Site icon Vistara News

Koppala News: ಕೊಪ್ಪಳದ ಬಾಲಮಂದಿರ ಮಕ್ಕಳಿಂದ ತಾರಾಲಯ ವೀಕ್ಷಣೆ

Planetarium viewing by balamandir children in Koppala

ಕೊಪ್ಪಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಮಂದಿರಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ನಗರದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ತಾರಾಲಯ (Planetarium) , ಸೌರಮಂಡಲ, ವಿವಿಧ ಭೌತಶಾಸ್ತ್ರೀಯ ರಚನೆಗಳನ್ನು ವೀಕ್ಷಿಸಿದರು.

ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಲಾಗಿರುವ ತಾರಾಲಯವನ್ನು ಪ್ರವೇಶಿಸಿದ ವಿದ್ಯಾರ್ಥಿಗಳು ಸೌರಮಂಡಲದ ರಚನೆ, ಸೂರ್ಯ ಮತ್ತು ವಿವಿಧ ನಕ್ಷತ್ರಗಳು, ಗ್ರಹಗಳು, ಧೂಮಕೇತು, ಉಲ್ಕೆಗಳು ಮೊದಲಾದವುಗಳ ದೃಶ್ಯಗಳನ್ನು ಕಣ್ತುಂಬಿಕೊಂಡರು.

ವಿವಿಧ ವಿಜ್ಞಾನ ಮಾದರಿಗಳ ಕುರಿತು ಪ್ರಾದೇಶಿಕ ವಿಜ್ಞಾನ ಕೇಂದ್ರದ ಮುಖ್ಯಸ್ಥ ಮೈಲಾರಪ್ಪ, ಮಕ್ಕಳಿಗೆ ಕುತೂಹಲಕರವಾಗಿ ವಿವರಿಸಿದರು.

ಇದನ್ನೂ ಓದಿ: SBI Recruitment 2023: ಎಸ್‌ಬಿಐಯಲ್ಲಿದೆ 439 ಹುದ್ದೆ; ಅರ್ಜಿ ಸಲ್ಲಿಕೆಗೆ ಇಂದೇ ಕೊನೆಯ ದಿನ

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಪ್ರಾದೇಶಿಕ ವಿಜ್ಞಾನ ಕೇಂದ್ರ ಮಾಡುತ್ತಿರುವ ಪ್ರಯತ್ನಗಳು ಶ್ಲಾಘನೀಯ. ಎಲ್ಲಾ ಕ್ರಿಯೆ, ಚಟುವಟಿಕೆಗಳಿಗೆ ವಿಜ್ಞಾನವೇ ಆಧಾರವಾಗಿರುತ್ತದೆ. ವಿಜ್ಞಾನವೊಂದೇ ಸತ್ಯ. ಅಂಧ ನಂಬಿಕೆಗಳನ್ನು ಕೈಬಿಟ್ಟು ಪ್ರತಿಯೊಂದನ್ನು ವೈಜ್ಞಾನಿಕವಾಗಿ ನೋಡುವ, ಅರ್ಥೈಸಿಕೊಳ್ಳುವ ಪ್ರಯತ್ನಗಳನ್ನು ಮಾಡಬೇಕು. ಕೊಪ್ಪಳದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಬಾಲಮಂದಿರದಲ್ಲಿರುವ ಗ್ರಾಮೀಣ ಮಕ್ಕಳು ಇಂದು ಇಲ್ಲಿಗೆ ಭೇಟಿ ನೀಡುವ ಮೂಲಕ ಸಂತಸಪಡುವುದರೊಂದಿಗೆ ಅನೇಕ ವಿಷಯಗಳನ್ನು ಬೆರಗು ಗಣ್ಣಿನಿಂದ ನೋಡಿದ್ದಾರೆ. ಕಿರಿಯರಷ್ಟೇ ಅಲ್ಲದೇ ಹಿರಿಯರು ಕೂಡ ಅರಿಯಬೇಕಾದ ಅನೇಕ ಸಂಗತಿಗಳು ಇಲ್ಲಿವೆ ಎಂದರು.

ಇದನ್ನೂ ಓದಿ: DA Hike: ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್; ತುಟ್ಟಿಭತ್ಯೆ ಶೇ. 3.75 ಹೆಚ್ಚಳ

ಈ ಸಂದರ್ಭದಲ್ಲಿ ಬಾಲಮಂದಿರದ ಅಧೀಕ್ಷಕಿ ಮಂಜುಳಾ ಬುದ್ದಪ್ಪನವರ್, ಸಾಂಸ್ಥಿಕ ರಕ್ಷಣಾಧಿಕಾರಿ ಸುಮಲತಾ ಎಂ.ಡೊಳ್ಳಿನ, ಲೀಗಲ್ ಕಂ ಪ್ರೊಬೇಶನ್ ಅಧಿಕಾರಿ ಶಿವಲೀಲಾ ವನ್ನೂರ, ಸಿಬ್ಬಂದಿ ವರ್ಗದ ನೇತ್ರಾ ಹಡಪದ, ಮಂಜುನಾಥ, ಮಕ್ಕಳ ಜಾಗೃತಿ ಸಂಸ್ಥೆಯ ಪ್ರಕಾಶ್, ವ್ಯೋಮಕೇಶಯ್ಯ, ಶರಣಮ್ಮ ಸೇರಿದಂತೆ ಇತರರು ಇದ್ದರು.

Exit mobile version