ಬೆಂಗಳೂರು: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾರನ್ನು ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ರಾಜಸ್ಥಾನ ಉದಯಪುರದ ಯುವಕನನ್ನು ಶಿರಚ್ಛೇದ ಮಾಡಿ ಹತ್ಯೆಗೈದಿದ್ದನ್ನು ಕರ್ನಾಟಕ ಬಿಜೆಪಿ ನಾಯಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಟುವಾಗಿ ಖಂಡಿಸಿದ್ದಾರೆ. ಮೊದಲಿನಿಂದಲೂ ತಮ್ಮ ಅತಿ ಎನ್ನಿಸುವ ನೇರವಾದ ಮಾತುಗಳಿಂದಲೇ (ಕು)ಖ್ಯಾತಿಯಾಗಿರುವ ಈಶ್ವರಪ್ಪ “ಪ್ರಜಾಪ್ರಭುತ್ವ ಮಾದರಿ ಆಡಳಿತವಿರುವ ಈ ದೇಶದಲ್ಲಿ ಇಂಥ ಹತ್ಯೆಗಳಿಗೆ ಪ್ರತ್ಯುತ್ತರ ಹತ್ಯೆಯೇ ಆಗಿರಬೇಕು. ಆ ಮೂಲಕವೇ ಆರೋಪಿಗಳಿಗೆ ಪಾಠ ಕಲಿಸಬೇಕು ಅಥವಾ ಅದಕ್ಕೆ ಸಮಾನವಾದ ಸೂಕ್ತ ಶಿಕ್ಷೆ ನೀಡಬೇಕು” ಎಂದು ಹೇಳಿದ್ದಾರೆ.
ಟೇಲರ್ ಆಗಿದ್ದ ಯುವಕ ಕನ್ನಯ್ಯ ಲಾಲ್‌ನನ್ನು ಹತ್ಯೆ ಮಾಡಿದ ಆರೋಪಿಗಳು ಅದೇ ಚಾಕು ಹಿಡಿದು ಪ್ರಧಾನಿ ನರೇಂದ್ರ ಮೋದಿಯವರಿಗೂ ಬೆದರಿಕೆ ಹಾಕಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಕೆ.ಎಸ್.ಈಶ್ವರಪ್ಪ “ಪ್ರಧಾನಿ ನರೇಂದ್ರ ಮೋದಿಯನ್ನು ಹತ್ಯೆ ಮಾಡುವುದಾಗಿ ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದನ್ನು ನಿಜವಾದ ರಾಷ್ಟ್ರೀಯವಾದಿಗಳು ಯಾರೂ ಸಹಿಸುವುದಿಲ್ಲ. ಇವರೆಲ್ಲ ಇನ್ನು ಮುಂದೆ ಈ ದೇಶದಲ್ಲಿ ಆರಾಮಾಗಿ ಬದುಕಲು ಸಾಧ್ಯವೂ ಇಲ್ಲ. ಯಾಕೆಂದರೆ, ದೇಶದಲ್ಲಿ ಶಾಂತಿ ಕಾಪಾಡಬೇಕು ಎಂದು ಪ್ರಧಾನಿ ಮೋದಿ ಹೇಳಬಹುದೇ ಹೊರತು, ಕೊಲೆಗೆಡುಕರನ್ನು ರಕ್ಷಿಸಿ ಎಂದು ಯಾವಾಗಲೂ ಹೇಳುವುದಿಲ್ಲ” ಎಂದಿದ್ದಾರೆ.
ಉದಯಪುರದ ಟೇಲರ್ ಕನ್ನಯ್ಯಲಾಲ್ ಸಾಮಾಜಿಕ ಜಾಲತಾಣಗಳಲ್ಲಿ ನೂಪುರ್ ಶರ್ಮಾ ಬೆಂಬಲಿತ ಪೋಸ್ಟ್ ಇತ್ತು. ಅದು ಆತನ ಪುತ್ರ ಹಾಕಿದ್ದು ಎಂಬ ವದಂತಿಯೂ ಹರಡಿದೆ. ಸತ್ಯವೋ-ಸುಳ್ಳೋ ಗೊತ್ತಿಲ್ಲ ಅಂತಿಮವಾಗಿ ಕನ್ನಯ್ಯ ಲಾಲ್ ಜೀವ ಬಲಿಯಾಗಿದೆ. ಘಟನೆ ವಿರುದ್ಧ ಕರ್ನಾಟಕ ಸೇರಿ ದೇಶದ ವಿವಿಧ ಭಾಗಗಳಲ್ಲಿ ಈಗಾಗಲೇ ಪ್ರತಿಭಟನೆಯೂ ಪ್ರಾರಂಭವಾಗಿದ್ದು, ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ: ರಾಜಸ್ಥಾನ ಶಿರಚ್ಛೇದ; ಧರ್ಮದ ಹೆಸರಲ್ಲಿ ದೌರ್ಜನ್ಯ ಸಹಿಸಲಾಗದು ಎಂದ ರಾಹುಲ್ ಗಾಂಧಿ, ಓವೈಸಿ