂದು ತಿಳಿಸಿದರು.

ಗದಗ-ವಾಡಿ ರೈಲ್ವೆ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ ಸಂಸದರು, ಸರ್ವೀಸ್ ರಸ್ತೆ ಸೇರಿದಂತೆ ಇನ್ನೀತರ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ಜನವರಿ ಮೊದಲ ವಾರದೊಳಗೆ ಕುಷ್ಟಗಿವರೆಗಿನ 57 ಕಿ.ಮೀವರೆಗೆ ರೈಲ್ವೆ ಸಂಚಾರಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Nitin Gadkari: 2027ರ ಹೊತ್ತಿಗೆ ಶೂನ್ಯ ಕಾರ್ಬನ್ ಗುರಿ; ಡೀಸೆಲ್ ವಾಹನಗಳ ಮೇಲೆ ಹೆಚ್ಚುವರಿ ತೆರಿಗೆ ಇಲ್ಲ ಎಂದ ಗಡ್ಕರಿ

ಅಧ್ಯಕ್ಷತೆ ವಹಿಸಿದ್ದ ಕುಷ್ಟಗಿ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಬೇರೆ ಬೇರೆ ಇಲಾಖೆಗಳು ಬೆಳಗ್ಗೆ 10 ರಿಂದ ಸಂಜೆವರೆಗೆ ಕಾರ್ಯನಿರ್ವಹಿಸುತ್ತವೆ. ಆದರೆ ಪೊಲೀಸ್ ಇಲಾಖೆಯ ಬಾಗಿಲು ದಿನದ 24 ಗಂಟೆಗಳ ಕಾಲವೂ ತೆರೆದಿರುತ್ತದೆ‌. ಇದು ಪೊಲೀಸ್ ಇಲಾಖೆಯ ಕಾರ್ಯವೈಖರಿ ಮತ್ತು ಮಹತ್ವವನ್ನು ತಿಳಿಸುತ್ತದೆ. ಹಿಂದಿನ ಸರ್ಕಾರವು 100 ಪೊಲೀಸ್ ಠಾಣೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಿದಂತೆ ಇದೀಗ ಕುಷ್ಟಗಿ ಪಟ್ಟಣದಲ್ಲಿ ನೂತನವಾಗಿ ಪೊಲೀಸ್ ಠಾಣೆ ನಿರ್ಮಾಣವಾಗಿ ಲೋಕಾರ್ಪಣೆ ಆಗುತ್ತಿರುವುದು ಸಂತಷದ ಸಂಗತಿಯಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಶರಣಗೌಡ ಅಂದಾನಗೌಡ ಬಯ್ಯಾಪುರ ಮಾತನಾಡಿದರು.

ನೂತನ ಪೊಲೀಸ್ ಠಾಣೆ ಕಟ್ಟಡದ ಲೋಕಾರ್ಪಣೆ ಹಿನ್ನೆಲೆಯಲ್ಲಿ ಕಟ್ಟಡದ ಆವರಣವನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ನೂತನ ಕಟ್ಟಡದ ಲೋಕಾರ್ಪಣೆ ನಿಮಿತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಮ್ಮುಖದಲ್ಲಿ ಸಚಿವರು, ಸಂಸದರು, ಶಾಸಕರು ಠಾಣೆಯ ಆವರಣದಲ್ಲಿ ಸಸಿ ನೆಟ್ಟರು.

ಇದನ್ನೂ ಓದಿ: ‘ಭಾರತದಿಂದ ಉತ್ತಮ ಉಡುಗೊರೆ ಸಿಕ್ಕಿದೆ’; ಕಳಪೆ ಪ್ರದರ್ಶನಕ್ಕೆ ಪಾಕ್​ ಕೋಚ್​ ಅಸಮಾಧಾನ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಪ್ರಾಸ್ತಾವಿಕ ಮಾತನಾಡಿದರು. ಸಮಾರಂಭದಲ್ಲಿ ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ಬಿ.ಎಸ್. ಲೋಕೇಶಕುಮಾರ, ಪೊಲೀಸ್ ಉಪಾಧೀಕ್ಷಕರಾದ ಶರಣಬಸಪ್ಪ ಸುಬೇದಾರ, ಶೇಖರಗೌಡ ಪಾಟೀಲ, ಕುಷ್ಟಗಿ ತಹಸೀಲ್ದಾರ ಶೃತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version