ಕಾರಟಗಿ: ತಾಲೂಕಿನ ಚಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ (Minister Shivaraj Thangadagi) ಅವರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ನಡೆಯಿತು.
ಸಭೆಯಲ್ಲಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು, ಕ್ಷೇತ್ರದ ವ್ಯಾಪ್ತಿಯ ಚಳ್ಳೂರು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಕ್ಕೆ ಬರುವ ಊರುಗಳಿಗೆ ಭೇಟಿ ನೀಡಿ, ಗ್ರಾಮಸ್ಥರ ಅಹವಾಲುಗಳಿಗೆ ಸ್ಥಳದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಇತ್ಯರ್ಥ ಮಾಡಲು ಈ ಜನ ಸಂಪರ್ಕ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರಟಗಿಯಿಂದ ಚಳ್ಳೂರುವರೆಗೆ ರಸ್ತೆ ನಿರ್ಮಾಣ, ಚಳ್ಳೂರುಯಿಂದ ಸೋಮನಾಳವರೆಗೆ ರಸ್ತೆ ನಿರ್ಮಾಣ ಮಾಡಲಾಗುವುದು, ಚಳ್ಳೂರು ಕ್ಯಾಂಪ್ ಕಂದಾಯ ಗ್ರಾಮವನ್ನಾಗಿ ಮಾಡಲು ಈಗಾಗಲೇ ನಾನು ತಹಸೀಲ್ದಾರ್ ಅವರನ್ನು ಕ್ಯಾಂಪ್‌ಗೆ ಕಳುಹಿಸಿರುವೆ, ರೈತರು ಕೃಷಿ ಚಟುವಟಿಕೆಗಳು ಇರುವ ಕಾರಣ ವಿಳಂಬವಾಗಿದೆ. ಆದಷ್ಟು ಬೇಗ ಮತ್ತೆ ಅಧಿಕಾರಿಗಳನ್ನು ಕಳಿಸಿ ಪರಿಹಾರ ಮಾಡುವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: COVID Subvariant JN1: ಕೋವಿಡ್ ರಕ್ಷಣೆಗೆ 2 ಮಾರ್ಗಸೂಚಿ; ಹಿರಿಯರು, ಗರ್ಭಿಣಿ, ತಾಯಂದಿರಿಗೆ ಮಾಸ್ಕ್ ಕಡ್ಡಾಯ
ಕ್ಯಾಂಪ್‌ನಲ್ಲಿ ರುದ್ರಭೂಮಿಗೆ ಅಭಿವೃದ್ಧಿ, ಹೊಸದಾಗಿ ಅಂಗನವಾಡಿ ಕೊಠಡಿ ನಿರ್ಮಾಣ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹ ಲಕ್ಷ್ಮಿ, ಅನ್ನಭಾಗ್ಯ ಯೋಜನೆಗಳ ತಾಂತ್ರಿಕ ಸಮಸ್ಯೆ ಕುರಿತಂತೆ ಗ್ರಾಮಸ್ಥರು ಸಲ್ಲಿಸಿದ ಅಹವಾಲುಗಳಿಗೆ ಸ್ಥಳದಲ್ಲಿ ಅಧಿಕಾರಿಗಳ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾದರು.
ಇದನ್ನೂ ಓದಿ: Heavy Rain: ಭಾರೀ ಮಳೆಗೆ 4 ಮಂದಿ ಸಾವು; ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ.ಕುಮಾರಸ್ವಾಮಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾ.ಪಂ ಅಧಿಕಾರಿಗಳು, ಜನಪ್ರತಿನಿಧಿಗಳು, ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.