ಗಂಗಾವತಿ: ಇಲ್ಲಿನ ಕಲ್ಮಠದ ರಸ್ತೆಯಲ್ಲಿರುವ ದೇವಾಂಗ ಮಠದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ವೀರಮದಕರಿ ನಾಯಕ ಯುವಕ ಸಂಘದಿಂದ ಪ್ರತಿಷ್ಠಾಪಿಸಲ್ಪಟ್ಟ ಕಾಲಭೈರವನ (Kalabhairava) ರೂಪದಲ್ಲಿರುವ ಗಣೇಶ ಮೂರ್ತಿಯನ್ನು (Ganesha Idol) ಬುಧವಾರ ವಿಜೃಂಭಣೆಯಿಂದ ಮೆರವಣಿಗೆಯೊಂದಿಗೆ ವಿಸರ್ಜನೆ ಕಾರ್ಯಕ್ರಮ ಜರುಗಿತು.
13 ಅಡಿ ಎತ್ತರದ ಆಕರ್ಷಕ ವಿನ್ಯಾಸದಲ್ಲಿರುವ ಪರಿಸರ ಸ್ನೇಹಿ ಮಣ್ಣಿನ ಗಣೇಶನ ಮೂರ್ತಿಯು ಕಾಲಭೈರವ ರೂಪದಲ್ಲಿ ಜನರ ಆಕರ್ಷಣೆಯ ಕೇಂದ್ರವಾಗಿತ್ತು. ವಿನಾಯಕನ ವಿಸರ್ಜನೆಗೂ ಮುನ್ನ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು.
ಬಳಿಕ ದೇವಾಂಗ ಮಠದಿಂದ ಆರಂಭವಾದ ಅದ್ಧೂರಿ ಮೆರವಣಿಗೆಯು ನಗರದ ಕಲ್ಮಠ ವೃತ್ತ, ಬಸವಣ್ಣ, ಮಹಾತ್ಮಗಾಂಧಿ, ಮಹಾವೀರ, ಸಿಬಿಎಸ್ ಸರ್ಕಲ್ ಹಾಯ್ದು, ಕೊಪ್ಪಳ ರಸ್ತೆ ಮೂಲಕ ಸಾಗಿ ದಾಸನಾಳದ ಬಳಿರುವ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ವಿಸರ್ಜನೆ ಮಾಡಲಾಯಿತು.
ಮೆರವಣಿಗೆಯಲ್ಲಿ ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ಮಹಿಳಾ ವೀರಗಾಸೆ, ಕೂಡ್ಲಿಗಿಯ ವೀಣಾ ಮಹಿಳಾ ಡೊಳ್ಳು ಕುಣಿತ ತಂಡ ಸೇರಿದಂತೆ ದಾವಣಗೆರೆಯ ಮತ್ತೊಂದು ಮಹಿಳಾ ಡೊಳ್ಳು ಕುಣಿತ ಕಲಾ ತಂಡಗಳು ಭಾಗಿಯಾಗಿದ್ದವು.
ಇದನ್ನೂ ಓದಿ: IND vs AUS: ಅಂತಿಮ ಪಂದ್ಯದಲ್ಲಿ ತಿರುಗಿ ಬಿದ್ದ ಆಸೀಸ್; ಭಾರತಕ್ಕೆ ಬೃಹತ್ ಮೊತ್ತದ ಗುರಿ
ಶಾಸಕ ಜಿ. ಜನಾರ್ದನ ರೆಡ್ಡಿ, ಉದ್ಯಮಿ ನೆಕ್ಕಂಟಿ ಸೂರಿಬಾಬು ಸೇರಿದಂತೆ ಇತರೆ ಮುಖಂಡರು ಭೇಟಿ ನೀಡಿದ್ದರು. ಪ್ರಮುಖರಾದ ಜೋಗದ ನಾರಾಯಣಪ್ಪ ನಾಯಕ, ಹನುಮಂತಪ್ಪ ನಾಯಕ, ದುರುಗಪ್ಪ ದಳಪತಿ. ಕೃಷ್ಣ ನಾಯಕ, ಕನಕಪ್ಪ, ಚಂದ್ರು, ಸುರೇಶ, ಗಾದಿಲಿಂಗಪ್ಪ ನಾಯಕ ಸೇರಿದಂತೆ ಹಲವರು ಭಾಗಿಯಾಗಿದ್ದರು.