Site icon Vistara News

Koratagere News: ಕೊರಟಗೆರೆಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕಾವೇರಿ 2.0 ತಂತ್ರಾಂಶ ಉದ್ಘಾಟನೆ

Cauvery 2.0 software launched at Koratagere

ಕೊರಟಗೆರೆ: ಸಾರ್ವಜನಿಕರು ತಮ್ಮ ಆಸ್ತಿಯ ನೋಂದಣಿಗಾಗಿ (Property registration) ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಹಾಗೂ ಶೀಘ್ರ ನೋಂದಣಿಯಾಗುವ ಸಲುವಾಗಿ ಸರ್ಕಾರ ಕಾವೇರಿ 2.0 (Cauvery 2.0) ನೂತನ ತಂತ್ರಾಂಶವನ್ನು ಇಲಾಖೆಯಲ್ಲಿ ಪರಿಚಯಿಸಲಾಗಿದೆ ಎಂದು ತುಮಕೂರು ಜಿಲ್ಲಾ ಉಪ ನೋಂದಣಾಧಿಕಾರಿ ಬಿ.ಎನ್. ಶಶಿಕಲಾ ತಿಳಿಸಿದರು.

ಕೊರಟಗೆರೆಯ ಉಪ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಯ ಆವರಣದಲ್ಲಿ ಕಾವೇರಿ 2.0 ತಂತ್ರಾಂಶವನ್ನು ನೋಂದಣಿಯಾದ ಗ್ರಾಹಕರಿಗೆ ಪತ್ರ ನೀಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ಕಾವೇರಿ ತಂತ್ರಾಂಶ 2.0 ಅಳವಡಿಕೆಯಿಂದ ಯಾವುದೇ ಆಸ್ತಿಯನ್ನು ಖರೀದಿಸುವುದಕ್ಕಿಂತ ಮೊದಲೇ ಆಸ್ತಿಯ ಮೇಲೆ ಇರುವ ಋಣಭಾರ ಹಾಗೂ ನೋಂದಣಿಯಾಗಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ. ಜತೆಗೆ ಈ ತಂತ್ರಾಂಶದಿಂದ ಆಸ್ತಿ ನೋಂದಣಿಯನ್ನು ತ್ವರಿತಗತಿಯಲ್ಲಿ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Simple One: ಒಂದು ಚಾರ್ಜ್​​ಗೆ 212 ಕಿ.ಮೀ ಓಡುವ ಸ್ಕೂಟರ್​ ಬಿಡುಗಡೆ; ಇದರ ಬೆಲೆ ಎಷ್ಟು ಗೊತ್ತೇ?

ಈ ತಂತ್ರಾಂಶದ ಮೂಲಕ ಸಾರ್ವಜನಿಕರು ತಮ್ಮ ಆಸ್ತಿಯ ವಿವರ ಮತ್ತು ಮೂಲ ದಾಖಲೆಗಳನ್ನು ಆನ್‌ಲೈನ್ ಮೂಲಕ ನೇರವಾಗಿ ಉಪ ನೋಂದಣಾಧಿಕಾರಿಗೆ ಕಳುಹಿಸಬಹುದು, ಅಧಿಕಾರಿಗಳು ಪರಿಶೀಲಿಸಿದ ನಂತರ ನೋಂದಣಿಗೆ ತಗಲುವ ವೆಚ್ಚವನ್ನು ಖಜಾನೆಗೆ ಆನ್‌ಲೈನ್ ಮೂಲಕ ಪಾವತಿಸಿ ನಮಗೆ ಬೇಕಾದ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿಕೊಳ್ಳಲು ಅವಕಾಶವಿದೆ. ನಿಗದಿಪಡಿಸಿಕೊಂಡ ದಿನದಂದು ಕೆಲವೇ ನಿಮಿಷದಲ್ಲಿ ಭಾವಚಿತ್ರ, ಸಹಿ ಹಾಗೂ ಹೆಬ್ಬೆಟ್ಟು ಗುರುತು ತೆಗೆದುಕೊಂಡು ನೋಂದಣಿ ಮಾಡಿಕೊಡಲಾಗುವುದು. ಈ ತಂತ್ರಾಂಶದಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

ಕೊರಟಗೆರೆ ತಾಲೂಕು ಹಿರಿಯ ಉಪನೊಂದಣಾಧಿಕಾರಿ ಗಿರೀಶ್ ಮಾತನಾಡಿ, ಕಾವೇರಿ 2.0 ತಂತ್ರಾಂಶವು ಜನಸ್ನೇಹಿಯಾಗಿ ಕೆಲಸ ಮಾಡುತ್ತದೆ, ಸಾರ್ವಜನಿಕರೇ ತಮ್ಮ ಆಸ್ತಿಯ ದಸ್ತುವೇಜುಗಳನ್ನು ನೇರವಾಗಿ ದಾಖಲಿಸುವುದರಿಂದ ಲೋಪಗಳು ಕಡಿಮೆಯಾಗುತ್ತದೆ, ಈ ತಂತ್ರಾಂಶ ಆಳವಡಿಸುವುದರೊಂದಿಗೆ ಕಛೇರಿಯಲ್ಲಿ ಮೂಲಭೂತ ಸೌಕರ್ಯಗಳು ಅಳವಡಿಸುವ ಕ್ರಮ ಕೈಗೊಳ್ಳಲಾಗಿದೆ, ಹೊಸ ತಂತ್ರಾಂಶದ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಇಲಾಖೆ ಮುಂದಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: UPSC Prelims 2023: ನಾಳೆ ಯುಪಿಎಸ್‌ಸಿ ಪ್ರಿಲಿಮ್ಸ್‌; ಈ ಬಾರಿಯೂ ಕನ್ನಡದಲ್ಲಿ ನಡೆಯೋಲ್ಲ ಪರೀಕ್ಷೆ

ಕಾರ್ಯಕ್ರಮದಲ್ಲಿ ಮಧುಗಿರಿ ಉಪ ನೋಂದಣಾಧಿಕಾರಿ ಸತೀಶ್, ಶಿರಾ ಉಪ ನೋಂದಣಾಧಿಕಾರಿ ಶಂಕರ್, ದ್ವಿತೀಯ ದರ್ಜೆ ಸಹಾಯಕ ಹೀತೇಶ್, ಎಂಜಿನಿಯರ್ ಸಂಪತ್, ಪ್ರದೀಪ್, ಅಸಿಸ್ಟಂಟ್ ಮ್ಯಾನೇಜರ್ ಲೋಕೇಶ್, ಕಂಪ್ಯೂಟರ್ ಆಪರೇಟರ್‌ಗಳಾದ ಎಚ್.ಡಿ.ಚಂದ್ರಶೇಖರ್, ಎಚ್.ಎನ್.ಮುದ್ದಕುಮಾರ್, ಟಿ.ಎನ್.ರೂಪ ಹಾಗೂ ಪತ್ರ ಬರಹಗಾರರಾದ ಸತೀಶ್, ಪಾರ್ಥಸಾರಥಿ, ಶಂಕರ್ ಸೇರಿದಂತೆ ಸಿಬ್ಬಂದಿ, ಇತರರು ಪಾಲ್ಗೊಂಡಿದ್ದರು.

Exit mobile version