ಕೊಪ್ಪಳ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ (Lok Sabha Election) ಹಿನ್ನಲೆಯಲ್ಲಿ, ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಗೆ ಏಪ್ರಿಲ್ 12ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ (Koppala News) ತಿಳಿಸಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗವು ಈಗಾಗಲೇ 2024ರ ಲೋಕಸಭಾ ಚುನಾವಣಾ ವೇಳಾಪಟ್ಟಿಯನ್ನು ನಿಗಧಿಪಡಿಸಿದ್ದು, ಮಾ.16ರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಅಧಿಸೂಚನೆ ಹೊರಡಿಸಿದ ಏ.12ರಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳಿಂದ ನಾಮಪತ್ರ ಸ್ವೀಕರಿಸಲಾಗುವುದು. ನಾಮಪತ್ರ ಸಲ್ಲಿಸಲು ಇಚ್ಛಿಸುವವರು ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಏ.12 ರಿಂದ ಏ.19ರವರೆಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯೊಳಗಾಗಿ ಸಲ್ಲಿಸಬಹುದಾಗಿರುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Summer Season: ವಾಹನ ಸವಾರರನ್ನು ಬಿಸಿಲ ತಾಪದಿಂದ ಪಾರು ಮಾಡಲು ಟ್ರಾಫಿಕ್ ಸಿಗ್ನಲ್ ಸ್ಥಗಿತ!
ನಾಮಪತ್ರ ಸಲ್ಲಿಸಲು ಅಭ್ಯರ್ಥಿಯೊಂದಿಗೆ 4 ಜನರಿಗೆ ಮಾತ್ರ ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ಅವಕಾಶವಿರುತ್ತದೆ. ಚುನಾವಣಾಧಿಕಾರಿಗಳ ಕಾರ್ಯಾಲಯದ 100 ಮೀ. ಪರಿಧಿಯೊಳಗೆ ಗರಿಷ್ಠ 3 ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿರುತ್ತದೆ. ಏ.20ರಂದು ಬೆಳಗ್ಗೆ 11 ಗಂಟೆಗೆ ನಾಮಪತ್ರಗಳನ್ನು ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು. ಏ.22ರಂದು ಮಧ್ಯಾಹ್ನ 3 ಗಂಟೆಯವರೆಗೆ ನಾಮನಿರ್ದೇಶನವನ್ನು ವಾಪಸ್ ಪಡೆದುಕೊಳ್ಳಲು ಅವಕಾಶವಿದ್ದು, ನಂತರ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆಯ ಹಂಚಿಕೆ ಕಾರ್ಯವನ್ನು ಕೈಗೊಳ್ಳಲಾಗುವುದು. ಮೇ 7ರಂದು ಮತದಾನ ಹಾಗೂ ಜೂನ್ 4ರಂದು ಮತ ಎಣಿಕೆ ನಡೆಯಲಿದೆ ಎಂದರು.
ಮತದಾನ ಕೇಂದ್ರಕ್ಕೆ 6724 ಸಿಬ್ಬಂದಿಗಳ ನೇಮಕ
1681 ಪಿ.ಆರ್.ಒ, 1681 ಎ.ಪಿ.ಆರ್.ಒ ಮತ್ತು 3362 ಮತಗಟ್ಟೆ ಅಧಿಕಾರಿಗಳು (ಪಿಒ) ಸೇರಿದಂತೆ ಒಟ್ಟಾರೆಯಾಗಿ 6724 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಏ.8 ರಂದು ಬೆಳಗ್ಗೆ 10:30ಕ್ಕೆ ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಕೇಂದ್ರ ಸ್ಥಾನದಲ್ಲಿ ತರಬೇತಿಯನ್ನು ಆಯೋಜಿಸಲಾಗಿದೆ ಎಂದರು.
ಇದನ್ನೂ ಓದಿ: Vijayanagara News: ಕೊಟ್ಟೂರಿನಲ್ಲಿ ನಿವೃತ್ತ ಶಿರಸ್ತೇದಾರ್ ಲೀಲಾ ಎಸ್.ಗೆ ಬೀಳ್ಕೊಡುಗೆ
ಮಾರ್ಚ್ 26ರಂದು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ & ವಿವಿ ಪ್ಯಾಟ್) ಹಂಚಿಕೆ ಮಾಡಿ, ರಾಜಕೀಯ ಪಕ್ಷದ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಂಬಂಧಪಟ್ಟ ಸಹಾಯಕ ಚುನಾವಣಾಧಿಕಾರಿಗಳ ಸುಪರ್ದಿಗೆ ನೀಡಲಾಯಿತು. ಅದರಂತೆ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಹಾಗೂ ಕೊಪ್ಪಳ ಸೇರಿ ಜಿಲ್ಲೆಯ 1317 ಮತಗಟ್ಟೆ ಪೈಕಿ 1628 ಬಿಯು, 1628 ಸಿಯು ಹಾಗೂ 1723 ವಿವಿ ಪ್ಯಾಟ್‌ಗಳನ್ನು ನೀಡಲಾಗಿದೆ. ಈ ಎಲ್ಲಾ ವಿದ್ಯುನ್ಮಾನ ಮತಯಂತ್ರಗಳನ್ನು ಸಂಬಂಧಪಟ್ಟ ಸಹಾಯಕ ಚುನಾವಣಾಧಿಕಾರಿಗಳು ಅವರ ವಿಧಾನಸಭಾ ಕ್ಷೇತ್ರದ ಕೇಂದ್ರಸ್ಥಾನದಲ್ಲಿರುವ ಭದ್ರತಾ ಕೊಠಡಿಯಲ್ಲಿ ಇರಿಸಿಕೊಂಡಿರುತ್ತಾರೆ ಎಂದು ತಿಳಿಸಿದರು.
ಅಂಚೆ ಮತದಾನದ ಸೌಲಭ್ಯ
ಭಾರತ ಚುನಾವಣಾ ಆಯೋಗವು ವಿಕಲಚೇತನ ಮತದಾರರಿಗೆ ಮತ್ತು 85+ ವಯೋಮಾನದ ಮತದಾರರಿಗೆ ಮತ್ತು ಕೋವಿಡ್ ಶಂಕಿತ ಅಥವಾ ಬಾಧಿತ ಮತದಾರರಿಗೆ ಮತಚಲಾಯಿಸಲು ಅನುಕೂಲವಾಗುವಂತೆ ಹೋಮ್ ವೋಟಿಂಗ್ ಸೌಲಭ್ಯವನ್ನು ಒದಗಿಸಿದ್ದು, ಮತದಾರರು ಈ ಸೌಲಭ್ಯ ಪಡೆಯಲು ಇಚ್ಛಿಸಿದಲ್ಲಿ ನಮೂನೆ-12ಡಿ ರಲ್ಲಿ ಮನವಿ ಸಲ್ಲಿಸುವ ಅರ್ಹ ಮತದಾರರ ಮನೆಗೆ ತೆರಳಿ ಮತದಾನ ಪಡೆಯುವ ಕಾರ್ಯವನ್ನು ಮಾಡಲಾಗುವುದು. ಸಿಂಧನೂರು, ಮಸ್ಕಿ, ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ, ಕೊಪ್ಪಳ ಹಾಗೂ ಸಿರುಗುಪ್ಪ ಈ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 38,294 ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 18,456 ಮತದಾರರಿಗೆ ನಮೂನೆ-12ಡಿ ಅನ್ನು ನೀಡಲಾಗಿದ್ದು, 19,838 ಮತದಾರರು ನಮೂನೆ-12ಡಿ ನ್ನು ಪಡೆದಿರುವುದಿಲ್ಲ. 2342 ಮತದಾರರನ್ನು ನಮೂನೆ-12ಡಿ ಗೆ ಆಯ್ಕೆ ಮಾಡಲಾಗಿದೆ. 15,885 ಮತದಾರರು ನಮೂನೆ-12ಡಿ ಆಯ್ಕೆ ಮಾಡಿಕೊಂಡಿಲ್ಲ ಎಂದರು.
ಇದನ್ನೂ ಓದಿ: SBI Shares : ಅಜ್ಜ ಹೂಡಿಕೆ ಮಾಡಿದ್ದು 500, ಮೊಮ್ಮಗನಿಗೆ ಸಿಕ್ಕಿದ್ದು 3.75 ಲಕ್ಷ ರೂಪಾಯಿ; ಇದುವೇ ಷೇರು ಪೇಟೆ ಮ್ಯಾಜಿಕ್!
ಕೊಪ್ಪಳ ಲೋಕಸಭಾ ಕ್ಷೇತ್ರವು ಕೊಪ್ಪಳ ಜಿಲ್ಲೆಯ 60-ಕುಷ್ಟಗಿ, 61-ಕನಕಗಿರಿ, 62-ಗಂಗಾವತಿ, 63-ಯಲಬುರ್ಗಾ ಹಾಗೂ 64-ಕೊಪ್ಪಳ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ರಾಯಚೂರು ಜಿಲ್ಲೆಯ 58-ಸಿಂಧನೂರು ಮತ್ತು 59-ಮಸ್ಕಿ ಹಾಗೂ ಬಳ್ಳಾರಿ ಜಿಲ್ಲೆಯ 92-ಸಿರಗುಪ್ಪ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳು ಸೇರಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 1 ರಂತೆ 9,15,535 ಪುರುಷ ಮತದಾರರು, 9,42,442 ಮಹಿಳಾ ಮತದಾರರು ಮತ್ತು 135 ಇತರೆ ಸೇರಿ ಒಟ್ಟು 18,58,112 ಮತದಾರರಿದ್ದಾರೆ. ಇದರಲ್ಲಿ 48,220 ಯುವ ಮತದಾರರು, 25,734 ವಿಕಲಚೇತನ ಮತದಾರರು, 12,904 ಹಿರಿಯ ಮತದಾರರು (85 ವರ್ಷ ಮೇಲ್ಪಟ್ಟವರು) ಹಾಗೂ 615 ಸೇವಾ ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಮಾಹಿತಿ ನೀಡಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನಗಳನ್ವಯ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರಿಗೆ ಅನುಕೂಲವಾಗಲು ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಿಕಲಚೇತನರಿಗೆ ರೇಲಿಂಗ್ ಸಹಿತ ರ‍್ಯಾಂಪ್ ವ್ಯವಸ್ಥೆ, ನೆರಳಿನ ವ್ಯವಸ್ಥೆ ಹಾಗೂ ವಿದ್ಯುತ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಎಂಟು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 49 ಫ್ಲೈಯಿಂಗ್ ಸ್ಕ್ವಾಡ್, 32 ಚೆಕ್‌ಪೋಸ್ಟ್‌ಗಳು, 27 ವಿಡಿಯೋ ಕಣ್ಗಾವಲು ತಂಡಗಳು, 168 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮಾರ್ಚ್ 16 ರಿಂದ ಜೂನ್ 6 ರವರೆಗೆ ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿದ್ದು, ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಜಿಲ್ಲಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ವಿಧಾನಸಭಾ ಮಟ್ಟದಲ್ಲಿ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Viral News : ಟಾಯ್ಲೆಟ್ಗೆ ಹೋಗುವ ಅರ್ಜೆಂಟಲ್ಲಿ ಸ್ಪೈಡರ್ ಮ್ಯಾನ್ ಆದ ರೈಲು ಪ್ರಯಾಣಿಕ!
82.92 ಲಕ್ಷ ಹಣ, 4011.68 ಲೀ. ಮದ್ಯ ಜಪ್ತಿ
ಮಾರ್ಚ್ 16 ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಈ ಅವಧಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಮಾದರಿ ನೀತಿ ಸಂಹಿತೆ ತಂಡಗಳು, ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳ ಕಾರ್ಯಚರಣೆಯಿಂದಾಗಿ ಏಪ್ರಿಲ್ 1ರವರೆಗೆ ರೂ. 82,92,500 ಹಣ ಮತ್ತು ರೂ.15,96,660 ಮೌಲ್ಯದ 4011.68 ಲೀಟರ್ ಮದ್ಯ ಜಪ್ತಿ ಮಾಡಲಾಗಿದ್ದು, ಈ ಕುರಿತು 6 ಎಫ್.ಐ.ಆರ್ ದಾಖಲಾಗಿರುತ್ತವೆ ಎಂದು ತಿಳಿಸಿದರು.