ಗಂಗಾವತಿ: ನಗರದ ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ 2022-23ನೇ ಸಾಲಿನ ರಾಜ್ಯ ಸರ್ಕಾರದ ಕಾಯಕಲ್ಪ ಪ್ರಶಸ್ತಿ ದೊರೆತಿದೆ. ಸತತ ಮೂರು ವರ್ಷ ಅಂದರೆ ಹ್ಯಾಟ್ರಿಕ್ ಕಾಯಕಲ್ಪ ಪ್ರಶಸ್ತಿ ಪಡೆದುಕೊಂಡ ರಾಜ್ಯದ ಮೊದಲ ಆಸ್ಪತ್ರೆ ಎಂಬ ದಾಖಲೆಯನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆ (Koppala News) ನಿರ್ಮಾಣ ಮಾಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸರ್ಕಾರಿ ಆಸ್ಪತ್ರೆಗಳಿಗೆ ನೀಡುವ ಈ ಪ್ರಶಸ್ತಿಯನ್ನು ಆರೋಗ್ಯ ಸಂಸ್ಥೆಗಳಲ್ಲಿನ ಸ್ವಚ್ಛತೆ, ಶುಚಿತ್ವ ಮತ್ತು ನೈರ್ಮಲ್ಯದಂತ ಮಾನದಂಡದಲ್ಲಿ ನೀಡಲಾಗುತ್ತಿದೆ.
ಇದನ್ನೂ ಓದಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 11 ಜನರ ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ
ಮಂಗಳವಾರ ಮೈಸೂರಿನ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಗಂಗಾವತಿ ಉಪ ವಿಭಾಗ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಈಶ್ವರ ಸವುಡಿ ಅವರಿಗೆ ಪ್ರಶಸ್ತಿ ನೀಡಿದರು.
ಇದನ್ನೂ ಓದಿ: Nirup Bhandari: ನಿರೂಪ್ ಅಭಿನಯದ ʼಸತ್ಯ ಸನ್ ಆಫ್ ಹರಿಶ್ಚಂದ್ರʼ ಚಿತ್ರದ ಫಸ್ಟ್ ಲುಕ್ ರಿಲೀಸ್
ಗಂಗಾವತಿಯ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಖಾಸಗಿ ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ ಸಿಗುವಂತಹ ಅತ್ಯಾಧುನಿಕ ತಂತ್ರಜ್ಞಾನದ ಗುಣಮಟ್ಟದ ಚಿಕಿತ್ಸೆಯನ್ನು ರೋಗಿಗಳಿಗೆ ನೀಡಲಾಗುತ್ತಿದೆ. ಗಂಗಾವತಿ ತಾಲೂಕು ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಬಳ್ಳಾರಿ, ರಾಯಚೂರು, ಗದಗ, ವಿಜಯನಗರದ ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಿರುವುದು ವಿಶೇಷವಾಗಿದೆ.