ಕೊಪ್ಪಳ: ಬೆಳೆ ಬಂದಾಗ ಬೆಲೆ ಇರೋದಿಲ್ಲ, ಬೆಲೆ ಇದ್ದಾಗ ಬೆಳೆ ಇರೋದಿಲ್ಲ. ಇದು ಈ ದೇಶದ ಅನ್ನದಾತನ ಬದುಕಲ್ಲಿ ಎದುರಾಗುವ ಸನ್ನಿವೇಶ. ಇಂತಹ ಸನ್ನಿವೇಶಕ್ಕೆ ಭತ್ತದ ಬೆಲೆ ಈ ವರ್ಷವೂ ಕೊಪ್ಪಳ ಜಿಲ್ಲೆಯಲ್ಲಿ ಭತ್ತ ಬೆಳೆದ ರೈತರು ಸಾಕ್ಷಿಯಾಗುತ್ತಿದ್ದಾರೆ.
ಭತ್ತದ ಬೆಲೆ ಕುಸಿತವಾಗಿರುವುದರಿಂದ ರೈತರನ್ನು ಚಿಂತೆಗೀಡು ಮಾಡಿದೆ. ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರವನ್ನು ಸರ್ಕಾರ ತೆರೆಯದೆ ನಿರ್ಲಕ್ಷ್ಯ ತೋರುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತುಂಗಭದ್ರಾ ಜಲಾಶಯದಿಂದ ಈ ಬಾರಿ ಬೇಸಿಗೆ ಬೆಳೆಗೂ ನೀರು ಪೂರೈಸಿದ್ದರಿಂದ ಅಚ್ಚುಕಟ್ಟು ಪ್ರದೇಶದ ಕೊಪ್ಪಳ ಜಿಲ್ಲೆಯ ರೈತರು ಸಹ ಭತ್ತವನ್ನು ಬೆಳೆದಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಅಧಿಕ ಪ್ರಮಾಣದಲ್ಲಿ ಭತ್ತವನ್ನು ನಾಟಿ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 44,060 ಹೆಕ್ಟರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದು ಪ್ರತಿ ಎಕರೆಗೆ ಸುಮಾರು 30 ರಿಂದ 35 ಚೀಲ ಭತ್ತದ ಇಳುವರಿ ಬರುತ್ತಿದೆ. ಅಂದಾಜು ಸುಮಾರು 25,5548 ಕ್ವಿಂಟಾಲ್ ಭತ್ತದ ಇಳುವರಿ ಬರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಕಳೆದ ಜನವರಿಯಲ್ಲಿ ನಾಟಿ ಮಾಡಿದ್ದ ಭತ್ತವು ಈಗ ಕಟಾವಿಗೆ ಬಂದಿದೆ. ಕೆಲ ಭಾಗದಲ್ಲಿ ಕಟಾವು ಸಹ ಮಾಡಲಾಗಿದೆ. ಆದರೆ ಮಾರುಕಟ್ಟೆಯಲ್ಲಿ ಈಗ ದರ ಪಾತಾಳಕ್ಕಿಳಿದಿದೆ. ಪ್ರತಿ ಕ್ವಿಂಟಾಲ್ ಭತ್ತಕ್ಕೆ ₹1,500 ರಿಂದ ₹1,800 ಇದೆ.
ಈ ದರಕ್ಕೆ ಭತ್ತವನ್ನು ಮಾರಾಟ ಮಾಡಿದರೆ ರೈತರು ಭತ್ತಕ್ಕಾಗಿ ಮಾಡಿದ ಖರ್ಚು ಸಹ ಬರುವುದಿಲ್ಲ. ಪ್ರತಿ ಎಕರೆಗೆ ಕನಿಷ್ಠ 30 ಸಾವಿರ ರೂಪಾಯಿ ಖರ್ಚು ಬರುತ್ತದೆ. ಮಾರುಕಟ್ಟೆಯಲ್ಲಿ ಭತ್ತದ ದರವು ಇಳಿಕೆಯಾಗಿದ್ದರಿಂದ ರೈತರು ಬೆಂಬಲ ಬೆಲೆಯಲ್ಲಿ ಭತ್ತವನ್ನು ಖರೀದಿಸುವ ಕೇಂದ್ರ ಆರಂಭಿಸಿ ಎಂದು ಒತ್ತಾಯಿಸಿದ್ದಾರೆ.
ಶರಣಗೌಡ ದೊಡ್ಡಮನಿ, ರೈತ ಮುಖಂಡ: ಭತ್ತ ಬೆಳೆಯೋಕೆ ಎಷ್ಟು ಖರ್ಚು ಬರುತ್ತೆ, ಹದ ಮಾಡೋದು ಆಗ್ಲಿ, ನಾಟಿ ಮಾಡೋದು ಆಗ್ಲಿ, ರಾಸಾನಿಕ ಗೊಬ್ಬರ ಆಗ್ಲಿ, ಕಟಾವ್ ಆಗ್ಲಿ, ಬೆಳೆ ಬರೋವರೆಗೆ ₹35 ಸಾವಿರ ಖರ್ಚು ಬರುತ್ತೆ. ಆದರೆ ಸರ್ಕಾರಕ್ಕೆ ಭತ್ತ ಖರೀದಿ ಕೇಂದ್ರ ಪ್ರಾರಂಭ ಮಾಡಿ ಅಂತ ಹೇಳಿ ನಾವು ಹಲವಾರು ಸಾರಿ ಹೋರಾಟ ಮಾಡಿದ್ದೇವೆ. ಆದರೆ ಸರ್ಕಾರ ಮತ್ತು ಜಿಲ್ಲಾ ಆಡಳಿತ ಉಸ್ತುವಾರಿ ಸಚಿವರು ಗಮನ ಹರಿಸುತ್ತ ಇಲ್ಲ.
ಕೊಪ್ಪಳ ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲು ಕೊಪ್ಪಳ ಜಿಲ್ಲಾಡಳಿತ ಏಪ್ರಿಲ್ 13 ಹಾಗೂ ಎಪ್ರಿಲ್ 30 ರಂದು ಸರ್ಕಾರದ ಆಹಾರ ಇಲಾಖೆಗೆ ಪತ್ರ ಬರೆದಿದೆ. ಆದರೆ ಸರ್ಕಾರ ಈವರೆಗೂ ಬೆಂಬಲ ಬೆಲೆಯ ಖರೀದಿ ಕೇಂದ್ರ ಆರಂಭಿಸಿಲ್ಲ.
ಇದನ್ನೂ ಓದಿ| ರಸಗೊಬ್ಬರ, ಬಿತ್ತನೆ ಬೀಜ ಕೃತಕ ಅಭಾವ ಸೃಷ್ಟಿಸಿದರೆ ಮುಲಾಜಿಲ್ಲದೇ ಕ್ರಮ ಎಂದ ಬಿ.ಸಿ.ಪಾಟೀಲ್
ಈ ಬಾರಿ ಪ್ರತಿ ಕ್ವಿಂಟಾಲ್‌ಗೆ ₹1,940 ಹಾಗು ₹1,960 ಬೆಂಬಲ ಬೆಲೆಯಲ್ಲಿ ಭತ್ತವನ್ನು ಖರೀದಿಸಲು ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದೆ.
ಎಸ್. ಶ್ಯಾಮ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಹಾಯಕ ನಿರ್ದೇಶಕ: ನಾವು ಮಾನ್ಯ ಮುಖ್ಯ ಮಂತ್ರಿ ಅವರಿಗೆ ಏಪ್ರಿಲ್ 30ರಂದು ಪ್ರಸ್ತಾವನೆ ಕಳಿಸಿದ್ದೇವೆ. ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಮಂತ್ರಿಗಳಿಗೂ ಮನವಿ ಮಾಡಿದ್ದೇವೆ. ಅದು ಆದಷ್ಟು ಬೇಗ ಬಂದಲ್ಲಿ, ಹಿಂದಿನ ವರ್ಷದಂತೆಯೇ 10 ಭತ್ತದ ಕೇಂದ್ರಗಳನ್ನು ತೆರೆಯುತ್ತೇವೆ.ಈ ವರ್ಷ ಮಾಡಿ ರೈತರಿಗೆ ಅನುಕೂಲ ಆಗುವ ರೀತಿ ಪ್ರಯತ್ನವನ್ನು ಮಾಡುತ್ತಿದ್ದೇವೆ.
ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಲು ಸರ್ಕಾರ ಅಧಿಸೂಚನೆ ಹೊರಡಿಸದ ಹಿನ್ನೆಲೆಯಲ್ಲಿ ರೈತರು ಬೆಳೆಗಾಗಿ ಮಾಡಿರುವ ಸಾಲ ಹೆಚ್ಚಾಗಿದೆ. ಬಂದಷ್ಟು ಹಣ ಬರಲಿ ಎಂದು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಭತ್ತ ಮಾರಾಟ ಮಾಡುತ್ತಿದ್ದಾರೆ. ಸರ್ಕಾರವೇನಾದರೂ ತಡವಾಗಿ ಭತ್ತದ ಖರೀದಿ ಕೇಂದ್ರ ಆರಂಭಿಸಿದರೆ ಅದು ರೈತರಿಗಿಂತ ಮಧ್ಯವರ್ತಿಗಳಿಗೆ ಅಧಿಕ ಲಾಭವಾಗಲಿದೆ.
ವರದಿ: ಮೌನೇಶ್ ಬಡಿಗೇರ್ ಕೊಪ್ಪಳ