ಕೊಪ್ಪಳ: ಇಂದಿನಿಂದ ಮುಸ್ಲಿಂ ಸಮುದಾಯದ ಮೊಹರಂ ಹಬ್ಬ (Muharram 2023) ಆಚರಣೆ ಪ್ರಾರಂಭವಾಗಲಿದ್ದರೂ ಇಲ್ಲಿನ ಹುಲಿಹೈದರ ಗ್ರಾಮದಲ್ಲಿ ಈ ಹಬ್ಬ ಆಚರಣೆಗೆ ಅವಕಾಶ ಇಲ್ಲ. ಜುಲೈ 18ರಿಂದಲೇ ಹುಲಿಹೈದರ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದು, ಈ ತಿಂಗಳ 29ರವರೆಗೂ ಮುಂದುವರಿಯಲಿದೆ. ಯಾವ ಕಾರಣಕ್ಕೂ ಮೊಹರಂ ಹಬ್ಬ ಆಚರಿಸುವಂತಿಲ್ಲ ಎಂದು ಕನಕಗಿರಿ ತಹಸೀಲ್ದಾರ್ ಆದೇಶ ನೀಡಿದ್ದಾರೆ.
ಕಳೆದ ವರ್ಷ ಮೊಹರಂ ಆಚರಣೆ ಮುಗಿದ ಬಳಿಕ ಆಗಸ್ಟ್ 11ರಂದು, ಇಲ್ಲಿ ಹಿಂದು-ಮುಸ್ಲಿಂ ಗಲಾಟೆಯಾಗಿತ್ತು. ಈ ಸಂಘರ್ಷದಲ್ಲಿ ಇಬ್ಬರು ಮೃತಪಟ್ಟಿದ್ದರು. ಪ್ರಕರಣದಲ್ಲಿ 84 ಜನರನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಅದರಲ್ಲಿ 81 ಮಂದಿ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಇನ್ನೂ ಮೂವರು ನ್ಯಾಯಾಂಗ ಬಂಧನದಲ್ಲೇ ಇದ್ದಾರೆ. ಅಂದು ಗಲಾಟೆ ನಡೆದಾಗಿನಿಂದಲೂ ಗ್ರಾಮದಲ್ಲಿ ಸಂಪೂರ್ಣ ಶಾಂತಿ ನೆಲೆಸಿಲ್ಲ. ಇನ್ನೂ ದ್ವೇಷದ ವಾತಾವರಣವೇ ತುಂಬಿ ತುಳುಕುತ್ತಿದೆ. ಗ್ರಾಮದಲ್ಲಿ ಪೊಲೀಸ್ ಕಣ್ಗಾವಲು ಮುಂದುವರಿದಿದೆ. ಪರಿಸ್ಥಿತಿ ಹೀಗೆಲ್ಲ ಇರುವುದರಿಂದ ಈ ಸಲ ಮೊಹರಂ ಹಬ್ಬದ ಆಚರಣೆಗೆ ಅವಕಾಶ ಇಲ್ಲ ಎಂದು ತಹಸೀಲ್ದಾರ್ ಹೇಳಿದ್ದಾರೆ.
ಇದನ್ನೂ ಓದಿ: ಮೊಹರಂ ಮೆರವಣಿಗೆಯಲ್ಲಿ ಗಾಯಕನ ಮೇಲೆ ಹಣ ತೂರಿದ ಕಾಂಗ್ರೆಸ್ ನಾಯಕ, ಮುಂದಿನ ಚುನಾವಣೆ ಮೇಲೆ ಕಣ್ಣು!
ಸದ್ಯ ನಿಷೇಧಾಜ್ಞೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ 4 ಜನರಿಗಿಂತ ಹೆಚ್ಚು ಜನ ಗುಂಪುಗೂಡುವಂತಿಲ್ಲ. ಗುಂಪುಗುಂಪಾಗಿ ತಿರುಗುವಂತಿಲ್ಲ. ಮಾರಕಾಸ್ತ್ರಗಳನ್ನು ಹಿಡಿದು ಓಡಾಡುತ್ತಿರುವುದರು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ. ಕಳೆದ ಗಲಾಟೆಯ ಬೆಂಕಿ ಇನ್ನೂ ಪೂರ್ತಿ ಆರದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ವಿಧಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.