ಗಂಗಾವತಿ: ತಾಲೂಕಿನ ಚಿಕ್ಕಬೆಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಚ್ಆರ್‌ಜಿ ಕ್ಯಾಂಪಿನ ಜನವಸತಿ ಪ್ರದೇಶದ ಅನತಿ ದೂರದ ಬೆಟ್ಟದಲ್ಲಿ (Hill) ಪತ್ತೆಯಾಗಿರುವ ಆದಿ ಮಾನವರು (Primitive People) ವಾಸವಿದ್ದ ಪ್ರದೇಶಕ್ಕೆ ಕೊಪ್ಪಳ ಜಿಲ್ಲಾ ಪಂಚಾಯಿತಿಯ ಸಿಇಒ ರಾಹುಲ್ ರತ್ನಂ ಪಾಂಡೆಯ ಮಂಗಳವಾರ ಭೇಟಿ ನೀಡಿ, ಪರಿಶೀಲಿಸಿದರು.
ಪತ್ತೆಯಾಗಿರುವ ಆದಿ ಮಾನವರ ನೆಲೆ ಮತ್ತು ವಾಸ ಸ್ಥಾನದ ಸ್ಮಾರಕಗಳು ನಾಶವಾಗುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಸಿಇಒ, ಎಚ್ಆರ್‌ಜಿ ನಗರ ಗ್ರಾಮದ ಹೊರ ವಲಯದಲ್ಲಿರುವ ಬೆಟ್ಟಕ್ಕೆ ಖುದ್ದು ಭೇಟಿ ನೀಡಿ, ಪರಿಶೀಲಿಸಿದರು.
ಸ್ಥಳೀಯ ಯುವಕರ ನೆರವಿನೊಂದಿಗೆ ಅತ್ಯಂತ ಕಡಿದಾದ ಮತ್ತು ದುರ್ಗಮವಾಗಿರುವ ರಸ್ತೆಯಲ್ಲಿ ಸಾಗಿ ಬೆಟ್ಟ ಏರಿದ ಸಿಇಒ, ಬೆಟ್ಟದ ವಿಶಾಲವಾದ ತಳಹದಿಯ ಹರಡಿಕೊಂಡಿರುವ ಮೋರೇರ್ ಮನೆ ಎಂದು ಕರೆಯಲಾಗುವ ಸ್ಮಾರಕಗಳನ್ನು ವೀಕ್ಷಿಸಿದರು.
ಇದನ್ನೂ ಓದಿ: Asian Games 2023: ಸ್ಕ್ವ್ಯಾಶ್‌ನಲ್ಲಿ ಕಂಚು ಗೆದ್ದ 15 ವರ್ಷದ ಬಾಲಕಿ; ಬಾಕ್ಸಿಂಗ್‌ನಲ್ಲಿ ಪರ್ವೀನ್‌ಗೆ ಕಂಚು
ಈ ಬಗ್ಗೆ ಜಿಪಂ ಸಿಇಒ ಅವರು ಸ್ಥಳೀಯರಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡರು. ಈ ವೇಳೆ ಹಾಜರಿದ್ದ ಸ್ಥಳೀಯ ಯುವಕ ಹೊಳೆಯಪ್ಪ ಮಾತನಾಡಿ, ಸುಮಾರು ಐದು ಸಾವಿರ ವರ್ಷಗಳಷ್ಟು ಈ ಸ್ಮಾರಕಗಳು ಪುರಾತನವಾಗಿವೆ,
ಆದರೆ ಇಲ್ಲಿ ಜನ ಸಂಚಾರವಿಲ್ಲದ್ದರಿಂದ ರಕ್ಷಣೆ ಸಾಧ್ಯವಾಗಿಲ್ಲ. ಬೆಟ್ಟದ ಮೇಲೆ ಏರಲು ಸಂಬಂಧಪಟ್ಟ ಇಲಾಖೆಯಿಂದ ರಸ್ತೆ ನಿರ್ಮಾಣ ಮಾಡಬೇಕು. ಪ್ರಾಚ್ಯವಸ್ತು ಇಲಾಖೆಯಿಂದ ರಕ್ಷಣೆ ಮಾಡಬೇಕು. ಅರಣ್ಯ ಇಲಾಖೆಯಿಂದ ಗಡಿ ಗುರುತಿಸಿ ತಂತಿಬೇಲಿ ಹಾಕಿ ರಕ್ಷಣೆ ಮಾಡಬೇಕು ಎಂದು ವಿವರಿಸಿದರು.
ಈ ಸ್ಮಾರಕಗಳಿರುವ ಪ್ರದೇಶವನ್ನು ಮೋರೇರ್ ಬೆಟ್ಟ ಎಂದು ಕರೆಯಲಾಗುತ್ತಿದ್ದು, ಸಂಶೋಧಕರಿಂದ ಮಾಹಿತಿ ಸಂಗ್ರಹಿಸುವ ಕೆಲಸ ಆಗಬೇಕಿದೆ ಎಂದು ಸ್ಥಳೀಯರು ತಿಳಿಸಿದರು.
ಇದನ್ನೂ ಓದಿ: Maruti Suzuki: ಇನ್‌ಕಮ್ ಟ್ಯಾಕ್ಸ್ ನೋಟೀಸ್, ಮಾರುತಿ ಸುಜುಕಿ ಷೇರು ಬೆಲೆ 2% ಕುಸಿತ
ಈ ಬಗ್ಗೆ ಸ್ಥಳೀಯರ ಸಲಹೆ ಆಲಿಸಿದ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ಆದಷ್ಟು ಶೀಘ್ರ ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡುತ್ತೇವೆ. ನಾಶದ ಹಾದಿಯಲ್ಲಿರುವ ಸ್ಮಾರಗಳ ರಕ್ಷಣೆಗೆ ಯೋಜನೆ ರೂಪಿಸೋಣ. ಸ್ಥಳೀಯರು ಕೈ ಜೋಡಿಸಬೇಕು ಎಂದು ಕೋರಿದರು.