ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಸಣ್ಣ ಮಳೆ ಸುರಿದರೂ ನಾನಾ ಅವಾಂತರವೇ ಸೃಷ್ಟಿ ಆಗುತ್ತದೆ. ಕಳೆದ ಮೇ 21 ರಂದು ಸುರಿದ ಭಾರಿ ಮಳೆಗೆ ಕೆ.ಆರ್.ಸರ್ಕಲ್ ಅಂಡರ್‌ಪಾಸ್‌ನಡಿ (KR Circle Underpass) ಸಿಲುಕಿ ಕಾರಿನಲ್ಲಿ ತೆರಳುತ್ತಿದ್ದ ಆಂಧ್ರಪ್ರದೇಶ ಮೂಲದ ಟೆಕ್ಕಿ ಭಾನು ರೇಖಾ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅಂಡರ್‌ಪಾಸ್ ಪರಿಶೀಲನೆ ನಡೆಸಲು ಲೋಕಾಯುಕ್ತ ತಂಡ ಬುಧವಾರ (ಜೂ.7) ಭೇಟಿ ನೀಡಿದ್ದು, ನ್ಯೂನತೆಯನ್ನು ಕಂಡು ಹಿಡಿಯಲು ಟ್ಯಾಂಕರ್‌ನಲ್ಲಿ ನೀರು ಹರಿಸಿ ಪರೀಕ್ಷಿಸಿದರು.
ಭಾನು ರೇಖಾ ಸಾವು ಪ್ರಕರಣ ಸಂಬಂಧ ಉಪ ಲೋಕಾಯುಕ್ತರ ಸೂಚನೆ ಮೇರೆಗೆ ಲೋಕಾಯುಕ್ತ ಜ್ಯುಡಿಷಿಯಲ್ ವಿಂಗ್ (Lokayukta Judicial Wing) ಸುಮೊಟೊ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. 15 ದಿನಗಳಲ್ಲಿ ಸಂಪೂರ್ಣ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ (ಜೂ. 7) ಲೋಕಾಯುಕ್ತ ಐಜಿಪಿ ಸುಬ್ರಮಣ್ಯೇಶ್ವರ ರಾವ್ ನೇತೃತ್ವದ ತನಿಖಾ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಅಂಡರ್‌ಪಾಸ್ ನಿರ್ವಹಣೆ ಸಂಬಂಧಿಸಿದಂತೆ ಎಂಜಿನಿಯರ್‌ಗಳಿಂದ ಮಾಹಿತಿ ಪಡೆದರು.
ರಾತ್ರೋ ರಾತ್ರಿ ಡ್ರೈನೇಜ್ ಸಿಸ್ಟಮ್ ಕ್ಲೀನ್ ಆ್ಯಂಡ್ ಕ್ಲಿಯರ್
ದುರಂತ ನಡೆದ ದಿನ ಯಾಕೆ ನೀರು ಸರಾಗವಾಗಿ ಹರಿದು ಹೋಗಿಲ್ಲ. ಅಲ್ಲಿ ಯಾವ ನ್ಯೂನತೆಗಳಿದ್ದವು ಎಂಬುದನ್ನು ಅರಿಯಲು ಲೋಕಾಯುಕ್ತ ಟೀಂ ಪರಿಶೀಲನೆ ನಡೆಸಿತು. ಇತ್ತ ಲೋಕಾಯುಕ್ತ ತನಿಖಾ ತಂಡ ಭೇಟಿ ನೀಡುತ್ತಾರೆ ಎಂದು ಬಿಬಿಎಂಪಿ ಅಧಿಕಾರಿಗಳು ರಾತ್ರೋ ರಾತ್ರಿ ಅಂಡರ್‌ಪಾಸ್ ಡ್ರೈನೇಜ್ ಸಿಸ್ಟಮ್ ಕ್ಲೀನ್ ಮಾಡಿದ್ದರು. ಆದರೆ ಈ ಸಮಸ್ಯೆಯ ನಿಖರ ಕಾರಣ ತಿಳಿಯಲು ಲೋಕಾಯುಕ್ತ ಅಧಿಕಾರಿಗಳು ಮಾಸ್ಟರ್ ಪ್ಲ್ಯಾನ್ ಮಾಡಿದ್ದರು. ಎರಡು ಟ್ಯಾಂಕರ್‌ನಲ್ಲಿ ನೀರು ತರಿಸಿ ಹರಿಸಿ ಪರೀಕ್ಷೆ ಮಾಡಿದರು. ಈ ವೇಳೆ ಕೇವಲ ಎರಡು ಟ್ಯಾಂಕ್‌ನ ನೀರು ಸಹ ಡ್ರೈನೇಜ್‌ಗೆ ಸರಾಗವಾಗಿ ಹರಿದು ಹೋಗದೆ ಇರುವುದು ಕಂಡು ಬಂತು.
ಅಂಡರ್‌ಪಾಸ್ ನಿರ್ವಹಣೆಯಲ್ಲಿ ಯಾರ ಕರ್ತವ್ಯ ಲೋಪವಿದೆ ಎಂಬುದರ ಕುರಿತು ಸಹ ತನಿಖೆ ನಡೆಸಿದರು. ಈ ವೇಳೆ ಡ್ರೈನೇಜ್‌ಗೆ ನೀರು ಸರಾಗವಾಗಿ ಹರಿದು ಹೋಗುಲು ಅಂಡರ್‌ಪಾಸ್ ನಿರ್ವಹಣೆ ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂಬುದು ಬೆಳಕಿಗೆ ಬಂದಿದೆ.
ಸದ್ಯ ಸ್ಥಳ ಪರಿಶೀಲನೆ ಹಾಗೂ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ್ದು, ವಾರದೊಳಗೆ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ವರದಿ ಸಲ್ಲಿಸಲಿದ್ದಾರೆ.
ಏನಿದು ಘಟನೆ?
ಕಳೆದ ಮೇ 21ರಂದು ವಿಧಾನಸೌಧ ಸಮೀಪದ ಕೆ.ಆರ್. ಸರ್ಕಲ್ (KR Circle Underpass) ಬಳಿ ಇರುವ ಅಂಡರ್‌ಪಾಸ್‌ನಲ್ಲಿ ಮಳೆಗೆ ಕಾರೊಂದು ಸಿಕ್ಕಿ ಬಿದ್ದಿತ್ತು. ಅದರೊಳಗೆ ಸಿಲುಕಿ ಇನ್ಫೋಸಿಸ್ ಉದ್ಯೋಗಿ (Infosys employee) ಭಾನುರೇಖಾ (22) ಮೃತಪಟ್ಟಿದ್ದರು.
ಆಂಧ್ರ ಮೂಲದ ಭಾನುರೇಖಾ ಅವರ ಕುಟುಂಬಸ್ಥರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಒಂದೇ ಕುಟುಂಬದ ಒಟ್ಟು ಆರು ಮಂದಿ ಹಾಗೂ ಡ್ರೈವರ್ ಸೇರಿ ಏಳು ಜನರಿದ್ದರು. ಸಮಿತಾ (13), ಸೋಹಿತಾ (15), ಸಂಭ್ರಾಜ್ಯಂ (65), ಭಾನುರೇಖಾ (22) ಹರೀಶ್ ಸ್ವರೂಪ (47), ಸಂದೀಪ್ (35) ಕಾರಿನಲ್ಲಿದ್ದರು.
ಪ್ರವಾಸಕ್ಕೆಂದು ಆಂಧ್ರ ಪ್ರದೇಶದ ಆರು ಮಂದಿಯನ್ನೊಳಗೊಂಡ ಕುಟುಂಬದವರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ನಗರದ ಹಲವು ಕಡೆ ಕಾರಿನಲ್ಲಿ ಪ್ರಯಾಣಿಸಿ, ಭಾರಿ ಮಳೆ ಕಾರಣಕ್ಕೆ ಮನೆ ಸೇರುವ ಧಾವಂತದಲ್ಲಿದ್ದರು. ಇತ್ತ ಕೆ.ಆರ್. ಸರ್ಕಲ್ ಬಳಿಯ ಅಂಡರ್‌ಪಾಸ್‌ನಲ್ಲಿ 7 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿತ್ತು. ಇದರ ಅರಿವು ಇರದೆ ಕಬ್ಬನ್ ಪಾರ್ಕ್ ಕಡೆಯಿಂದ ಬರುತ್ತಿದ್ದ ಕಾರು ಅಲ್ಲಿಗೆ ಹೋಗಿದ್ದರಿಂದ ಮಳೆ ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿತ್ತು.
ಇದನ್ನೂ ಓದಿ: Weather Report: ಬಿಪರ್‌ಜಾಯ್ ಸೈಕ್ಲೋನ್ ಎಫೆಕ್ಟ್; ರಾಜ್ಯಾದ್ಯಂತ ಇನ್ನೂ 4 ದಿನ ಜಡಿ ಮಳೆ
ಕ್ಷಣ ಕ್ಷಣಕ್ಕೂ ಅಂಡರ್‌ಪಾಸ್ ಒಳಗೆ ನೀರು ಹೆಚ್ಚಾಗುತ್ತ ಹೋಯಿತು. ಎಂಜಿನ್‌ಗೆ ನೀರು ತುಂಬಿಕೊಂಡು ಬ್ಲಾಕ್ ಆಯಿತು. ನಂತರ ಕಾರು ರೀಸ್ಟಾರ್ಟ್ ಮಾಡಲು ಸಾಧ್ಯವಾಗಿರಲಿಲ್ಲ. ಅಷ್ಟರಲ್ಲೇ ನೀರು ಕಾರಿನ ಡೋರ್‌ನ ಮಟ್ಟಕ್ಕೆ ಬಂದಿದ್ದು, ನಂತರ ಡೋರ್ ಬ್ಲಾಕ್ ಆಗಿ ತೆಗೆಯಲು ಕಷ್ಟವಾಯಿತು. ಈ ವೇಳೆ ಡ್ರೈವರ್ ಡೋರ್ ತೆಗೆದು ಒಬ್ಬೊಬ್ಬರನ್ನೇ ಕೆಳಗೆ ಇಳಿಸಲು ಪ್ರಯತ್ನಿಸಿದ್ದ. ಅಷ್ಟರಲ್ಲಾಗಲೇ ಒಳಗಡೆ ಇದ್ದ ಭಾನುರೇಖಾ ಸಾಕಷ್ಟು ನೀರು ಕುಡಿದು, ಪ್ರಜ್ಞೆ ಕಳೆದುಕೊಂಡಿದ್ದರು. ನಂತರ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಒಬ್ಬೊಬ್ಬರನ್ನೇ ರಕ್ಷಣೆ ಮಾಡಿದ್ದರು. ಆದರೆ ಭಾನುರೇಖಾ ಅವರನ್ನು ಪರೀಕ್ಷಿಸಿದ ಆಸ್ಪತ್ರೆ ವೈದ್ಯರು, ಅವರು ಮೃತಪಟ್ಟಿದ್ದನ್ನು ಖಚಿತಪಡಿಸಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ