Site icon Vistara News

ಖಾಸಗಿ ಕಂಪೆನಿಯವರಿಂದ ಮೊಬೈಲ್ ಟವರ್ ನಿರ್ಮಾಣಕ್ಕೆ ಸ್ಥಳೀಯರ ವಿರೋಧ

ಮೊಬೈಲ್ ಟವರ್

ಕೊಪ್ಪಳ: ಕಲ್ಯಾಣ ನಗರದ ಮನೆಯೊಂದರ ಮೇಲೆ ಖಾಸಗಿ ದೂರಸಂಪರ್ಕ ಕಂಪನಿಯವರು ಮೊಬೈಲ್‌ ಟವರ್‌ ಸ್ಥಾಪಿಸಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಶಾಂತವೀರಪ್ಪ ಜೋಗಿನ್ ಎಂಬುವವರ ಎರಡಂತಸ್ತಿನ ಕಟ್ಟಡದ ಮೇಲೆ ಮೊಬೈಲ್ ಟವರ್ ನಿರ್ಮಾಣ ಮಾಡಲಾಗುತ್ತಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಜನವಸತಿ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡಬಾರದು. ಕಟ್ಟಡವೇ ಅನಧಿಕೃತವಾಗಿದ್ದು, ಈಗ ಅದರ ಮೇಲೆ ಮೊಬೈಲ್ ಟವರ್ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಮೊಬೈಲ್‌ ಟವರ್‌ ಸ್ಥಾಪಿಸಬಾರದು ಎಂದು ಆಗ್ರಹಿಸಿ ಪ್ರದೇಶದ ಜನರು ಪ್ರತಿಭಟನೆ ಶುರು ಮಾಡಿದ್ದಾರೆ. ಮೊಬೈಲ್ ಟವರ್ ನಿರ್ಮಾಣ ಮಾಡದಂತೆ ನಗರಸಭೆಗೆ ಈ ಕುರಿತಂತೆ ಗಮನಕ್ಕೆ ತಂದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಿವೃತ್ತ ಪ್ರಾಚಾರ್ಯ ಹಾಗೂ ಕಲ್ಯಾಣನಗರ ಹಿತರಕ್ಷಣಾ ಸಮಿತಿ ಮುಖಂಡ ಅಲ್ಲಮಪ್ರಭು ಬೆಟ್ಟದೂರು ಪ್ರತಿಕ್ರಿಯಿಸಿ, ಜನವಸತಿ ಪ್ರದೇಶದಲ್ಲಿ ಮೊಬೈಲ್‌ ಅವರ್‌ ನಿರ್ಮಾಣ ಮಾಡಲಾಗುತ್ತಿದೆ. ಇದರ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಸಹ ವಿಚಾರಣೆಯಲ್ಲಿದೆ. ಆದರೂ ಟವರ್‌ ನಿರ್ಮಾಣ ಮಾಡುತ್ತಿದ್ದಾರೆ. ಈಗಲೇ ನಿರ್ಮಾಣ ಸ್ಥಗಿತ ಮಾಡದಿದ್ದರೆ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಸಿರುವ ಮನೆಯ ಮಾಲೀಕ ಶಾಂತವೀರಪ್ಪ, ಕಟ್ಟಡ ಅನಧಿಕೃತವಲ್ಲ. ಇದು ಅವರಿಗೂ ಗೊತ್ತಿದೆ. ಇಲ್ಲಿವರೆಗೆ ಕೆಲಸಕ್ಕೆ ತಡೆಯಾಜ್ಞೆ ವಿಧಿಸಲಾಗಿಲ್ಲ. ನಮ್ಮ ವಕೀಲರ ಸೂಚನೆ ಮೇರೆಗೆ ಕಾಮಗಾರಿಯನ್ನು ಆರಂಭಿಸಿದ್ದೇವೆ. ಸುತ್ತಮುತ್ತ ಅನೇಕ ಅನಧಿಕೃತ ಕಟ್ಟಡಗಳಿದ್ದರೂ ಅದನ್ನು ಕೇಳದೆ ನಮ್ಮ ಕಟಟ್ಡದ ಕುರಿತು ಪ್ರತಿಭಟನೆ ಮಾಡುತ್ತಿದ್ದಾರೆ. ಕಾನೂನು ಪ್ರಕಾರ ಎಲ್ಲವೂ ಸರಿಯಾಗಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ | ಕೊಟ್ಟ ಹಣ ವಾಪಸ್‌ ಬಾರದ್ದಕ್ಕೆ ಬೇಸರ ಮೊಬೈಲ್‌ ಮಳಿಗೆ ಮಾಲೀಕ ಆತ್ಮಹತ್ಯೆ

ಸ್ಥಳೀಯರ ಪ್ರತಿಭಟನೆಯಿಂದಾಗಿ ಸ್ಥಳಕ್ಕೆ ನಗರಸಭೆಯ ಅಧಿಕಾರಿಗಳು ಆಗಮಿಸಿ ಮೊಬೈಲ್ ಟವರ್‌ ನಿರ್ಮಾಣದ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ನೋಟೀಸ್ ನೀಡಿದ್ದಾರೆ. ಯಥಾಸ್ಥಿತಿ ಕಾಪಾಡುವಂತೆ ಸೂಚನೆ ನೀಡಿದ್ದಾರೆ. ಸದ್ಯಕ್ಕೆ ಈಗ ಮೊಬೈಲ್ ಟವರ್ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಂತಾಗಿದೆ. ಪ್ರಕರಣ ನ್ಯಾಯಾಲಯದ ತೀರ್ಪು ಮೊಬೈಲ್ ಟವರ್ ನಿರ್ಮಾಣ ಮಾಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಿದೆ.

Exit mobile version