ಗಂಗಾವತಿ: ಇಲ್ಲಿನ ಜಯನಗರದ ಕುವೆಂಪು ಬಡಾವಣೆಯಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಸೋಮವಾರ ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ, ದಿಢೀರ್ ಭೇಟಿ (Sudden Visit) ನೀಡಿ, ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲವಾದರು.
ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನಂತರ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ, ಮಕ್ಕಳಿಂದ ಸಮಸ್ಯೆಗಳನ್ನು ಆಲಿಸಿದರು. ಆಹಾರದ ಗುಣಮಟ್ಟ, ಅಗತ್ಯ ಸೌಲಭ್ಯಗಳ ಬಗ್ಗೆ ಮಕ್ಕಳು ಮಾಹಿತಿ ನೀಡಿದರು.
ಬಳಿಕ ವಸತಿ ನಿಲಯದ ನಾನಾ ಕೊಠಡಿಗಳಿಗೆ ಹಾಗೂ ಮೇಲ್ಭಾಗಕ್ಕೆ ತೆರಳಿ ಖುದ್ದು ಪರಿಶೀಲನೆ ನಡೆಸಿದರು. ಅವ್ಯವಸ್ಥೆಯ ಕಂಡು ಕೂಡಲೇ ವಾರ್ಡನ್ ಮತ್ತು ತಾಲೂಕು ಅಧಿಕಾರಿ ಗ್ಯಾನನಗೌಡ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಚಿವರು, ಕೂಡಲೇ ನೀರಿನ ವ್ಯವಸ್ಥೆ, ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕು. ವಸತಿ ನಿಲಯದಲ್ಲಿನ ಅಗತ್ಯ ಸೌಲಭ್ಯಗಳನ್ನು ಒಂದು ವಾರದೊಳಗೆ ಪರಿಹರಿಸದಿದ್ದರೆ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: Karnataka Weather : ಚಂಡಮಾರುತ ಎಫೆಕ್ಟ್; ರಾಜ್ಯದಲ್ಲಿ ಇನ್ನೂ ಮೂರು ದಿನ ವ್ಯಾಪಕ ಮಳೆ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ.ನಾಗೇಂದ್ರ, ಜಯನಗರದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಯಲದಲ್ಲಿ ಹಲವು ಸಮಸ್ಯೆ ಕಂಡು ಬಂದಿದ್ದು, ಕೂಡಲೆ ಎಲ್ಲವನ್ನೂ ಒಂದು ವಾರದೊಳಗೆ ಸರಿಪಡಿಸಬೇಕೆಂದು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಮತ್ತೆ ಭೇಟಿ ನೀಡುವುದಾಗಿ ತಿಳಿಸಿದರು.
ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯಗಳಿಗೆ ಸೋನಾಮಸೂರಿ ಅಕ್ಕಿ ಪೂರೈಸುವ ಕುರಿತು ಚಿಂತನೆ ನಡೆದಿದೆ ಎಂದು ತಿಳಿಸಿದರು.
ಇದನ್ನೂ ಓದಿ: Highest Sky Deck: ಬೆಂಗಳೂರಿನಲ್ಲಿ ತಲೆಯೆತ್ತಲಿದೆ ಅತಿ ಎತ್ತರದ ವೀಕ್ಷಣಾ ಗೋಪುರ!
ವಾಲ್ಮೀಕಿ ಭವನ ಮತ್ತು ಪ.ಜಾ, ಪ.ಪಂ. ಕಾಲೋನಿಯಲ್ಲಿ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಅಲ್ಲದೇ ಜಯನಗರದ ಬಾಲಕಿಯರ ವಸತಿ ನಿಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಈಗಾಗಲೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.