ಬೆಳಗಾವಿ: ಆಗಸ್ಟ್ ೭ರಂದು ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆ ವೇಳೆ ಅಕ್ರಮ ಎಸಗಿದ ಆರೋಪದಲ್ಲಿ ಬೆಳಗಾವಿ ಪೊಲೀಸರು ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. ಒಟ್ಟು ೧೩ ಮಂದಿ ಅಕ್ರಮ ಮಾರ್ಗದ ಮೂಲಕ ಪರೀಕ್ಷೆ ಬರೆದಿರುವುದಾಗಿ ಹೇಳಲಾಗಿದ್ದು, ಇನ್ನೂ ನಾಲ್ವರಿಗಾಗಿ ಹುಡುಕಾಟ ನಡೆದಿದೆ.
ಗೋಕಾಕ್ ಜಿ.ಎಸ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಅಕ್ರಮ ನಡೆದಿದೆ ಎಂದು ಹೇಳಲಾಗಿದ್ದು, ಕೇಂದ್ರದಲ್ಲಿ ಎರಡು ತಂಡಗಳು ಸಕ್ರಿಯವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಉತ್ತರಕನ್ನಡ, ಬೆಳಗಾವಿ ಮತ್ತು ಗದಗ ಜಿಲ್ಲೆಗಳ ಪರೀಕ್ಷಾರ್ಥಿಗಳು ಈ ಅಕ್ರಮದಲ್ಲಿ ತೊಡಗಿದ ಬಗ್ಗೆ ಮಾಹಿತಿ ಇದೆ.
ಬಂಧಿತರು ಯಾರು?
ಬೆನಚಿನ ಮರಡಿಯ ಸಿದ್ದಪ್ಪ ಕೆಂಚಪ್ಪ ಕೊತ್ತಲ, ಗದಗ ಜಿಲ್ಲೆ ಬೆಟಗೇರಿಯ ಅಮರೇಶ ಚಂದ್ರಶೇಖರಮ್ಯ, ಹುಕ್ಕೇರಿ ತಾಲೂಕಿನ ಬಸವಣ್ಣಿ ಶಿವಪ್ಪ, ಗೋಕಾಕದ ಸಿದ್ದಪ್ಪ ಕೆಂಪಣ್ಣ ಮದಿಹಳ್ಳಿ, ಗದಗದ ಮಾರುತಿ ಶಂಕರ ಸೋನಾವಾಣೆ, ಮಾಲದಿನ್ನಿಯ ಸುನೀಲ ಅಜ್ಜಪ್ಪ ಭಂಗಿ, ಮಾಲದಿನ್ನಿಯ ರೇಣುಕಾ ವಿಠಲ ಜವಾರಿ, ಗದಗ ಬೆಟಗೇರಿಯ ಸಮೀಳ ಕುಮಾರ ಮಾರುತಿ ಸೋನಾವಾಣೆ, ಗೋಕಾಕದ ಸಂತೋಷ ಪ್ರಕಾಶ ಮಾನಗಾಂವಿ ಬಂಧಿತರು.
ಸಿದ್ದಪ್ಪ ಕೆಂಪಣ್ಣ ಮದಿಹಳ್ಳಿಸ ಸ್ಮಾರ್ಟ್ ವಾಚ್‌ನಲ್ಲಿ ಪ್ರಶ್ನೆಪತ್ರಿಕೆ ಫೋಟೊ ತೆಗೆದು ಟೆಲಿಗ್ರಾಂ ಆ್ಯಪ್ ಮೂಲಕ ಸುನಿಲ್ ಭಂಗಿ ಎಂಬ ಮತ್ತೊಬ್ಬ ಆರೋಪಿಗೆ ರವಾನೆ ಮಾಡಿದ್ದ ಎನ್ನಲಾಗಿದೆ.
ಬ್ಲೂ ಟೂತ್ ಡಿವೈಸ್ ಬಳಸಿ ಅಕ್ರಮ ನಡೆಸಿದ ಹುಕ್ಕೇರಿ ತಾಲೂಕಿನ ಬಿ ಕೆ ಶಿರಹಟ್ಟಿ ಗ್ರಾಮದ ತೋಟದ ಮನೆಯ ಮೇಲೆ ದಾಳಿ ಮಾಡಿ ಬಂಧಿಸಲಾಗಿದೆ. ಈತ ಮನೆಯಲ್ಲೇ ಕುಳಿತು ಬ್ಲೂ ಟೂತ್‌ನಲ್ಲಿ ಹಲವರಿಗೆ ಉತ್ತರ ಹೇಳಿದ್ದ ಎನ್ನಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಬೆಳಗಾವಿ ಎಸ್ಪಿ ಡಾ. ಸಂಜೀವ್ ಪಾಟೀಲ್ ನೇತೃತ್ವದ ತಂಡ ಎಲ್ಲ ಮಾಹಿತಿಗಳನ್ನು ಕಲೆ ಹಾಕಿದೆ. ಇದೀಗ ಸಮಗ್ರ ವರದಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ.