Site icon Vistara News

KR Market Flyover: ಕೆ.ಆರ್‌. ಮಾರುಕಟ್ಟೆಯಲ್ಲಿ ಸೂಟ್‌ ಧರಿಸಿ ಹಣ ಎಸೆದವನು ಖಾಕಿ ಕಂಡೊಡನೆ ಪರಾರಿ!

KR Market Flyover

ಬೆಂಗಳೂರು: ಕೆ.ಆರ್‌. ಮಾರುಕಟ್ಟೆ ಫ್ಲೈಓವರ್‌ (KR Market Flyover) ಮೇಲಿಂದ ದುಡ್ಡಿನ ಸುರಿಮಳೆಗೈದು ಎಲ್ಲರ ಗಮನ ಸೆಳೆದಾತ ಅರುಣ್‌ ಎಂಬ ವಿಷಯ ತಿಳಿದು ಬಂದಿದೆ. ಮಂಗಳವಾರ 11.30ರ ಸುಮಾರಿಗೆ ಸೂಟು ಬೂಟು ಧರಿಸಿ ಜತೆಗೆ ಕತ್ತಿಗೆ ಗಡಿಯಾರವೊಂದನ್ನು ನೇತು ಹಾಕಿಕೊಂಡು ಬ್ಯಾಗ್‌ನಲ್ಲಿ ದುಡ್ಡಿನ ಕಂತೆ ಹಿಡಿದು ಬಂದಿದ್ದ ಈತ ನೇರವಾಗಿ ಕೆಳಗಡೆ ಜನರತ್ತ ದುಡ್ಡನ್ನು ಚೆಲ್ಲಿದ್ದಾನೆ. ೧೦, ೨೦ ರೂಪಾಯಿಯ ಕಂತೆ ಕಂತೆ ಹಣವನ್ನು ಕೆಳಗೆ ಬಿಸಾಡಿರುವುದು ಸಖತ್‌ ಸುದ್ದಿಯಾಗಿದ್ದು, ಪ್ರಚಾರ ಗಿಮಿಕ್‌ ಎಂದೂ ಹೇಳಲಾಗುತ್ತಿದೆ.

ಕತ್ತಿಗೆ ಗಡಿಯಾರ ಹಾಕಿಕೊಂಡು ಸೂಟು ಧರಿಸಿ ಬಂದ ಅರುಣ್‌ ಕೆ.ಆರ್‌ ಮಾರುಕಟ್ಟೆ ಫ್ಲೈಓವರ್‌ ಮೇಲೆ ನಿಂತು ತನ್ನ ಕೈಚೀಲದಲ್ಲಿದ್ದ 10,20,50 ರೂಪಾಯಿಯ ಕಂತೆ ಕಂತೆ ನೋಟುಗಳನ್ನು ತೆಗೆದು ಏಕಾಏಕಿ ಕೆಳಗೆ ಎಸೆದಿದ್ದಾನೆ. ಇತ್ತ ಜನ ಮರಳೊ ಜಾತ್ರೆ ಮರಳೋ ಎಂಬಂತೆ ಚೆಲ್ಲಾಪಿಲ್ಲಿಯಾಗಿ ಬೀಳುತ್ತಿದ್ದ ಹಣವನ್ನು ಫ್ಲೈಓವರ್‌ ಕೆಳಗೆ ನಿಂತಿದ್ದ ಜನ ತಾ ಮುಂದು ನಾ ಮುಂದು ಎಂಬಂತೆ ಹಣವನ್ನು ಬಾಚಿಕೊಂಡರು.

ಇನ್ನು ಫ್ಲೈಓವರ್‌ ಮೇಲೂ ಈತನ ಕೃತ್ಯವನ್ನು ನೋಡಿದ ವಾಹನ ಸವಾರರು ತಕ್ಷಣವೇ ಬೈಕ್‌ ನಿಲ್ಲಿಸಿ ಅರುಣ್‌ ಬಳಿ ಓಡಿಬಂದಿದ್ದಾರೆ. ಬಳಿಕ ಕೈಯಲ್ಲಿ ಮೊಬೈಲ್‌ ಹಿಡಿದು ವಿಡಿಯೊ ಮಾಡಿದ್ದಾರೆ. ಕೆಲವರು ಯಾಕ್‌ ಸರ್‌ ಹಣ ಎಸೆಯುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲೇ ಸಮೀಪ ಇದ್ದವರು ಕೆಳಗೆ ಬೀಳುತ್ತಿದ್ದ ನೋಟುಗಳನ್ನು ಹೆಕ್ಕಿಕೊಳ್ಳುತ್ತಿದ್ದಾರೆ. ಗಾಳಿಯಲ್ಲಿ ಹಾರಿ ಬಂದ ನೋಟುಗಳನ್ನು ತೆಗೆದುಕೊಳ್ಳು ಮುಂದಾಗಿದ್ದಾರೆ. ಮತ್ತೊಬ್ಬನಂತೂ ಸರ್‌ ಈ ಕಡೆಗೂ ನೋಟು ಎಸೆಯಿರಿ, ನನಗೆ ಕೊಡಿ, ಬೇಕಿದ್ದರೆ ನಾನೇ ಎಸೆಯುತ್ತೇನೆ ಎಂದೂ ಒಬ್ಬ ಅರುಣ್‌ ಹಿಂದೆಯೇ ಬಿಟ್ಟು ಬಿಡದಂತೆ ಕೇಳಿರುವುದು ವಿಡಿಯೊದಲ್ಲಿ ಗೊತ್ತಾಗಿದೆ. ಒಟ್ಟಿನಲ್ಲಿ ಅಲ್ಲಿದ್ದವರಲ್ಲಿ ಕೆಲವರು ಈತನ ಹುಚ್ಚಾಟವನ್ನು ನೋಡುತ್ತಾ ನಿಂತಿದ್ದರೆ, ಮತ್ತೆ ಕೆಲವರು ಕಂತೆ ನೋಟಿಗೆ ಮುಗಿಬಿದ್ದಿದ್ದರು.

ನ್ಯೂಸೆನ್ಸ್‌ ಕ್ರಿಯೆಟ್‌ ಮಾಡಿ ಪರಾರಿ

ಅರುಣ್‌ ಫ್ಲೈ ಓವರ್‌ನ ಎರಡು ಬದಿಯಲ್ಲಿ ನೋಟುಗಳು ಎಸೆಯುತ್ತಿದ್ದರೆ, ಕೆಲಸ ಕಾರ್ಯಗಳಲ್ಲಿ ತೊಡಗಿದ್ದವರು, ಬಸ್ಸಿಗಾಗಿ ಕಾದು ನಿಂತಿದ್ದವರು ಮಾತ್ರವಲ್ಲ, ತಮ್ಮ ಗಾಡಿಯಲ್ಲಿ ಹೋಗುತ್ತಿದ್ದ ಎಲ್ಲರೂ ಆ ದುಡ್ಡನ್ನು ಎತ್ತಿಕೊಳ್ಳಲು ಮುಗಿಬಿದ್ದಿದ್ದರು. ನಾನೇ ಮೊದಲು ಸಾಧ್ಯವಾದಷ್ಟು ದುಡ್ಡನ್ನು ಬಾಚಿಕೊಳ್ಳಬೇಕು ಎಂದು ನೆಲಕ್ಕೆ ಬೀಳುವುದರೊಳಗೇ ಹಿಡಿದುಕೊಳ್ಳಲು ಯತ್ನಿಸಿದರು. ಕೆಲವರು ಮೇಲಕ್ಕೆ ಎಗರಿ ಎಗರಿ ಹಿಡಿದುಕೊಳ್ಳುತ್ತಿದ್ದರು.

ಇದನ್ನೂ ಓದಿ: KR Market Flyover : ಕೆ.ಆರ್‌. ಮಾರ್ಕೆಟ್‌ ಬಳಿ ದುಡ್ಡಿನ ಮಳೆಗರೆದ ಅರುಣ್‌ ಯಾರು?; ಇಲ್ಲಿದೆ ಅವನ ಫುಲ್‌ ಡಿಟೇಲ್ಸ್!

ಕೆ.ಆರ್‌ ಮಾರುಕಟ್ಟೆ ಬಳಿ ಈ ರೀತಿ ನ್ಯೂಸೆನ್ಸ್‌ ಆಗುತ್ತಿದ್ದಂತೆ ಸ್ಥಳಕ್ಕೆ ಟ್ರಾಫಿಕ್‌ ಪೊಲೀಸರು ಆಗಮಿಸಿ ಸೇರಿದ್ದ ಸಾರ್ವಜನಿಕರನ್ನು ಚದುರಿಸುವ ಕೆಲಸವನ್ನು ಮಾಡಿದರು. ಇತ್ತ ಫ್ಲೈಓವರ್‌ ಮೇಲೆ ಪೊಲೀಸರು ಬರುತ್ತಿದ್ದಂತೆ ಸ್ಕೂಟರ್ ಏರಿ ಅರುಣ್‌ ಪರಾರಿ ಆದ ಎಂದು ತಿಳಿದು ಬಂದಿದೆ. ಪರಾರಿಯಾದವನಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Exit mobile version