ಗಂಗಾವತಿ: ಚಿರತೆಯೊಂದು ಕುರಿಹಟ್ಟಿಗೆ ನುಗ್ಗಿ (Leopard Attack) ಎರಡು ಕುರಿಗಳನ್ನು ಬಲಿ ಪಡೆದು ಪರಾರಿಯಾಗಿದೆ. ತಾಲೂಕಿನ ಬಸವನದುರ್ಗಾ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ಈ ಘಟನೆ ನಡೆದಿದೆ.
ಗ್ರಾಮದ ರಮೇಶ ಹನುಮಂತಪ್ಪ ಎಂಬುವವರಿಗೆ ಸೇರಿದ ಸುಮಾರು ನೂರಕ್ಕೂ ಹೆಚ್ಚು ಕುರಿಗಳಿರುವ ಹಟ್ಟಿಗೆ ಮಧ್ಯರಾತ್ರಿ ನುಗ್ಗಿದ್ದ ಚಿರತೆ, ಎರಡು ಕುರಿಗಳನ್ನು ಬಲಿ ಪಡೆದಿದೆ. ಬಳಿಕ ಎರಡು ಗಂಟೆಗೂ ಹೆಚ್ಚು ಕಾಲ ಕುರಿಗಳೊಂದಿಗೆ ಅದು ಹಟ್ಟಿಯಲ್ಲಿಯೇ ಇತ್ತು.
ಇದನ್ನೂ ಓದಿ: Gold Rate Today: 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ₹550 ಇಳಿಕೆ; ಇಂದು ಹೀಗಿದೆ ಬೆಲೆ ಗಮನಿಸಿ
ಕುರಿಹಟ್ಟಿ ಸುತ್ತಲೂ ತಂತಿ ಬೇಲಿ ಹಾಕಿದ್ದರಿಂದ ಚಿರತೆಗೆ ತಕ್ಷಣ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಕುರಿಗಳು ಅಸ್ವಾಭಾವಿಕವಾಗಿ ಕೂಗಿಕೊಳ್ಳುತ್ತಿರುವುದನ್ನು ಗಮನಿಸಿದ ಮಾಲೀಕ ರಮೇಶ, ಸ್ಥಳಕ್ಕೆ ಬಂದು ನೋಡಿದಾಗ ಚಿರತೆ ಇರುವುದು ಕಂಡು ಬಂದಿದೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಆದರೆ ಅವರು ಸ್ಥಳಕ್ಕೆ ಬರುವ ಹೊತ್ತಿಗೆ ಚಿರತೆ ಪರಾರಿಯಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Earth day 2024: ವಿಶ್ವ ಭೂಮಿ ದಿನವನ್ನು ಇಂದೇ ಆಚರಿಸುವ ಉದ್ದೇಶವೇನು?
ಭಾನುವಾರ ಸಂಜೆ ಚಿರತೆಯನ್ನು ಗಮನಿಸಿದ್ದ ಗ್ರಾಮಸ್ಥರು ಸದ್ದು ಮಾಡುವ ಮೂಲಕ ಓಡಿಸಿದ್ದಾರೆ. ಆದರೆ ಪುನಃ ಮಧ್ಯರಾತ್ರಿ ಎರಡು ಗಂಟೆಯ ಸುಮಾರಿಗೆ ಬಂದ ಚಿರತೆ ಎರಡು ಕುರಿಗಳನ್ನು ತಿಂದು ಹಾಕಿದ್ದು, ಎರಡು ಗಂಟೆಗೂ ಹೆಚ್ಚು ಕಾಲ ಕುರಿಹಟ್ಟಿಯಲ್ಲಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.