ಗಂಗಾವತಿ: ಇಲ್ಲಿನ ಆನೆಗೊಂದಿ ರಸ್ತೆಯಲ್ಲಿರುವ ಮೆಟ್ರಿಕ್ ನಂತರದ ಬಾಲಕರ ಡಾ. ಬಿ.ಆರ್. ಅಂಬೇಡ್ಕರ್ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಗಂಗಾವತಿಯ ವಿವಿಧ ಶ್ರೇಣಿಯ ನಾಲ್ವರು ನ್ಯಾಯಾಧೀಶರು, ದಿಢೀರ್ ಭೇಟಿ ನೀಡಿ, ಪರಿಶೀಲನೆ (Inspection) ನಡೆಸಿದರು.
ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸದಾನಂದ ನಾಯಕ್, ಹಿರಿಯ ಶ್ರೇಣಿ ನ್ಯಾಯಾಧೀಶ ರಮೇಶ ಗಾಣಿಗೇರ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಶ್ರೀದೇವಿ ದರ್ಬಾರೆ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಗೌರಮ್ಮ ಪಾಟೀಲ್ ಅವರು ವಸತಿ ನಿಲಯಕ್ಕೆ ಭೇಟಿ ನೀಡಿದರು.
ವಸತಿ ನಿಲಯದಲ್ಲಿ ಕಲ್ಪಿಸಲಾದ ಸೌಲಭ್ಯ, ಕುಡಿಯುವ ನೀರು, ಊಟ, ಶೌಚಾಲಯ ಸೇರಿದಂತೆ ನಾನಾ ಸವಲತ್ತುಗಳನ್ನು ಪರಿಶೀಲಿಸಿದರು. ವಸತಿ ನಿಲಯದಲ್ಲಿನ ಮಕ್ಕಳ ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಮಕ್ಕಳು ಹಲವು ಸಮಸ್ಯೆ, ಕೊರತೆಗಳನ್ನು ನ್ಯಾಯಾಧೀಶರ ಗಮನಕ್ಕೆ ತಂದರು.
ಇದನ್ನೂ ಓದಿ: Radish Benefits: ಮೂಲಂಗಿಯೆಂದು ಮೂಲೆಗೆಸೆಯದಿರಿ! ಮೂಲಂಗಿ ಮಹಿಮೆಯ ತಿಳಿದುಕೊಳ್ಳಿ
ಕುಡಿಯುವ ನೀರು ಸಂಗ್ರಹಿಸುವ ಸ್ಥಳಕ್ಕೆ ತೆರಳಿದ ನ್ಯಾಯಾಧೀಶರು, ಅಲ್ಲಿನ ಕೊಳಕು ಪರಿಸರ ಕಂಡು ವಸತಿ ನಿಲಯದ ಮೇಲ್ವಿಚಾರಕ ಸಂಗಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮ ಮನೆಯಲ್ಲಿ ಇದೇ ವ್ಯವಸ್ಥೆಯಲ್ಲಿಟ್ಟು ನೀರು ಕುಡಿಯುತ್ತೀರಾ ಎಂದು ಪ್ರಶ್ನಿಸಿದರು.
ಅಲ್ಲದೇ ಶೌಚಾಲಯ, ವಸತಿ ನಿಲಯದ ಹೊರ ಮತ್ತು ಒಳ ಆವರಣ ಪರಿಶೀಲಿಸಿದ ನ್ಯಾಯಾಧೀಶರು, ಸೂಕ್ತ ಬೆಳಕಿನ ವ್ಯವಸ್ಥೆ, ಮಕ್ಕಳಿಗೆ ಕಲಿಕಾ ವಾತಾವರಣ ನಿರ್ಮಾಣ ಮಾಡುವಂತೆ ಸೂಚನೆ ನೀಡಿದರು. ಅಲ್ಲದೇ ಮಕ್ಕಳಿಗೆ ಓದಲು ಸಾಕಷ್ಟು ಪುಸ್ತಕ, ದಿನಪತ್ರಿಕೆಗಳ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ವಸತಿ ನಿಲಯದ ಮಕ್ಕಳಿಗೆ ನೀಡುವ ಊಟವನ್ನು ಸ್ವತಃ ನಾಲ್ಕು ಜನ ನ್ಯಾಯಾಧೀಶರು ಊಟ ಮಾಡುವ ಮೂಲಕ ರುಚಿ, ಗುಣಮಟ್ಟ ಪರೀಕ್ಷಿಸಿದರು. ಊಟದ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶೀಘ್ರ ಮತ್ತೊಮ್ಮೆ ಭೇಟಿ ನೀಡಲಿದ್ದು, ಸೂಚನೆ ನೀಡಿದ ಎಲ್ಲವೂ ಸರಿ ಮಾಡುವಂತೆ ವಸತಿ ನಿಲಯದ ಮೇಲ್ವಿಚಾರಕ ಸಂಗಪ್ಪಗೆ ಸೂಚನೆ ನೀಡಿದರು.
ಇದನ್ನೂ ಓದಿ: COP28: ಹವಾಮಾನ ಬದಲಾವಣೆಯಿಂದ ಜಾಗತಿಕ ಜಿಡಿಪಿ ನಷ್ಟ, ಏನು ಕಾರಣ?
ಈ ವೇಳೆ ಸ್ಥಳದಲ್ಲಿದ್ದ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶರಣಪ್ಪ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಸೌಲಭ್ಯ ನೀಡಲು ಇಲಾಖೆ ಶಕ್ತಿ ಮೀರಿ ಯತ್ನಿಸುತ್ತಿದೆ. ನಿಮ್ಮ ಸಲಹೆ-ಸೂಚನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ನ್ಯಾಯಾಧೀಶರಿಗೆ ಭರವಸೆ ನೀಡಿದರು.