ಗಂಗಾವತಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೆರೆ (Lake) ಕಾಮಗಾರಿ ಮಾಡದೇ ಬೋಗಸ್ ಬಿಲ್ ಎತ್ತುವಳಿ ಮಾಡಿರುವ ಬಗ್ಗೆ ವ್ಯಾಪಕ ದೂರುಗಳು (Complaints) ವ್ಯಕ್ತವಾಗಿದ್ದು, ಕೂಡಲೇ ವಿಸ್ತೃತ ಸಮೀಕ್ಷೆ ಮಾಡಿ ವರದಿ (Report) ನೀಡುವಂತೆ ಶಾಸಕ ಜಿ. ಜನಾರ್ದನರೆಡ್ಡಿ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದ್ಯಾಮಣ್ಣ ಅವರಿಗೆ ಸೂಚನೆ ನೀಡಿದರು.
ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಒಟ್ಟು 14 ಕೆರೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಮೂರು ಪ್ಯಾಕೇಜ್‌ಗಳಲ್ಲಿ 13.50 ಕೋಟಿ ಮೊತ್ತದ ಅನುದಾನ ಮೀಸಲಿಡಲಾಗಿದ್ದು, ಬಹುತೇಕ ಕೆರೆಗಳಿಗೆ ಕಾಮಗಾರಿ ಮಾಡದೇ ಬಿಲ್ ಎತ್ತಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ತಾಲೂಕಿನ ಗಡ್ಡಿ ಗ್ರಾಮಕ್ಕೆ ಶಾಸಕ ಜನಾರ್ದನರೆಡ್ಡಿ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಗಡ್ಡಿ ಗ್ರಾಮದ ಹೊರ ವಲಯದಲ್ಲಿರುವ ಕೆರೆಯನ್ನು ವೀಕ್ಷಿಸಿದ ಶಾಸಕರು, ಕೆರೆಯಲ್ಲಿ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಅಧಿಕಾರಿಯಿಂದ ಮಾಹಿತಿ ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧಿಕಾರಿ ದ್ಯಾಮಣ್ಣ ಗಡ್ಡಿ ಕೆರೆ ಅಭಿವೃದ್ಧಿಗೆ 3.80 ಕೋಟಿ ಮೊತ್ತ ಮೀಸಲಿಡಲಾಗಿದೆ.
ಇದನ್ನೂ ಓದಿ: Money Guide: 25 ಸಾವಿರ ರೂ. ಸಂಬಳದಲ್ಲಿ ಪ್ರತಿ ತಿಂಗಳು 9,500 ರೂ. ಉಳಿಸಬೇಕೆ? ಈ ಟಿಪ್ಸ್ ಫಾಲೋ ಮಾಡಿ
ಇದರಲ್ಲಿ ಕೆರೆ ಕಟ್ಟೆ ಅಭಿವೃದ್ಧಿ, ಪಿಚಿಂಗ್, ಹಸಿರು ಹುಲ್ಲು ಹೊದಿಸುವ ಕಾಮಗಾರಿ, ಕಾಂಕ್ರಿಟ್ ಲೈನಿಂಗ್ ಮಾಡುವುದು, ರಕ್ಷಣಾ ಗೋಡೆ, ಹೂಳೆತ್ತುವುದು ಹೀಗೆ ನಾನಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, 1.8 ಕೋಟಿ ಮೊತ್ತದ ಹಣ ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಜನಾರ್ದನ ರೆಡ್ಡಿ, ಕೆರೆಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡಿಲ್ಲ ಎಂಬುವುದು ಭೌತಿಕವಾಗಿ ಕಾಣುತ್ತಿದೆ. ಒಂದು ಪುಟ್ಟಿ ಹೂಳನ್ನು ಎತ್ತಿಲ್ಲ ಎಂದು ಗ್ರಾಮದ ಜನರು ಆರೋಪಿಸುತ್ತಿದ್ದಾರೆ. ಕೂಡಲೆ ಈ ಬಗ್ಗೆ ತನಿಖೆ ನಡೆಯಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Viral Video: ಪ್ರಜ್ಞೆ ತಪ್ಪಿದ ಹಾವಿನ ಪ್ರಾಣ ಉಳಿಸಿದ ಕಾನ್‌ಸ್ಟೇಬಲ್; ಶಹಬ್ಬಾಶ್ ಎಂದ ಜನ
ಈ ಕೂಡಲೆ ಒಂದು ವಾರದೊಳಗೆ 14 ಕೆರೆಗಳಿಗೆ ಭೇಟಿ ನೀಡಿ ಏನೆಲ್ಲಾ ಕಾಮಗಾರಿ ಮಾಡಲಾಗಿದೆ, ಏನು ಬಾಕಿ ಇದೆ ? ಎಷ್ಟು ಮೊತ್ತದ ಹಣ ಮಂಜೂರಾಗಿದೆ ಎಂಬ ಸಂಪೂರ್ಣ ಮಾಹಿತಿಯ ಪ್ರತಿಯನ್ನು ಡಿಸಿ ಮತ್ತು ನನಗೆ ನೀಡಬೇಕು ಎಂದು ಶಾಸಕ ಜನಾರ್ದನ ರೆಡ್ಡಿ ತಾಕೀತು ಮಾಡಿದರು.