ಗಂಗಾವತಿ: ಕಾರಟಗಿ ಪಟ್ಟಣ ಸೇರಿ ತಾಲೂಕಿನಾದ್ಯಂತ ಗುರುವಾರ ರಾತ್ರಿ ಸುರಿದ ಭಾರೀ ಮಳೆ (Heavy Rain) ಮತ್ತು ಬಿರುಗಾಳಿಗೆ ನಾನಾ ಕಡೆ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಾಮನಗರದಲ್ಲಿ ತೀವ್ರ ಹಾನಿಗೀಡಾದ 14 ತಗಡಿನ ಶೆಡ್ ಮನೆಗಳ ಸ್ಥಳಕ್ಕೆ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ಕಾರಟಗಿ ತಹಸೀಲ್ದಾರ್ ಕುಮಾರಸ್ವಾಮಿ, ರಾಮನಗರದಲ್ಲಿ 14 ತಗಡಿನ ಶೆಡ್‌ಗಳ ಮನೆ ಬಿದ್ದು ಹಾನಿಯಾಗಿವೆ, 9 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ ಹಾಗೂ 20ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ: Koppal Tragedy : ಶೌಚಾಲಯದ ಗೋಡೆ ಕುಸಿದು ಮಹಿಳೆಯರಿಬ್ಬರು ಸಾವು; ಈಜಲು ಹೋದ ಯುವಕ ನೀರುಪಾಲು
ಬಳಿಕ ಮಾತನಾಡಿದ ಸಚಿವರು, ಮಳೆ ಗಾಳಿಗೆ ಹಾನಿಗೀಡಾದ ಮನೆ, ಬೆಳೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ತಮ್ಮ ಮೇಲಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗೆ ನೀಡಬೇಕು. ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ವರದಿ ನೀಡಿ ಆದಷ್ಟು ಶೀಘ್ರ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು ಎಂದರು.
ಮುಖ್ಯವಾಗಿ ಕಂದಾಯ, ತೋಟಗಾರಿಕೆ, ಜೆಸ್ಕಾಂ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಹಾನಿಗೀಡಾದ ಮನೆ, ಬೆಳೆ, ವಿದ್ಯುತ್ ಕಂಬ, ರಸ್ತೆ ಸೇರಿದಂತೆ ಇತರ ಮಾಹಿತಿಯನ್ನು ತ್ವರಿತವಾಗಿ ಒದಗಿಸಬೇಕು ಎಂದು ಸೂಚನೆ ನೀಡಿದರು.
50 ಸಾವಿರ ರೂ ಪರಿಹಾರಕ್ಕೆ ಒತ್ತಾಯ
ಗುರುವಾರ ಬೀಸಿದ ಬಿರುಗಾಳಿ ಮಳೆಗೆ ತಾಲೂಕಿನಲ್ಲಿ ಸಾಕಷ್ಟು ಪ್ರಮಾಣದ ಮನೆಗಳಿಗೆ ಹಾನಿಯಾಗಿದ್ದು, ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನ ಹರಿಸಿ ಸಂತ್ರಸ್ತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಬಿಜೆಪಿಯ ಕೊಪ್ಪಳ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮೌನೇಶ್ ಧಡೇಸೂಗೂರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Health Tips in Kannada: ಟೊಮ್ಯಾಟೊ ಜ್ಯೂಸ್ ಆರೋಗ್ಯಕ್ಕೇಕೆ ಒಳ್ಳೆಯದು ಗೊತ್ತೆ?
ಪಟ್ಟಣದ ರಾಮನಗರಕ್ಕೆ ಭೇಟಿ ನೀಡಿ, ಬಳಿಕ ಮಾತನಾಡಿದ ಅವರು, ತಕ್ಷಣ ಸರ್ಕಾರ ಮತ್ತು ಜಿಲ್ಲಾಡಳಿತ ಸಂತ್ರಸ್ತರ ನೇರವಿಗೆ ಧಾವಿಸಬೇಕು. ನೆಲೆ ಕಳೆದುಕೊಂಡವರಿಗೆ ತಾತ್ಕಾಲಿಕ ವಸತಿ, ಗಂಜಿಕೇಂದ್ರ ಆರಂಭಿಸಬೇಕು. ಮನೆ ನಿರ್ಮಾಣಕ್ಕೆ ತಕ್ಷಣ 50 ಸಾವಿರ ರೂ ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಾರಟಗಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.