ಭಾಸ್ಕರ್ ಆರ್. ಗೆಂಡ್ಲ. ವಿಸ್ತಾರ ನ್ಯೂಸ್
ಶಿರಸಿ: ಗ್ರಾಮದಲ್ಲಿ ಕೃಷಿ (Agriculture) ನಿರ್ವಹಣೆ ಜತೆ ನಗರದ ಮಧ್ಯ ಭಾಗದಲ್ಲಿ ತೋಟಗಾರಿಕಾ ನರ್ಸರಿ (horticultural Nursery) ಕೃಷಿ ಮಾಡಿ ಕೈತುಂಬಾ ಆದಾಯ ಪಡೆಯುವ ಕುಟುಂಬವೊಂದು ದಶಕಗಳಿಂದ ಸದ್ದಿಲ್ಲದೆ ಕಾರ್ಯ ನಿರ್ವಹಿಸುತ್ತಿದೆ.
ನಗರದ ಟಿ.ಎಸ್.ಎಸ್. ರಸ್ತೆಯ ಕೃಷಿ ಭಾರತಿ ಹೆಸರಿನ ನರ್ಸರಿ ತನ್ನಲ್ಲಿನ ಗುಣಮಟ್ಟದ ಸಸ್ಯ ಮತ್ತು ಬೀಜಗಳಿಗೆ ಹೆಸರಾಗಿದೆ. ನರಸಿಂಹ ಹೆಗಡೆ ಅವರು ಇದರ ರೂವಾರಿಯಾಗಿದ್ದಾರೆ. ನಗರದಲ್ಲಿ ಪರಿಸರ ಚಟುವಟಿಕೆ ಉದ್ದೇಶದೊಂದಿಗೆ 1984ರಲ್ಲಿ ಸ್ಥಾಪನೆಗೊಂಡ ಈ ನರ್ಸರಿ ಇಂದಿಗೂ ತನ್ನ ಛಾಪು ಕಳೆದುಕೊಂಡಿಲ್ಲ. ವಾರ್ಷಿಕ 5 ಸಾವಿರಕ್ಕೂ ಹೆಚ್ಚು ಗ್ರಾಹಕರು ಇಲ್ಲಿ ಸಸ್ಯ ಹಾಗೂ ಬೀಜ ಖರೀದಿಸುವುದು ಇದಕ್ಕೆ ಪುಷ್ಠಿ ನೀಡಿದೆ.
ಇದನ್ನೂ ಓದಿ: Annabhagya Scheme : ಶೀಘ್ರ ಹೊಸ ಪಡಿತರ ಕಾರ್ಡ್; ಎಲ್ಲೋ ಬೋರ್ಡ್ ಕಾರಿದ್ದವರಿಗೆ BPL: ಕೆ.ಎಚ್. ಮುನಿಯಪ್ಪ
ನರಸಿಂಹ ಹೆಗಡೆ ಮೂಲತಃ ಶಿರಸಿ ತಾಲೂಕಿನ ಮಶಿಗದ್ದೆಯ ಕೃಷಿ ಕುಟುಂಬದಲ್ಲಿ ಬೆಳೆದವರು. ನಂತರ ತೋಟಗಾರಿಕಾ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ವೇಳೆ ತೋಟಗಾರಿಕೆಯಲ್ಲಿ ಆಸಕ್ತಿ ತಳೆದ ಅವರು ಸ್ವತಃ ನಗರದಲ್ಲಿ ಬಾಡಿಗೆ ಜಾಗ ಪಡೆದು ನರ್ಸರಿ ಆರಂಭಿಸಿದ್ದರು. ಈಗ ವಾರ್ಷಿಕ 3 ಲಕ್ಷಕ್ಕೂ ರೂ. ಹೆಚ್ಚಿನ ಆದಾಯ ನರ್ಸರಿಯಿಂದ ಪಡೆಯುವ ಇವರು ಇತರೆ ನರ್ಸರಿ ಕೃಷಿಕರಿಗೆ ಮಾದರಿಯಾಗಿದ್ದಾರೆ.
75 ತಳಿಯ ತೋಟಗಾರಿಕಾ ಸಸ್ಯಗಳು ಲಭ್ಯ
5 ಗುಂಟೆ ಜಾಗದಲ್ಲಿ 20 ಜಾತಿಯ ಮಾವು, 3 ಬಗೆಯ ಚಿಕ್ಕು, ಜಾಯಿಕಾಯಿ, ಅಮಟೆ, ಪೇರಲ, ಲಿಚಿ, ಹಲಸು, ಬಕ್ಕೆ, ಲವಂಗ, ಬೇರು ಹಲಸು, ತೆಂಗು, ಅಡಿಕೆ, ಗೇರು, ಅಂಜೂರ, ಕಿತ್ತಳೆ, ಕಾಳುಮೆಣಸು, ವಿವಿಧ ಅಲಂಕಾರಿಕ ಗಿಡಗಳು, ಹೂವಿನ ಹಿಡಗಳು ಸೇರಿದಂತೆ ಸುಮಾರು 75 ತಳಿಯ ತೋಟಗಾರಿಕಾ ಸಸ್ಯಗಳು ಲಭ್ಯವಿವೆ.
ಕೆಲವು ತಳಿಗಳನ್ನು ಸ್ವತಃ ಬೆಳೆಸಿದರೆ ಇನ್ನುಳಿದವನ್ನು ಹೊರ ಜಿಲ್ಲೆ, ರಾಜ್ಯಗಳಿಂದ ಖರೀದಿಸಿ ತಮ್ಮ ನರ್ಸರಿಯಲ್ಲಿ ಪೋಷಿಸಿ ನಂತರ ಗ್ರಾಹಕರಿಗೆ ನೀಡುತ್ತಾರೆ. 15 ರೂ. ರಿಂದ 300 ರೂ. ರವರೆಗಿನ ಸಸ್ಯಗಳು ಇಲ್ಲಿವೆ. ಇದರ ಜತೆ ಪೂರಕವಾಗಿ 50ಕ್ಕೂ ಹೆಚ್ಚು ವೈವಿಧ್ಯಮಯ ತರಕಾರಿ ಬೀಜಗಳನ್ನು ಮಾರಾಟ ಮಾಡುತ್ತಾರೆ. ಗುಣಮಟ್ಟದ ಬೀಜ, ಗಿಡಗಳ ಪೂರೈಕೆ ಇವರ ನರ್ಸರಿಯ ವಿಶೇಷತೆಯಾಗಿದೆ.
ಇದನ್ನೂ ಓದಿ: Tomato Price : Good News; ಟೊಮ್ಯಾಟೊ ಧಾರಣೆ ದಿಢೀರ್ ಅರ್ಧಕ್ಕರ್ಧ ಕುಸಿತ; ಅಬ್ಬರ ಮುಗೀತಾ?
ಗಿಡಗಳು ಇದ್ದರೆ ಮನೆಯಲ್ಲಿ ಬ್ಯಾಂಕ್ ಇದ್ದಂತೆ. ಮಾನಸಿಕ ನೆಮ್ಮದಿಯ ಜತೆ ಆದಾಯ, ಆರೋಗ್ಯ ಸಂಪತ್ತು ನಮ್ಮದಾಗುತ್ತದೆ ಎನ್ನುತ್ತಾರೆ ಅವರು. ಆರಂಭದಲ್ಲಿ ಬಾಡಿಗೆ ಜಾಗದಲ್ಲಿದ್ದೆ. ನರ್ಸರಿ ಹಣದಲ್ಲೇ ಜಾಗ ಖರೀದಿಸಿ ಮನೆ ಕಟ್ಟಿದ್ದೇವೆ. ಗುಣಮಟ್ಟಕ್ಕೆ ಆದ್ಯತೆ ನೀಡುವ ಸಾವಿರಾರು ಗ್ರಾಹಕರು ಇಂದಿಗೂ ಕೃಷಿ ಭಾರತಿಯಿಂದಲೇ ಖರೀದಿ ಮಾಡುತ್ತಾರೆ ಎನ್ನುತ್ತಾರೆ ನರಸಿಂಹ ಹೆಗಡೆ.
ನರ್ಸರಿ ಕಾರ್ಯಕ್ಕೆ ಸಹಕಾರ ಅಗತ್ಯ
ಗಿಡಗಳನ್ನು ಮಕ್ಕಳನ್ನು ನೋಡಿಕೊಂಡಂತೆ ನೋಡಿಕೊಳ್ಳಬೇಕು. ನೀರು, ಗೊಬ್ಬರ ಹಾಕಬೇಕು. ಔಷಧ ಸಿಂಪಡಣೆಯೂ ಆಗಬೇಕು. ಅದಕ್ಕೆ ಜೊತೆಯಾಗಿ ಕಾರ್ಯ ನಿರ್ವಹಿಸುತ್ತೇವೆ ಎನ್ನುತ್ತಾರೆ ಹೆಗಡೆ ಅವರ ಪತ್ನಿ ಭಾರತಿ ಹೆಗಡೆ. ನರಸಿಂಹ ಹೆಗಡೆ ಅವರ ನರ್ಸರಿ ಚಟುವಟಿಕೆ ಕುರಿತ ಹೆಚ್ಚಿನ ಮಾಹಿತಿಗೆ ( 9480936194) ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ: Viral Video: ಧೈರ್ಯ ಇದ್ರೆ ಮಾತ್ರ ಈ ವಿಡಿಯೋ ನೋಡಿ! ಎನ್‌ಸಿಸಿ ಕೆಡೆಟ್‌ನ ಅಮಾನವೀಯ ಕೃತ್ಯ
ಗ್ರಾಹಕರಿಗೆ ಗುಣಮಟ್ಟದ ಸಸ್ಯಗಳನ್ನು ವಿತರಿಸಿ ಕೃಷಿ ಭಾರತಿ ನರ್ಸರಿ ಹೆಸರಾಗಿದೆ. ಗುಣಮಟ್ಟದಲ್ಲಿ ರಾಜಿಯಿಲ್ಲದ ಇಂಥ ನರ್ಸರಿಗಳು ದೀರ್ಘಾವಧಿಯಲ್ಲಿ ತೋಟಗಾರಿಕಾ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿವೆ.
ಸತೀಶ ಹೆಗಡೆ- ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ.