ಗಂಗಾವತಿ: ನಗರದ ಸಿದ್ದಿಕೇರಿಯ ಜನವಸತಿ ಪ್ರದೇಶ ಸಮೀಪದಲ್ಲಿರುವ ಮಾರೆಮ್ಮ ಗುಡಿ ಹತ್ತಿರದ ಬೆಟ್ಟದಲ್ಲಿ (Hill) ಗುರುವಾರ ಬೆಳಗಿನ ಸಮಯದಲ್ಲಿ ಚಿರತೆಗಳ (Leopards) ಜೋಡಿಯೊಂದು ಪ್ರತ್ಯಕ್ಷವಾಗಿರುವ ಘಟನೆ ಜರುಗಿದೆ.
ಸಿದ್ದಿಕೇರಿಯ ಬೇಡರ ಕಣ್ಣಪ್ಪ ವೃತ್ತದ ಬಳಿ ಇರುವ ಮಾರೆಮ್ಮ ಗುಡಿಯ ಸಮೀಪ ಇರುವ ಬೆಟ್ಟದಲ್ಲಿ ಚಿರತೆಗಳ ಚಲನವಲನವನ್ನು ರೈತ ರಾಜೇಶ ಚಳ್ಳೂರು ಹಾಗೂ ರಾಜೇಶ ನಾಯಕ ದೊರೆ ಎಂಬುವವರು ಗಮನಿಸಿದ್ದು, ತಮ್ಮ ಮೊಬೈಲ್‌ಗಳಲ್ಲಿ ಚಿರತೆಗಳ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಬೆಟ್ಟದ ಬಂಡೆಯ ಮೇಲೆ ಸುಮಾರು ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಚಿರತೆಗಳು ಓಡಾಡಿವೆ. ಮಾರೆಮ್ಮ ದೇವಸ್ಥಾನದ ಸುತ್ತಲೂ ಜನ ವಸತಿ ಪ್ರದೇಶವಿದ್ದು, ಸುತ್ತಲೂ ಹೊಲ-ಗದ್ದೆಗಳಿವೆ. ಜನ ಮತ್ತು ಜಾನುವಾರುಗಳ ನಿರಂತರ ಓಡಾಟವಿರುತ್ತದೆ. ಚಿರತೆಗಳು ಪ್ರತ್ಯಕ್ಷವಾಗಿದ್ದರಿಂದ ಜನ-ಜಾನುವಾರುಗಳ ಸಹಜ ಸಂಚಾರಕ್ಕೆ ಆತಂಕ ಎದುರಾದಂತಾಗಿದೆ.
ಇದನ್ನೂ ಓದಿ: Vijayanagara News: ಅ.7ರಂದು ವಿಜಯನಗರ ಜಿಲ್ಲೆಗೆ ಬರ ಅಧ್ಯಯನ ತಂಡ
ಕೂಡಲೆ ಅರಣ್ಯ ಇಲಾಖೆಯ ಸಿಬ್ಬಂದಿ ಬೋನುಗಳನ್ನಿಟ್ಟು ಚಿರತೆಗಳನ್ನು ಸೆರೆ ಹಿಡಿಯಬೇಕು. ಬಳಿಕ ಸುರಕ್ಷಿತ ಪ್ರದೇಶಕ್ಕೆ ಬಿಡಬೇಕು ಎಂದು ಸ್ಥಳೀಯರಾದ ಲಿಂಗಪ್ಪ ಚಳ್ಳೂರು, ಸಿಂಗಾಪುರ ಶ್ರೀನಿವಾಸ, ಹೊನ್ನೂರಪ್ಪ, ಹನುಮಂತ ಹಾಗೂ ಇತರರು ಒತ್ತಾಯಿಸಿದ್ದಾರೆ.