ಹಾಸನ: ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಅವರ ಮೇಲೆ ತೀವ್ರವಾಗಿ ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯ ಅವರನ್ನು ʻಅವನು ಯಾವೂರ ದಾಸಾರಿʼ ಎಂದು ಏಕವಚನದಲ್ಲಿ ದಾಳಿ ಮಾಡಿದರೆ, ರಾಮಲಿಂಗಾ ರೆಡ್ಡಿ ಬಿಜೆಪಿ ಸೇರಲು ಏರ್‌ಪೋರ್ಟ್‌ವರೆಗೂ ಬಂದಿದ್ದ ಮನುಷ್ಯ ಎಂದಿದ್ದಾರೆ. ಹಾಸನದಲ್ಲಿ ಅವರು ಮಾತನಾಡಿದರು.
ಮೋದಿ ಬಗ್ಗೆ ಏಕವಚನ ಬಳಸಿದ್ರೆ ಹುಳ ಬೀಳುತ್ತೆ
ʻʻತಾಕತ್ತಿದ್ದರೆ ಬಿ.ಎಸ್. ಯಡಿಯೂರಪ್ಪ ಹಾಗು ಸಿಎಂ ಬೊಮ್ಮಾಯಿ ನಮ್ಮ ಹಾಗೆ ಪಾದಯಾತ್ರೆ ಮಾಡಲಿ, ನನ್ನ ಹೆಸರು ಹೇಳದೆ ಐದು ನಿಮಿಷ ಮಾತನಾಡಲಿʼʼ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಾಕಿದ ಸವಾಲಿಗೆ ಈಶ್ವರಪ್ಪ ಪ್ರತಿಕ್ರಿಯೆ ನೀಡುವ ಮೂಲಕ ವಾಗ್ದಾಳಿ ಶುರು ಮಾಡಿದರು.
ʻʻನಾನೀಗ ಅವರ ಹೆಸರು ಹೇಳದೆ ಇಷ್ಟೊತ್ತು ಮಾತನಾಡಿಲ್ವಾ? ಅವನು ತಾನು ದೊಡ್ಡ ಮನುಷ್ಯ ಅಂದುಕೊಂಡು ಬಿಟ್ಟಿದ್ದಾನೆ. ಅವನು ಯಾವೂರ ದಾಸಾರಿ? ಅವರ ಬಗ್ಗೆ ಮಾತನಾಡದೆ ಇದ್ದ ರೆ ಏನು ಪ್ರಳಯ ಆಗುತ್ತಾ? ಏನು ಕಡಿದು ಕಟ್ಟೆ ಹಾಕಿದ್ದೀರಿ ಎಂದು ನಿಮ್ಮ ಬಗ್ಗೆ ಮಾತನಾಡಬೇಕು? ನಿಮ್ಮ ಬಗ್ಗೆ ಮಾತಾಡೋಕೆ ನಮಗೇ ಸಂಕೋಚ ಆಗುತ್ತೆʼʼ ಎಂದು ಹೇಳಿದರು.
ʻʻನರೇಂದ್ರ ಮೋದಿಯಂಥ ವಿಶ್ವ ನಾಯಕನ ಬಗ್ಗೆ ಮಾತಾಡ್ತಾರೆ. ಮೋದಿ ಬಗ್ಗೆ ಏಕ ವಚನದಲ್ಲಿ ಮಾತನಾಡಿದ್ರೆ ಬಾಯಿಗೆ ಹುಳ ಬೀಳುತ್ತೆʼʼ ಎಂದರು ಈಶ್ವರಪ್ಪ ಕೆಂಡ ಕಾರಿದರು.
ಬಿಜೆಪಿ ಸೇರಲು ಬಂದಿದ್ದಾಗ ಗೊತ್ತಿರಲಿಲ್ವಾ?
ʻʻಬಿಜೆಪಿ ಹಾಗೂ ಆರ್‌ಎಸ್‌ಎಸ್ ನವರು ಬ್ರೀಟಿಷರ ಜೊತೆ ಶಾಮೀಲಾಗಿದ್ದರು., ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿರಲಿಲ್ಲʼʼ ಎಂಬ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಮಲಿಂಗಾ ರೆಡ್ಡಿ ಬಿಜೆಪಿ ಸೇರಬೇಕೆಂದು ಏರ್‌ಪೋರ್ಟ್‌ವರೆಗೂ ಬಂದಿದ್ದರು. ಅವರಿಗೆ ದೇವರ ಮೇಲೆ ನಂಬಿಕೆ ಇದ್ರೆ, ನಾನು ಬಿಜೆಪಿ ಸೇರಲೆಂದು ಏರ್‌ಪೋರ್ಟ್‌ಗೆ ಬಂದಿರಲಿಲ್ಲ ಎಂದು ಹೇಳಲಿ ನೋಡೋಣʼʼ ಎಂದು ಸವಾಲು ಹಾಕಿದರು.
ʻʻಬಿಜೆಪಿ ಸೇರಲು ಬರುವಾಗ ಅವರಿಗೆ ಅವಾಗ ಗೊತ್ತಿರಲಿಲ್ವಾ? ಹದಿನೇಳು ಜನ ಬಂದು ಬಿಜೆಪಿ ಸೇರ್ತಾರೆ ಅಂತ ನಮಗೂ ಗೊತ್ತಿರಲಿಲ್ಲ. ಆ ಹದಿನೇಳು ಜನರ ಜೊತೆ ರಾಮಲಿಂಗರೆಡ್ಡಿನೂ ಇದ್ರು. ಆರ್‌ಎಸ್‌ಎಸ್, ಬಿಜೆಪಿ ಏನು ಅಂತ ಅವರಿಗೆ ಆಗಲೂ ಗೊತ್ತು ಈಗಲೂ ಗೊತ್ತು. ಅವರ ಮನಸ್ಸಿನಲ್ಲಿ ಇವು ರಾಷ್ಟ್ರಭಕ್ತಿ ಸಂಘಟನೆಗಳು ಅಂತ ಗೊತ್ತು. ಆದರೆ, ಮಾತನಾಡುವಾಗ ಬಾಯಿಗೆ ಬಂದಂತೆ ಮಾತನಾಡುತ್ತಾರೆʼʼ ಎಂದರು ಈಶ್ವರಪ್ಪ.
ಸಚಿವ ಸ್ಥಾನದ ಆಕಾಂಕ್ಷಿ ಹೌದು, ಕೊಟ್ಟರೆ ಸ್ವೀಕರಿಸುವೆ
ʻʻಶೀಘ್ರದಲ್ಲಿಯೇ ಸಚಿವ ಸಂಪುಟ ವಿಸ್ತರಣೆ ಆಗಲಿದೆʼʼ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಬಗ್ಗೆ ಉತ್ತರಿಸಿ, ಯಾರನ್ನು ಮತ್ತೆ ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ತೀರ್ಮಾನ ಮಾಡ್ತಾರೆ, ಅದಕ್ಕೆ ನಾವೆಲ್ಲರೂ ಬದ್ಧ. ನಾನು ಸಚಿವ ಸ್ಥಾನದ ಆಕಾಂಕ್ಷಿ ಹೌದು. ಆದರೆ, ತೀರ್ಮಾನ ಮಾಡೋದು ಕೇಂದ್ರದ ನಾಯಕರು ಮತ್ತು ಮುಖ್ಯಮಂತ್ರಿಗಳು. ಸಚಿವ ಸ್ಥಾನ ಕೊಟ್ಟರೆ ತೆಗೆದುಕೊಳ್ಳುತ್ತೇನೆʼʼ ಎಂದು ಈಶ್ವರಪ್ಪ ಹೇಳಿದರು.
ʻʻಷಡ್ಯಂತ್ರ ಮಾಡಿ ನನ್ನ ಮೇಲೆ ಕೇಸ್ ಹಾಕಿಸಿದ್ದಾರೆ ಅಂತ ಇಡೀರಾಜ್ಯದ ಬಿಜೆಪಿ ಕಾರ್ಯಕರ್ತರಿಗೆ ಗೊತ್ತು. ಆ ಕೇಸ್‌ನಿಂದ ಮುಕ್ತರಾಗಿ ಬರಲಿ ಎಂದು ಎಲ್ಲರ ಅಪೇಕ್ಷೆಯಾಗಿತ್ತು. ಈಗ ಕ್ಲೀನ್ ಚಿಟ್ ಸಿಕ್ತು, ಪ್ರಕರಣ ಮುಗೀತು. ಈ ತೀರ್ಮಾನ ಕೇಂದ್ರ ನಾಯಕರದ್ದು. ಬಹಳ ಚರ್ಚೆ ಮಾಡೋ ವಿಷಯ ಇದಲ್ಲʼʼ ಎಂದರು.
ಇದನ್ನೂ ಓದಿ | Bharat Jodo | ಬಳ್ಳಾರಿ ಸಭೆಗೆ ಬೆವರು ಹರಿಸಿದ್ದು ಡಿಕೆಶಿ, ಚಪ್ಪಾಳೆ-ಶಿಳ್ಳೆ ಗಿಟ್ಟಿಸಿದ್ದು ಸಿದ್ದರಾಮಯ್ಯ !