ಗಂಗಾವತಿ: ನಗರದ ಅಭಿವೃದ್ಧಿಗೆ (Development) 2024ರ ಜನವರಿ 1 ರಿಂದ ನಗರಸಭಾ ವ್ಯಾಪ್ತಿಯಲ್ಲಿ ಹೊಸ ನಿಯಮ ಜಾರಿ ಮಾಡಲಾಗುತ್ತಿದ್ದು, ಇದಕ್ಕೆ ನಗರಸಭೆಯ ಯಾವೊಬ್ಬ ಸದಸ್ಯರು ಅಡ್ಡಿಪಡಿಸದೇ ನಗರದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಮನವಿ ಮಾಡಿದರು.
ನಗರಸಭೆಯ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ 2024-25ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕ ಹಾಗೂ ಸಂಘ-ಸಂಸ್ಥೆಗಳ ಪ್ರಮುಖರ ಅಭಿಪ್ರಾಯ ಆಲಿಸಿದ ಬಳಿಕ ಈ ಬಗ್ಗೆ ಪೌರಾಯುಕ್ತ ಮಾತನಾಡಿದರು.
ಜನವರಿ 1ರಿಂದಲೇ ನಗರದಲ್ಲಿ ಕುಡಿಯುವ ನೀರಿನ ಹೊಸ ದರ ಅನ್ವಯವಾಗಲಿದೆ. ಗ್ರಾಹಕರು ಬಳಸುವ ನೀರಿನ ಆಧಾರದ ಮೇಲೆ ನೀರಿನ ಕರ ವಿಧಿಸುವ ಹೊಸ ವಿಧಾನ ಜಾರಿಯಾಗಲಿದೆ. ಆಸ್ತಿ ಮತ್ತು ನೀರಿನ ಕರ ತೆರಿಗೆ ವಸೂಲಿಯಲ್ಲಿ ನಗರಸಭೆ ಕಠಿಣ ಕ್ರಮಕ್ಕೆ ಮುಂದಾಗಲಿದೆ.
ಕಟ್ಟಡದ ಆಸ್ತಿ ತೆರಿಗೆಯಲ್ಲಿ ಹೆಚ್ಚಳ ಮಾಡಲಾಗುವುದು. ತೆರಿಗೆ ಪಾವತಿಸದ ಜನರಿಗೆ ಮೊದಲ ಹಂತವಾಗಿ ಮನೆಯ ನೀರಿನ ಸಂಪರ್ಕ ಸ್ಥಗಿತ ಮಾಡಲಾಗುವುದು. ಈ ಸಂಬಂಧ ಯಾವುದೇ ನಗರಸಭೆಯ ಸದಸ್ಯರು ಅಡ್ಡಿಪಡಿಸಬಾರದು ಎಂದು ತಿಳಿಸಿದರು.
ಇದನ್ನೂ ಓದಿ: RANJI TROPHY: ಕರ್ನಾಟಕ ತಂಡಕ್ಕೆ ಅಗರ್ವಾಲ್ ನಾಯಕ; ಪಂಜಾಬ್ ಮೊದಲ ಎದುರಾಳಿ
ನಗರಸಭೆಗೆ ಆದಾಯಗಳ ಮೂಲ ಹೆಚ್ಚಳ ಮಾಡುವ ಉದ್ದೇಶಕ್ಕೆ ಲೇಔಟ್‌ಗಳ ಶುಲ್ಕದಲ್ಲಿ ಹೆಚ್ಚಳ, ನಗರದಲ್ಲಿನ ವಾಣಿಜ್ಯ ಮಳಿಗೆಗಳಿಗೆ ಲೈಸನ್ಸ್ ಕಡ್ಡಾಯಗೊಳಿಸಲಾಗುವುದು, ತಪ್ಪಿದ್ದಲ್ಲಿ ದಂಡ ಹಾಕುವ ಬಗ್ಗೆ ಚಿಂತನೆ ನಡೆದಿದೆ.
ಅಲ್ಲದೇ ಮುಂದಿನ 2024ರ ಏಪ್ರಿಲ್‌ನಿಂದ ನಗರದಲ್ಲಿ ಹೊಸ ಜಾಹೀರಾತು ನೀತಿ ಜಾರಿಗೆ ಚಿಂತನೆ ನಡೆಸಿದ್ದು, ಜಾಹೀರಾತು ಫಲಕ, ಫ್ಲೆಕ್ಸ್, ಬ್ಯಾನರ್‌ಗಳ ಅಳವಡಿಕೆಗೆ ಪರಿಷ್ಕೃತ ದರ ನಿಗಧಿ ಮಾಡಲಾಗುವುದು. ಅನಧಿಕೃತ ಫ್ಲೆಕ್ಸ್ ಬ್ಯಾನರ್‌ಗಳಿಗೆ ದಂಡ ಹಾಕಲಾಗುವುದು ಎಂದರು.
ಸಭೆಯಲ್ಲಿ ನಗರದ ಅನಧಿಕೃತ ನಳದ ಸಂಪರ್ಕಕ್ಕೆ ದಂಡ, ನಗರಸಭೆಯ ಮಳಿಗೆಗಳ ಬಾಡಿಗೆ ಹೆಚ್ಚಳ, ಆಸ್ತಿ ತೆರಿಗೆಯಲ್ಲಿ ಹೆಚ್ಚಳ ಮಾಡುವುದು, ನಗರದ ಉದ್ಯಾನವನಗಳ ಅಭಿವೃದ್ಧಿಯನ್ನು ಖಾಸಗಿ ಸಹಭಾಗಿತ್ವಕ್ಕೆ ನೀಡುವ ಬಗ್ಗೆ ಸೇರಿದಂತೆ ವಿವಿಧ ಸಲಹೆಗಳು ವ್ಯಕ್ತವಾದವು.
ಜನವರಿ 1 ರಿಂದಲೇ ನಗರದಲ್ಲಿ ನೀರಿನ ಕರ, ಆಸ್ತಿ ಶುಲ್ಕ ಹೆಚ್ಚಳ ಮಾಡಿ ತೆರಿಗೆ ಪಾವತಿಸದ ಮನೆಗಳ ನೀರಿನ ಸಂಪರ್ಕ ಸ್ಥಗಿತ ಮಾಡುವುದಾಗಿ ಕಮಿಷನರ್ ಅವರು ತಿಳಿಸಿದ್ದಕ್ಕೆ ನಗರಸಭಾ ಸದಸ್ಯ ಮನೋಹರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.
ನಗರಸಭಾ ಸದಸ್ಯರ ಸಭೆ ಕರೆದು ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು, ಏಕಪಕ್ಷೀಯವಾಗಿ ನೀವು ನಿರ್ಧಾರ ಕೈಗೊಳ್ಳುವುದು ತಪ್ಪು. ಅಲ್ಲದೇ ನೇರವಾಗಿ ನೀರಿನ ಸಂಪರ್ಕ ಸ್ಥಗಿತಗೊಳಿಸುವ ಬದಲು ನೋಟಿಸ್ ಜಾರಿ ಮಾಡಿ ಎಂದು ಮನೋಹರಸ್ವಾಮಿ ಹೇಳಿದರು.
ಇದಕ್ಕೆ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಪ್ರತಿಕ್ರಿಯಿಸಿ, ನೋಟಿಸ್ ಮೂಲಕ ಕಾಲಹರಣ ಮಾಡಲಾಗದು ಎಂದರು. ಇದು ಸಭೆಯಲ್ಲಿ ಕೆಲಕಾಲ ಮಾತಿನ ಚಕಮಕಿಗೆ ಕಾರಣವಾಯಿತು.
ಇದನ್ನೂ ಓದಿ:Upcoming Kannada Movies: 2024ರ ಬಹು ನಿರೀಕ್ಷಿತ ಕನ್ನಡ ಸಿನಿಮಾಗಳಿವು!
ಸಭೆಯಲ್ಲಿ ನಗರಸಭಾ ಸದಸ್ಯರಾದ ಪರಶುರಾಮ ಮಡ್ಡೇರ, ವಾಸು ನವಲಿ, ಮೌಲಸಾಬ, ಸುನಿತಾ ಶ್ಯಾವಿ, ಶರಭೋಜಿರಾವ್ ಗಾಯಕ್ವಾಡ್, ಮೊಹಮ್ಮದ್ ಉಸ್ಮಾನ್ ಬಿಚ್ಚುಗತ್ತಿ, ರಮೇಶ್ ಚೌಡ್ಕಿ, ನೀಲಕಂಠ ಸೇರಿದಂತೆ ಹಲವರು ಮಾತನಾಡಿದರು.