Site icon Vistara News

KSGEA News | ಒಪಿಎಸ್‌ ಜಾರಿಗೆ ನೌಕರರ ಸಂಘದಿಂದಲೇ ಹೋರಾಟ: ಅಧ್ಯಕ್ಷ ಷಡಾಕ್ಷರಿ ಘೋಷಣೆ

Karnataka State Govt Employees News

ಬೆಂಗಳೂರು: 7ನೇ ವೇತನ ಆಯೋಗದ ಶಿಫಾರಸುಗಳನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿದ್ದಂತೆಯೇ, ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್)‌ ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆ (ಒಪಿಎಸ್‌) ಜಾರಿಗೆ ತರಬೇಕೆಂದು ಒತ್ತಾಯಿಸಿ ನಿರ್ಣಯಕ ಹೋರಾಟ ಕೈಗೆತ್ತಿಕೊಳ್ಳಲಾಗುವುದು (KSGEA News) ಎಂದು ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಹೇಳಿದ್ದಾರೆ.

ಬೆಂಗಳೂರಿನ ಕಬ್ಬನ್‌ ಉದ್ಯಾನದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಚೇರಿಯ ಆವರಣದಲ್ಲಿ ಸಂಘದ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಅದ್ಧೂರಿ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ಜನಪದ ಜಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಎನ್‌ಪಿಎಸ್‌ ರದ್ದಾಗಲೇ ಬೇಕು, ಒಪಿಎಸ್‌ ಜಾರಿಗೆ ಬರಲೇಬೇಕು. ಈ ಬೇಡಿಕೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದ ಅವರು ಮಾರ್ಚ್‌ನಲ್ಲಿ ಪೇ ಕಮಿಷನ್‌ ಜಾರಿಗೆ ಬರುತ್ತಿದ್ದಂತೆಯೇ ಇದಕ್ಕಾಗಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು. ಸರ್ಕಾರಿ ನೌಕರರ ಸಂಘವು ಪ್ರತಿಭಟನೆ, ಸರ್ಕಾರದೊಂದಿಗೆ ಮಾತುಕತೆಗಳ ಮೂಲಕ ಈ ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸಲಿದೆ. ಇದರಲ್ಲಿ ಅನುಮಾನವೇ ಬೇಡ ಎಂದು ಅವರು ಯುವ ನೌಕರರಿಗೆ ಭರವಸೆ ನೀಡಿದರು.

ಸರ್ಕಾರ ಪೇ ಕಮಿಷನ್‌ಗೆ ಹಣ ನೀಡಬೇಕಿದೆ. ಈಗಲೇ ಒತ್ತಡ ಹೇರಿದರೆ ಸುಮಾರು 40 ಸಾವಿರ ಕೋಟಿಯವರೆಗೆ ಹಣ ಬೇಕಾಗುತ್ತದೆ. ಹೀಗಾಗಿ ಪೇ ಕಮಿಷನ್‌ ಜಾರಿಯಾದ ನಂತರ ಏಪ್ರಿಲ್‌ನಿಂದ ನಿರ್ಣಯಕ ಹೋರಾಟ ಕೈಗೆತ್ತಿಕೊಳ್ಳಲು ಗಂಭೀರವಾಗಿ ತೀರ್ಮಾನಿಸಲಾಗಿದೆ ಎಂದು ಸಿ.ಎಸ್‌. ಷಡಾಕ್ಷರಿ ವಿವರಿಸಿದ್ದಾರೆ. ಈ ವರ್ಷ ವಾಣಿಜ್ಯ ತೆರಿಗೆ ಇಲಾಖೆಯು ಒಂದು ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹ ಮಾಡುವ ನಿರ್ಣಯ ಮಾಡಿದೆ. ಇದು ಸಾಧ್ಯವಾದಲ್ಲಿ ಪೇ ಕಮಿಷನ್‌ ಜಾರಿಗೆ ಸರ್ಕಾರಕ್ಕೆ ತೊಂದರೆಯಾಗದು ಎಂದರು.

ಚುನಾವಣೆಯ ಒಳಗೇ ವೇತನ ಆಯೋಗದ ಜಾರಿಯಾಗುತ್ತದೆ. ಈ ಕೆಲಸ ಮಾಡುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಇದನ್ನು ನಾವು ಮಾಡಿಯೇ ತೀರುತ್ತೇವೆ ಎಂದು ಹೇಳಿದ ಸಿ.ಎಸ್‌ ಷಡಾಕ್ಷರಿ, ನೌಕರರ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಸಂಘ ಕಾರ್ಯನಿರ್ವಹಿಸುತ್ತಿದೆ. ನೌಕರರ ಹಿತ ಕಾಪಾಡಲು ಪ್ರಮಾಣಿಕವಾಗಿ ನಾನು ಪ್ರಯತ್ನಿಸುತ್ತಿದ್ದೇನೆ. ಹೀಗಾಗಿಯೇ ಕಳೆದ ಎರಡೂವರೆ ವರ್ಷಗಳಲ್ಲಿ ನೌಕರರಿಗೆ ಸಂಬಂಧಿಸಿದ 25 ಆದೇಶಗಳು ಹೊರ ಬಿದ್ದಿವೆ. ಕಳೆದ 40 ವರ್ಷಗಳಲ್ಲಿ ಆಗದ ಕೆಲಸಗಳು ಈಗ ಆಗಿವೆ ಎಂದು ವಿವರಿಸಿದರು.

ಕೆಎಎಸ್‌/ಐಎಎಸ್‌ಗೆ ಉಚಿತ ತರಬೇತಿ
ಸರ್ಕಾರಿ ನೌಕರರ ಪ್ರತಿಭಾವಂತ 10 ಸಾವಿರ ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸವನ್ನು ನೌಕರರ ಸಂಘ ಪ್ರತಿ ವರ್ಷ ಮಾಡುತ್ತಿದೆ. ಮುಂದೆ ಕೆಎಎಸ್‌, ಐಎಎಸ್‌ಗೆ ಓದುವ ಮಕ್ಕಳಿಗೆ ಉಚಿತವಾಗಿ ತರಬೇತಿಯನ್ನೂ ಸಂಘದ ವತಿಯಿಂದ ಕೊಡಿಸಲಾಗುತ್ತದೆ. ಕೆಜಿಐಡಿ ಆನ್‌ಲೈನ್‌ ವ್ಯವಸ್ಥೆ ಈಗಾಗಲೇ ಸಿದ್ಧವಾಗಿದ್ದು, ಮುಂದಿನ ತಿಂಗಳು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ. ಬರುವ ಜನವರಿಯಿಂದ ನೌಕರರಿಗೆ ಮತ್ತು ಕುಟುಂಬದ ಸದಸ್ಯರಿಗೆ ನಗದು ರಹಿತ (ಕ್ಯಾಶ್‌ಲೆಸ್‌) ಆರೋಗ್ಯ ಸೇವೆ ಆರಂಭವಾಗಲಿದೆ ಎಂದು ಸಿ.ಎಸ್‌. ಷಡಾಕ್ಷರಿ ತಿಳಿಸಿದ್ದಾರೆ.

ಪ್ರತಿ ಜಿಲ್ಲೆಯಲ್ಲಿಯೂ ಜಾನಪದ ಜಾತ್ರೆ
ಈ ನಾಡಿನ ಜೀವ ಧ್ವನಿ ಜಾನಪದ. ಇದು ಎಲ್ಲೆಡೆ ಮೊಳಗುತ್ತಿರಬೇಕು. ಹೀಗಾಗಿ ರಾಜ್ಯ ಸರ್ಕಾರಿ ನೌಕರರ ಸಂಘವು ಪ್ರತಿ ಜಿಲ್ಲೆಯಲ್ಲಿಯೂ ತಿಂಗಳಿಗೊಮ್ಮೆ ಜಾನಪದ ಜಾತ್ರೆಯನ್ನು ಆಯೋಜಿಸಲು ಉದ್ದೇಶಿಸಿದೆ ಎಂದು ಷಡಾಕ್ಷರಿ ಪ್ರಕಟಿಸಿದರು.

ರಾಜ್ಯೋತ್ಸವ ಎಂದರೆ ಕೇವಲ ಭಾಷೆಗೆ ಸೀಮಿತವಾದ ಉತ್ಸವವಲ್ಲ. ನಾಡಿನ ಗ್ರಾಮೀಣ ಕಲೆಗಳನ್ನೂ ಉಳಿಸಿ ಬೆಳೆಸಬೇಕಾಗಿದೆ. ಹೀಗಾಗಿಯೇ ಈ ಬಾರಿ ಸಂಘ ರಾಜ್ಯೋತ್ಸವವನ್ನು ಕನ್ನಡ ಜಾನಪದ ಜಾತ್ರೆಯಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದ ಅವರು, ನೌಕರರು ಸದಾ ಒತ್ತಡದಿಂದ ಕೆಲಸ ಮಾಡುತ್ತಿದ್ದಾರೆ. ಅವರ ಒತ್ತಡದ ನಿವಾರಣೆಗೂ ಇದು ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮವನ್ನು ಖ್ಯಾತ ವಾಗ್ಮಿ ಪ್ರೊ. ಎಂ. ಕೃಷ್ಣೇಗೌಡ ಉದ್ಘಾಟಿಸಿ ಮಾತನಾಡಿದರು. ಜಗತ್ತಿನ ಶ್ರೇಷ್ಠ 30 ಭಾಷೆಗಳಲ್ಲಿ ಕನ್ನಡವೂ ಒಂದು ಎಂದು ಅಮೆರಿಕದ ಡಲ್ಲಾಸ್‌ನಲ್ಲಿರುವ ಭಾಷಾ ಸಂಸ್ಥೆಯೊಂದು ಪಟ್ಟಿ ಮಾಡಿದೆ. ಇದಕ್ಕಿಂತ ಹೆಮ್ಮೆ ಬೇರೊಂದಿಲ್ಲ ಎಂದರು.

ಜನಪದ ನೃತ್ಯ ಸ್ಪರ್ಧೆ
ಸಂಘವು ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಸರ್ಕಾರಿ ನೌಕರರಿಗೆ ಗುಂಪು ಜಾನಪದ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಿತ್ತು. ಸುಮಾರು 20 ಇಲಾಖೆಯ ನೌಕರರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿತೇತ ತಂಡಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ್‌, ವೆಂಕಟೇಶಯ್ಯ, ಮೋಹನ್‌ ಕುಮಾರ್‌, ಮಲ್ಲಿಕಾರ್ಜುನ್‌ ಬಳ್ಳಾರಿ, ರುದ್ರಪ್ಪ, ಸದಾನಂದ್‌, ಸಿದ್ದೇಶ್‌ ಸೇರಿದಂತೆ, ಜಿಲ್ಲಾಧ್ಯಕ್ಷರು, ರಾಜ್ಯ ಪರಿಷತ್‌ ಸದಸ್ಯರು ಮತ್ತು ಬೆಂಗಳೂರು ನಗರದ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರು ಭಾಗವಹಿಸಿದ್ದರು.

ಜಾನಪದ ಕಲಾವಿದ ಡಾ.ವೇಮಗಲ್‌ ನಾರಾಯಣಸ್ವಾಮಿ, ಗಾಯಕ ಕೆ. ಯುವರಾಜ್‌ ಸೇರಿದಂತೆ ಅನೇಕ ಕಲಾವಿದರು ಜಾನಪದ ಗೀತೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಇದನ್ನೂ ಓದಿ | ನೌಕರ ಮಿತ್ರ | ಸರ್ಕಾರಿ ನೌಕರ ತಂದೆ-ತಾಯಿ ನಿಧನರಾಗಿದ್ದಾರೆ; ಅನುಕಂಪದ ಆಧಾರದ ಮೇಲೆ ನೌಕರಿ ಸಿಗುತ್ತದೆಯೇ?

Exit mobile version