ಗಂಗಾವತಿ: ಇಲ್ಲಿನ ಕೇಂದ್ರ ಬಸ್ ನಿಲ್ದಾಣದ (Gangavathi Central Bus Stand) ಪ್ರವೇಶ ದ್ವಾರದಲ್ಲಿ ಸುರಕ್ಷತೆಯ ಉದ್ದೇಶಕ್ಕೆ ಹಾಕಲಾಗಿರುವ ಕಬ್ಬಿಣದ ಸರಳುಗಳು (Iron Bars) ತುಂಡಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಸರಳುಗಳ ಒಂದು ಬದಿ ನೆಲದ ಮಟ್ಟದಿಂದ ಮೇಲಕ್ಕೆ ಎದ್ದಿದ್ದು, ವಾಹನಗಳು ಮುಖ್ಯವಾಗಿ ಬಸ್‌ಗಳು ಓಡಾಡದಂತೆಲ್ಲಾ ಸರಳು ತೂಗಾಡುತ್ತಿವೆ. ನಿಲ್ದಾಣದ ಪ್ರವೇಶ ದ್ವಾರದ ಮಧ್ಯ ಭಾಗದಲ್ಲಿಯೇ ಸರಳುಗಳು ತುಂಡಾಗಿದ್ದರಿಂದ ಬಸ್‌ಗಳ ಓಡಾಟಕ್ಕೆ ಸಮಸ್ಯೆಯಾಗಿದೆ.
ಜತೆಗೆ ನಿಲ್ದಾಣದೊಳಕ್ಕೆ ಬರುವ ದ್ವಿಚಕ್ರ ವಾಹನಗಳ ಚಕ್ರಗಳಿಗೆ ಸರಳುಗಳು ಸಿಕ್ಕಿಕೊಳ್ಳುತ್ತಿದ್ದು, ಸವಾರರು ಪರದಾಡುವ ಸನ್ನಿವೇಶ ನಿರ್ಮಾಣವಾಗಿದೆ.
ಇದನ್ನೂ ಓದಿ: Karnataka Bandh : ಇಂದು ರಾತ್ರಿಯಿಂದಲೇ ಸೆಕ್ಷನ್ 144 ಜಾರಿ; ರ‍್ಯಾಲಿ, ಮೆರವಣಿಗೆಗೆ ಅವಕಾಶವಿಲ್ಲ
ಶಕ್ತಿ ಯೋಜನೆ ಪ್ರಾರಂಭವಾದಾಗಿನಿಂದ ಮಹಿಳಾ ಪ್ರಯಾಣಿಕರು ಸಂಖ್ಯೆಯೂ ದುಪ್ಪಟ್ಟಾಗಿದೆ. ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಆವರಣ ರಾತ್ರಿ ಹನ್ನೊಂದು ಗಂಟೆಯಾದರು ಪ್ರಯಾಣಿಕರಿಂದ ತುಂಬಿರುತ್ತದೆ. ರಾತ್ರಿ ಕತ್ತಲೆಯಲ್ಲಿ ಯಾರಾದರೂ ಆಯಾತಪ್ಪಿ ಕಬ್ಬಿಣದ ರಾಡುಗಳ ಮೇಲೆ ಬಿದ್ದರೆ ಪ್ರಾಣಕ್ಕೆ ಕಂಟಕ ಎದುರಾಗಲಿದೆ.
ಬಸ್ ನಿಲ್ದಾಣದ ಆವರಣದ ಪ್ರವೇಶದ್ವಾರದಲ್ಲೆ ಕಬ್ಬಿಣದ ರಾಡುಗಳು ಎದ್ದು ನಿಂತಿದ್ದು, ರಾತ್ರಿ ವೇಳೆಯಲ್ಲಿ ಅಥವಾ ಮಳೆ ಬರುವ ವೇಳೆ ವಿದ್ಯುತ್ ಸ್ಥಗಿತವಾದಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.
ಈ ಬಗ್ಗೆ ಪ್ರಯಾಣಿಕರೊಬ್ಬರು ಪ್ರತಿಕ್ರಿಯೆ ನೀಡಿ, ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಮುಖ್ಯ ಚರಂಡಿಯ ಮೇಲಿನ ಕಬ್ಬಿಣದ ರಾಡುಗಳು ತುಂಡಾಗಿ ನಿಂತಿದ್ದು, ನಿತ್ಯ ಸಾವಿರಾರು ಜನ ಅಪಾಯದ ಭೀತಿಯಿಂದ ತಿರುಗಾಡುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Chandrayaan 3: ಚಂದ್ರಯಾನ 3 ಚಂದ್ರನ ದಕ್ಷಿಣ ಧ್ರುವವನ್ನು ತಲುಪಿಯೇ ಇಲ್ಲ ಎಂಬ ಚೀನಾ ವಿಜ್ಞಾನಿ!
ಗಂಗಾವತಿ ಬಸ್ ನಿಲ್ದಾಣದಲ್ಲಿ ಕನಿಷ್ಟ ಮೂಲಭೂತ ಸೌಲಭ್ಯ, ಸ್ವಚ್ಚತೆಯ ಕೊರತೆ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದಿರುವುದು ಬೇಸರದ ಸಂಗತಿಯಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.