ಗಂಗಾವತಿ: ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ಜಾವದವರೆಗೂ ಸುರಿದ ಅಕಾಲಿಕ ಮಳೆ (Rain) ಹಾಗೂ ಬೀಸಿದ ಭಾರಿ ಗಾಳಿಗೆ ಗಂಗಾವತಿ ಮತ್ತು ಕಾರಟಗಿ ತಾಲೂಕಿನಲ್ಲಿ ಅಪಾರ ಪ್ರಮಾಣದ ಭತ್ತದ ಬೆಳೆ (Paddy Crop) ಹಾನಿಯಾಗಿದೆ.
ಕೊಯ್ಲಿನ ಹಂತಕ್ಕೆ ಬಂದಿದ್ದ ಸೋನಾಮಸೂರಿ ತಳಿಯ ಭತ್ತದ ಬೆಳೆ ಹೆಚ್ಚಿನ ಹಾನಿಯಾಗಿದೆ. ಕಾರಟಗಿ ತಾಲೂಕು ಒಂದರಲ್ಲಿಯೇ ಅತಿಹೆಚ್ಚು ಹಾನಿಯಾಗಿದ್ದು, ಸುಮಾರು 3000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾನಿಯಾಗಿದೆ. ಗಂಗಾವತಿ ತಾಲೂಕಿನಲ್ಲಿ ಸುಮಾರು 500 ಹೆಕ್ಟೇರ್ ಪ್ರದೇಶದಲ್ಲಿನ ಭತ್ತ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಕಾರಟಗಿ-ಸಿದ್ದಾಪುರ ಹೋಬಳಿಯ ಬೂದಗುಂಪಾ, ಯರೋಡಣಾ, ಈಳಿಗೆನೂರು, ಮರ್ಲಾನಹಳ್ಳಿ, ಗಂಗಾವತಿ-ಮರಳಿ ಹೋಬಳಿಯ ಹೊಸಳ್ಳಿ, ಹಣವಾಳ, ಹೊಸಕೇರಿ, ಶ್ರೀರಾಮನಗರ, ಮರಳಿ, ನರಸಾಪುರ ಮೊದಲಾದ ಗ್ರಾಮಗಳಲ್ಲಿನ ಭತ್ತ ಹಾನಿಯಾಗಿದೆ.
ಇದನ್ನೂ ಓದಿ: Hottest Year: 1.25 ಲಕ್ಷ ವರ್ಷಗಳಲ್ಲೇ 2023 ಅತಿ ಬಿಸಿಯಾದ ವರ್ಷ, ಕಾರಣ ಏನು?
ಇಲಾಖೆಗಳ ಜಂಟಿ ಸಮೀಕ್ಷೆ
ತುಂಗಭದ್ರಾ ಎಡದಂತೆ ಕಾಲುವೆಯ ಅಚ್ಚುಕಟ್ಟು ಪ್ರದೇಶಗಳಾದ ಗಂಗಾವತಿ, ಕಾರಟಗಿ ಭಾಗದಲ್ಲಿ ಬೆಳೆದಿದ್ದ ಭತ್ತದ ಬೆಳೆ ಮಳೆ-ಗಾಳಿಗೆ ಹಾನಿಯಾಗಿರುವ ಮಾಹಿತಿ ಲಭಿಸುತ್ತಿದ್ದಂತೆಯೇ ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆಗೆ ಮುಂದಾಗಿದ್ದಾರೆ.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್ ಪಟ್ಟದಕಲ್, ಗಂಗಾವತಿ ತಹಸೀಲ್ದಾರ್ ಮಂಜುನಾಥ ಹಿರೇಮಠ, ಕಾರಟಗಿ ತಹಸೀಲ್ದಾರ್ ಕುಮಾರಸ್ವಾಮಿ ನೇತೃತ್ವದಲ್ಲಿ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡರು.
ಇದನ್ನೂ ಓದಿ: Virat kohli : ಜಾಗತಿಕ ಶ್ರೇಷ್ಠ ಕ್ರೀಡಾಪಟುಗಳ ಪಟ್ಟಿಯಲ್ಲೂ ಕೊಹ್ಲಿಗೆ ಮುಂಚೂಣಿ ಸ್ಥಾನ
ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನವರೆಗೆ ಸುರಿದ ಮಳೆಗೆ ಗಂಗಾವತಿ-ಕಾರಟಗಿ ತಾಲೂಕಿನಲ್ಲಿ ಒಟ್ಟು 3500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾನಿಯಾಗಿದೆ. ಈ ಬಗ್ಗೆ ಜಂಟಿ ಸಮೀಕ್ಷೆ ಕೈಗೊಂಡಿದ್ದು, ಈ ಕುರಿತು ಸರ್ಕಾರಕ್ಕೆ ಜಿಲ್ಲಾಡಳಿತದ ಮೂಲಕ ವರದಿ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್ ಪಟ್ಟದಕಲ್ ತಿಳಿಸಿದ್ದಾರೆ.